ಬೆಂಗಳೂರು [ಮಾ.14]:  ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸಾಮಾನ್ಯ ಜ್ವರ ಹಾಗೂ ನೆಗಡಿಗೂ ಆತಂಕ ಪಡುವಂತಾಗಿದ್ದು, ದಿನನಿತ್ಯ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಗೆ ಸೋಂಕು ಪರೀಕ್ಷೆಗೆ ಧಾವಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಸೋಂಕಿತರಿಗೆ ಪರೀಕ್ಷೆ ಹಾಗೂ ಚಿಕಿತ್ಸೆಗೆ ತೊಂದರೆಯಾಗುತ್ತಿದೆ ಎಂದು ರಾಜೀವ್‌ಗಾಂಧಿ ಆಸ್ಪತ್ರೆ ವೈದ್ಯರು ಅಳಲು ತೋಡಿಕೊಂಡಿದ್ದಾರೆ.

ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಗೆ ನಿತ್ಯ 50-60 ಮಂದಿ ಆಗಮಿಸಿ ತಮಗೂ ಕೊರೋನಾ ಸೋಂಕು ತಗುಲಿರುವ ಸಾಧ್ಯತೆ ಇದೆ ದಯವಿಟ್ಟು ಪರೀಕ್ಷಿಸಿ ಎಂದು ದುಂಬಾಲು ಬೀಳುತ್ತಿದ್ದಾರೆ. ಈ ವೇಳೆ ಸೋಂಕು ಬಾಧಿತ ವಿದೇಶಗಳ ಪ್ರಯಾಣದ ಹಿನ್ನೆಲೆ ಹೊಂದಿರುವವರು ಅಥವಾ ಅಂತಹವರ ಸಂಪರ್ಕಕ್ಕೆ ಬಂದವರಿಗೆ ಮಾತ್ರ ಪರೀಕ್ಷಿಸಲಾಗುತ್ತಿದೆ. ಸಾಧಾರಣ ಜ್ವರ, ನೆಗಡಿ ಬಂದವರಿಗೂ ಪರೀಕ್ಷೆ ಮಾಡುವ ಅಗತ್ಯವಿಲ್ಲ ಎಂದು ಮನವರಿಕೆ ಮಾಡಿಕೊಡುತ್ತಿದ್ದೇವೆ. ಆದರೆ, ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಟೆಕ್ಕಿಗಳು ಜಾಸ್ತಿ ಮಂದಿ ಇದ್ದಾರೆ. ಹೀಗಾಗಿ ಪರೀಕ್ಷೆ ಮಾಡಿ ಎಂದು ಕೇಳಿಕೊಳ್ಳುತ್ತಾರೆ ಎಂದು ತಿಳಿಸಿದರು.

ಪರೀಕ್ಷೆಗೆ ಬರುತ್ತಿರುವವರು ಯಾರು?

ಜ್ವರ, ನೆಗಡಿ ಹೊಂದಿರುವವರು ವಿಮಾನ ನಿಲ್ದಾಣದ ಕ್ಯಾಬ್‌ ಚಾಲಕರು, ಆಟೋ ಚಾಲಕರು, ಐಟಿ-ಬಿಟಿ ಕಂಪೆನಿ ಉದ್ಯೋಗಿಗಳು, ಉತ್ತರ ಭಾರತ, ಈಶಾನ್ಯ ಭಾರತ, ಕೇರಳ ಪ್ರವಾಸ ಹೋದವರು ಇಂಟರ್‌ನ್ಯಾಷನಲ್‌ ಶಾಲೆಗಳ ಮಕ್ಕಳು ಪೋಷಕರು, ಮೂರ್ನಾಲ್ಕು ತಿಂಗಳ ಹಿಂದೆ ವಿದೇಶ ಪ್ರವಾಸ ಕೈಗೊಂಡವರೂ ಸಹ ರಾಜೀವ್‌ಗಾಂಧಿ ಆಸ್ಪತ್ರೆಯ ಕೊರೋನಾ ಚಿಕಿತ್ಸಾ ಕೇಂದ್ರಕ್ಕೆ ಬಂದು ರಕ್ತ ಪರೀಕ್ಷೆಗೆ ಮನವಿ ಮಾಡುತ್ತಿದ್ದಾರೆ. ಆತಂಕಕ್ಕೆ ಒಳಗಾದವರನ್ನು ನಿಭಾಯಿಸುವುದೇ ಸವಾಲಾಗಿದೆ ಎಂದು ವೈದ್ಯಕೀಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು

ಒಂದು ವಾರ ಸರ್ಕಾರಿ ರಜೆ : ಊರಿಗೆ ಹೊರಟವರಿಂದ ಫುಲ್ ಜಾಂ...

ಖಾಸಗಿ ಆಸ್ಪತ್ರೆಗಳಿಂದಲೇ ಪರೀಕ್ಷೆಗೆ ಸೂಚನೆ:

ನಗರದ ಖಾಸಗಿ ಆಸ್ಪತ್ರೆಗಳ ವೈದ್ಯರೇ ಕೊರೋನಾ ಪರೀಕ್ಷೆಗೆ ಶಿಫಾರಸು ಮಾಡುತ್ತಿದ್ದಾರೆ. ಆತಂಕಕ್ಕೆ ಒಳಗಾಗಿ ಬರುತ್ತಿರುವವರ ಪೈಕಿ ಅನೇಕರು ತಮ್ಮ ಬಳಿ ಖಾಸಗಿ ಆಸ್ಪತ್ರೆ ವೈದ್ಯರು ಕೊರೋನಾ ಪರೀಕ್ಷೆಗೆ ಸೂಚಿಸಿರುವ ದಾಖಲೆಯೊಂದಿಗೆ ಬರುತ್ತಿದ್ದಾರೆ. ಆದರೆ ಇವರಾರ‍ಯರೂ ಸಹ ವಿದೇಶ ಪ್ರವಾಸ ಕೈಗೊಂಡವರಲ್ಲ. ಇವರಿಗೆ ಪರೀಕ್ಷೆ ತಿರಸ್ಕರಿಸಿದರೆ ಜೀವದ ಜೊತೆ ಚೆಲ್ಲಾಟ ಆಡಬೇಡಿ ಎಂದು ರೋಗಿಗಳು ನಮ್ಮ ಮೇಲೆ ಮುಗಿ ಬೀಳುತ್ತಿದ್ದಾರೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ವೈದ್ಯರಿಗೂ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಸಿಬ್ಬಂದಿ ಒತ್ತಾಯಿಸುತ್ತಾರೆ.