ಚಂದ್ರು ಕೊಂಚಿಗೇರಿ

ಹೂವಿನಹಡಗಲಿ(ಆ.17): ಸಿಂಗಟಾಲೂರು ಏತ ನೀರಾವರಿ ಹಿನ್ನೀರಿನಲ್ಲಿ ಸ್ಮಶಾನ ಮುಳುಗಡೆಯಾಗಿದ್ದು, ಹೆಣ ಹೂಳಲು ಜನ ಹೈರಾಣಾಗಿದ್ದಾರೆ. ರಸ್ತೆಯೇ ಮಸಣವಾಗಿ ಮಾರ್ಪಟ್ಟಿದೆ.

ಹೌದು, ತಾಲೂಕಿನ ತುಂಗಭದ್ರಾ ನದಿ ತೀರದ ಮಾಗಳ ಬಳ್ಳಾರಿ ಜಿಲ್ಲೆಯಲ್ಲೇ 2ನೇ ಅತಿ ದೊಡ್ಡ ಕಂದಾಯ ಗ್ರಾಮವಾಗಿದ್ದು, 10 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಿದೆ. ಇತರೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಈ ಗ್ರಾಮಕ್ಕೆ ಸ್ಮಶಾನ ಮಾತ್ರ ಇಲ್ಲ.

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಮಾಗಳ ಕಂದಾಯ ಗ್ರಾಮಕ್ಕೆ ಸೇರಿದ್ದ 506.70 ಸೆಂಟ್ಸ್‌ ಪಟ್ಟಾಜಮೀನು, 48.18 ಸರ್ಕಾರಿ ಜಮೀನು ಸೇರಿದಂತೆ ಒಟ್ಟು 554.88 ಸೆಂಟ್ಸ್‌ ಜಮೀನು ನೀರಿನಲ್ಲಿ ಮುಳುಗಡೆಯಾಗಿದೆ. ನದಿ ತೀರಕ್ಕೆ ಹೊಂದಿಕೊಂಡಿರುವ ಜನ ವಸತಿ ರಹಿತ ರಂಗಾಪುರ ಕಂದಾಯ ಗ್ರಾಮಕ್ಕೆ ಸೇರಿದ್ದ 382.77 ಸೆಂಟ್ಸ್‌ ಜಮೀನು, 87.99 ಸೆಂಟ್ಸ್‌ ಸರ್ಕಾರಿ ಭೂಮಿ ಸೇರಿ ಒಟ್ಟು 470.76 ಸೆಂಟ್ಸ್‌ ಜಮೀನು ಮುಳುಗಡೆಯಾಗಿದೆ. ಸುಮಾರು 1025.64 ಸೆಂಟ್ಸ್‌ನಷ್ಟು ಎಕರೆ ಭೂಮಿ ಮುಳುಗಡೆಯಾಗಿದೆ.

2021ರಲ್ಲಿ ವಿಜಯನಗರ ಜಿಲ್ಲೆ ಖಚಿತ: ಸಚಿವ ಆನಂದ್‌ ಸಿಂಗ್‌

ಈಗಾಗಲೇ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾದ ಜಮೀನುಗಳ ರೈತರಿಗೆ ಎಕರೆಯೊಂದಕ್ಕೆ 2,23,300 ಗಳಂತೆ ಪರಿಹಾರ ನೀಡಲಾಗಿದೆ. ಮುಳುಗಡೆಯ ಸಂದರ್ಭದಲ್ಲಿ ಕಂದಾಯ, ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಂಜಿನಿಯರ್‌, ಭೂಮಾಪನಾ ಇಲಾಖೆ ಸಿಬ್ಬಂದಿ ಸೇರಿದಂತೆ ಜಂಟಿ ಸರ್ವೇ ಕಾರ್ಯ ಮಾಡಿದ್ದಾರೆ. ಆ ಸಂದರ್ಭದಲ್ಲಿ ಮಾಗಳ ಗ್ರಾಮದ ಸ್ಮಶಾನ ಮುಳುಗಡೆಯಾಗಿರುವ ಕುರಿತು ಇಲಾಖೆಯಲ್ಲಿ ದಾಖಲು ಮಾಡಿಲ್ಲ. ಇದರಿಂದ ಈವರೆಗೂ ಮಾಗಳ ಗ್ರಾಮಕ್ಕೆ ಸ್ಮಶಾನ ಮುಳುಗಡೆಯಾಗಿದ್ದರೂ, ಬೇರೆಡೆಗೆ ಹೆಣಗಳನ್ನು ಹೂಳಲು ಹಾಗೂ ಸುಡಲು ಸಿಂಗಟಾಲೂರು ಏತ ನೀರಾವರಿ ಯೋಜನೆಯ ಪುನರ್‌ ವಸತಿ ಮತ್ತು ಪುನರ್‌ ನಿರ್ಮಾಣ ಇಲಾಖೆ ಭೂಮಿ ಗುರುತಿಸಿಲ್ಲ. ಇದರಿಂದ ನದಿಗೆ ಹೋಗುವ ದಾರಿ ಬದಿಯಲ್ಲಿ ಹೆಣಗಳನ್ನು ಹೂಳುವುದು ಹಾಗೂ ಸುಡುವಂತಾಗಿದೆ.

ಮಾಗಳ ಗ್ರಾಮದ 874 ಸರ್ವೇ ನಂಬರಿನ 140 ಎಕರೆ ಸರ್ಕಾರಿ ಜಮೀನಿನಲ್ಲಿ ವೀರಶೈವ ಜನಾಂಗದವರಿಗೆ ಶವ ಸಂಸ್ಕಾರಕ್ಕಾಗಿ 1.20 ಸೆಂಟ್ಸ್‌ ಜಮೀನನ್ನು 2005-06ರಲ್ಲಿ ಕಾಯ್ದಿರಿಸಲಾಗಿತ್ತು. ಮುಳುಗಡೆ ಜಮೀನು ಸರ್ವೇ ಮಾಡುವ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ವೀರಶೈವ ಜನಾಂಗಕ್ಕೆ ಸೇರಿದ್ದ ಸ್ಮಶಾನ ಮುಳುಗಡೆಯಾಗಿದೆ ಎಂದು ದಾಖಲು ಕೂಡಾ ಮಾಡಿಲ್ಲ. ಜತೆಗೆ 1.20 ಸೆಂಟ್ಸ್‌ ಜಮೀನಿಗೆ ಪರಿಹಾರವೂ ಇಲ್ಲ ಸ್ಮಶಾನಕ್ಕಾಗಿ ಭೂಮಿಯೂ ನೀಡಿಲ್ಲ.

ಗ್ರಾಮದಲ್ಲಿ ಇತರೆ ಹತ್ತಾರು ಜಾತಿ ಜನಾಂಗಗಳ ಹೆಣಗಳನ್ನು ಹೂಳಲು ಹಾಗೂ ಸುಡಲು ಸ್ಮಶಾನವೇ ಇಲ್ಲದಂತಾಗಿದೆ. ಅವರೂ ದಾರಿ ಮಧ್ಯದಲ್ಲೇ ಹೆಣಗಳನ್ನು ಸುಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಪ್ರತಿ ಗ್ರಾಮಕ್ಕೂ ಸ್ಮಶಾನ ನೀಡಬೇಕೆಂಬ ನಿಯಮವಿದ್ದರೂ ಈವರೆಗೂ ಸ್ಮಶಾನಕ್ಕಾಗಿ ಭೂಮಿ ನಿಗದಿಪಡಿಸಿಲ್ಲ ಎಂಬುದು ಗ್ರಾಮಸ್ಥರ ದೂರು.

ಹಿಂದಿನ ಕಾಲದಿಂದಲ್ಲೂ ಗ್ರಾಮದ ಸರ್ವ ಜನಾಂಗದವರು ನದಿ ತೀರದಲ್ಲೇ ಹೆಣಗಳನ್ನು ಹೂಳುವುದು, ಸುಡಲು ಬಳಕೆ ಮಾಡುತ್ತಿದ್ದೆವು. ಆದರೆ, ಹಿನ್ನೀರಿನಲ್ಲಿ ಸ್ಮಶಾನ ಮುಳುಗಡೆಯಾಗಿರುವ ಕಾರಣ ರಸ್ತೆ ಬದಿಯಲ್ಲೇ ಶವಗಳನ್ನು ಹೂಳುವ ಪರಿಸ್ಥಿತಿ ಬಂದಿದೆ. ಈ ಕೂಡಲೇ ಸರ್ಕಾರ ಗ್ರಾಮಕ್ಕೆ ಸ್ಮಶಾನ ನೀಡಬೇಕೆಂದು ಮಾಗಳ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

ಹೆಣಗಳನ್ನು ರಸ್ತೆ ಬದಿಯಲ್ಲಿ ಸುಡುವುದು ಹಾಗೂ ಹೂಳುವುದು ಸರಿಯಲ್ಲ. ಮಾಗಳ ಗ್ರಾಮಕ್ಕೆ ಸ್ಮಶಾನ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಈ ಗ್ರಾಮದ ಸ್ಮಶಾನ ಮುಳುಗಡೆಯಾಗಿರುವ ಬಗ್ಗೆ ಮಾಹಿತಿ ಬಂದಿಲ್ಲ. ಈ ಕುರಿತು ಕ್ರಮ ಕೈಗೊಳ್ಳುತ್ತೇವೆ ಎಂದು ಹೂವಿನಹಡಗಲಿ ತಹಸೀಲ್ದಾರ್‌ ಕೆ. ವಿಜಯಕುಮಾರ ಅವರು ತಿಳಿಸಿದ್ದಾರೆ.