Asianet Suvarna News Asianet Suvarna News

ಶಿರಹಟ್ಟಿ: ರಸ್ತೆ ಪಕ್ಕದಲ್ಲೇ ಶವ ಸಂಸ್ಕಾರ, ಜನರ ಸಂಚಾರಕ್ಕೆ ಪರದಾಟ

* ಪರಸಾಪುರದಲ್ಲಿ ಶವಸಂಸ್ಕಾರಕ್ಕೆ ರುದ್ರಭೂಮಿಯೇ ಇಲ್ಲ
* ಲಿಖಿತ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು 
* ರುದ್ರಭೂಮಿ ವ್ಯವಸ್ಥೆ ಮಾಡಿಕೊಡದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ 
 

People Faces Problems for Not Have Cemetery at Shirahatti in Haveri grg
Author
Bengaluru, First Published May 26, 2021, 10:13 AM IST

ಶಿರಹಟ್ಟಿ(ಮೇ.26): ತಾಲೂಕಿನ ಮಾಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಸಾಪುರದಲ್ಲಿ ಶವ ಸಂಸ್ಕಾರಕ್ಕೆ ರುದ್ರಭೂಮಿಯೇ ಇಲ್ಲ. ಹೀಗಾಗಿ ರಸ್ತೆ ಪಕ್ಕದಲ್ಲಿಯೇ ಅಂತ್ಯ ಸಂಸ್ಕಾರ ಮಾಡುವ ಅನಿವಾರ್ಯತೆ ಎದುರಾಗಿದೆ.

1000 ಜನಸಂಖ್ಯೆ ಹೊಂದಿರುವ ಪರಸಾಪುರದಲ್ಲಿ ಸ್ವಂತ ಜಮೀನು ಇದ್ದವರು ತಮ್ಮ ಹೊಲದಲ್ಲಿ ಶವ ಸಂಸ್ಕಾರ ಮಾಡಿಕೊಳ್ಳುತ್ತಿದ್ದು, ಹೊಲ ಇಲ್ಲದವರಿಗೆ ಶವ ಹೂಳಲು ಜಾಗವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರೆಲ್ಲರೂ ಸೇರಿ ಲಿಖಿತ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದಿರುವುದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಮಂಗಳವಾರ ಗ್ರಾಮದ 115  ವರ್ಷದ ಬಸಪ್ಪ ಹಡಪದ ಎಂಬವರು ನಿಧನರಾದರು. ಇವರ ಶವ ಸಂಸ್ಕಾರಕ್ಕೆ ಸ್ವಂತ ಜಮೀನು ಇಲ್ಲದೇ ರಸ್ತೆ ಪಕ್ಕದಲ್ಲಿಯೇ ಮಾಡಲಾಗಿದೆ. ಕೆಲ ಸಮಯ ಸಂಚಾರಕ್ಕೆ ತೊಂದರೆಯಾಗಿ ವಾಹನ ಓಡಾಟ ಕೂಡ ಬಂದ್‌ ಆಗಿತ್ತು. ಗದ್ದಲದ ವಾತಾವರಣ ನಿರ್ಮಾಣವಾಗಿ ರುದ್ರಭೂಮಿ ವ್ಯವಸ್ಥೆ ಮಾಡಿಕೊಡದ ಆಡಳಿತ ವ್ಯವಸ್ಥೆ ಮತ್ತು ಅಧಿಕಾರಿಗಳ ಕ್ರಮಕ್ಕೆ ಮಹಿಳೆಯರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ರಭಸದ ಮಳೆಗೆ ರಸ್ತೆ ಪಕ್ಕದಲ್ಲಿಯೂ ಮಳೆ ನೀರು ನಿಂತು ಹೆಣ ಸುಡಲು ಆಗುತ್ತಿಲ್ಲ. ಗ್ರಾಮದಲ್ಲಿ 2010ರ ನ. 8ರಂದು ನಡೆದ ಜನಸ್ಪಂದನ ಸಭೆಯಲ್ಲಿ ಅಧಿಕಾರಿಗಳಿಗೆ ಲಿಖಿತ ಮನವಿ ಮಾಡಿದ್ದರೂ ರುದ್ರಭೂಮಿ ವ್ಯವಸ್ಥೆ ಮಾಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು.

ಗದಗ: ಕೊರೋನಾದಿಂದ ಗುಣಮುಖರಾದ ಶಿಕ್ಷಕ ಆತ್ಮಹತ್ಯೆ

2011ರ ಮೇ 28ರಂದು ತಾಲೂಕಿನ ಯತ್ತಿನಹಳ್ಳಿ ಗ್ರಾಮಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭೇಟಿ ನೀಡಿದಾಗ ಪರಸಾಪುರ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಭೂಮಿ ಒದಗಿಸುವಂತೆ ಗ್ರಾಪಂ ಹಾಗೂ ಕನಕದಾಸ ಯುವಕ ಮಂಡಳದಿಂದ ಮನವಿ ಸಲ್ಲಿಸಿದ್ದು, ನಾಲ್ಕಾರು ತಿಂಗಳೊಳಗಾಗಿ ರುದ್ರಭೂಮಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಅವರ ಸೂಚನೆ ಆದೇಶಕ್ಕೂ ಬೆಲೆ ಸಿಕ್ಕಿಲ್ಲ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಜೋಗಿ ತಿಳಿಸಿದ್ದಾರೆ.

ಗ್ರಾಮದಲ್ಲಿ ಸ್ವಂತ ಜಮೀನು ಹೊಂದಿರದವರು ಯಾರೇ ನಿಧನ ಹೊಂದಿದರೂ ಶವ ಸಂಸ್ಕಾರಕ್ಕೆ ಕಿರಿ ಕಿರಿ ಆಗುತ್ತಿದೆ. ಮೇಲಾಗಿ ಗ್ರಾಮದ ಪ್ರಮುಖ ರಸ್ತೆಗೆ ಹೊಂದಿಕೊಂಡು ಅಂತ್ಯ ಸಂಸ್ಕಾರ ಮಾಡುತ್ತಿದ್ದು, ಜನ ಮತ್ತು ಸಾರಿಗೆ ಸಂಚಾರಕ್ಕೂ ತೀವ್ರ ತೊಂದರೆಯಾಗುತ್ತಿದೆ. ಶಾಲಾ ಮಕ್ಕಳು, ಹೊಲಕ್ಕೆ ಹೋಗಿ ಬರುವ ಮಹಿಳೆಯರು ಸಂಚರಿಸಲು ಭಯ ಪಡುವಂತಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. 
 

Follow Us:
Download App:
  • android
  • ios