Asianet Suvarna News Asianet Suvarna News

ಈ ಗ್ರಾಮಸ್ಥರಿಗೆ ಹಳ್ಳದ ದಂಡೆಯೇ ರುದ್ರಭೂಮಿ: ಶವಸಂಸ್ಕಾರಕ್ಕೆ ಪರದಾಟ..!

ಸ್ಮಶಾನವಿಲ್ಲದೇ ಶವಸಂಸ್ಕಾರಕ್ಕೆ ಪರದಾಡುತ್ತಿರುವ ಜನತೆ| ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತೆಗ್ಗಿನ ಭಾವನೂರ ಗ್ರಾಮ| ಗ್ರಾಮಸ್ಥರೆಲ್ಲರೂ ಸೇರಿ ಲಿಖಿತ ಮನವಿ ಸಲ್ಲಿಸಿದರೂ ಕ್ರಮಕ್ಕೆ ಮುಂದಾಗದ ಕಂದಾಯ ಇಲಾಖೆ ಅಧಿಕಾರಿಗಳು| 

People Faces Problems for no Cemetery in Gadag District grg
Author
Bengaluru, First Published Feb 4, 2021, 10:36 AM IST

ಮಹದೇವಪ್ಪ ಎಂ. ಸ್ವಾಮಿ

ಶಿರಹಟ್ಟಿ(ಫೆ.04):  ತಾಲೂಕಿನ ಮಾಚೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಗ್ಗಿನ ಭಾವನೂರ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ರುದ್ರಭೂಮಿಯಿಲ್ಲದೆ ರಸ್ತೆಬದಿ ಇಲ್ಲವೇ ಹಳ್ಳದ ಪಕ್ಕದಲ್ಲಿಯೇ ಅಂತ್ಯಸಂಸ್ಕಾರ ಮಾಡುವ ಅನಿವಾರ್ಯತೆ ಎದುರಾಗಿದೆ. ಹತ್ತಾರು ವರ್ಷಗಳಿಂದ ಈ ಸಮಸ್ಯೆಯಿದ್ದರೂ ಬಗೆಹರಿದಿಲ್ಲ.

ಸುಮಾರು 1400 ಜನಸಂಖ್ಯೆ ಹೊಂದಿದ ತೆಗ್ಗಿನ ಭಾವನೂರ ಗ್ರಾಮದಲ್ಲಿ ಸ್ವಂತ ಜಮೀನು ಇದ್ದವರು ತಮ್ಮ ಹೊಲದಲ್ಲಿ ಶವಸಂಸ್ಕಾರ ಮಾಡಿಕೊಳ್ಳುತ್ತಾರೆ. ಆದರೆ ಹೊಲ ಇಲ್ಲದವರಿಗೆ ಶವ ಹೂಳಲು ಜಾಗವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರೆಲ್ಲರೂ ಸೇರಿ ಲಿಖಿತ ಮನವಿ ಸಲ್ಲಿಸಿದರೂ ಕ್ರಮಕ್ಕೆ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಅಳಲು. ಕಳೆದ ತಿಂಗಳು ಸುರಿದ ಅಕಾಲಿಕ ಮಳೆಗೆ ಹಳ್ಳದಲ್ಲಿ ನೀರು ತುಂಬಿ ಹರಿಯುತ್ತಿದ್ದು, ಗ್ರಾಮದಲ್ಲಿ ಯಾರಾದರೂ ನಿಧನರಾದರೆ ಅಂತ್ಯಸಂಸ್ಕಾರ ಎಲ್ಲಿ ನೆರವೇರಿಸಬೇಕು ಎಂಬ ಚಿಂತೆ ಎದುರಾಗಿದೆ.

ಸರ್ಕಾರದ ಆದೇಶದ ಮೇರೆಗೆ ಇತ್ತೀಚೆಗೆ ಜಿಲ್ಲಾಧಿಕಾರಿಗಳೇ ರುದ್ರಭೂಮಿಗೆ ಅಗತ್ಯವಿರುವ ಜಾಗವನ್ನು ಹುಡುಕಿ ಪ್ರಸ್ತಾವಕ್ಕೆ ಅಂತಿಮ ಅನುಮೋದನೆ ನೀಡಲು ತಹಸೀಲ್ದಾರರಿಗೆ ಸೂಚನೆ ನೀಡಿರುವ ಮಾಹಿತಿ ಇದ್ದು, ಗ್ರಾಮ ಮಟ್ಟದ ಅಧಿಕಾರಿಗಳಿಂದ ಹಿಡಿದು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳ ತನಕ ಗ್ರಾಮಸ್ಥರ ಮನವಿಗೆ ಪುರಸ್ಕಾರವೇ ಸಿಕ್ಕಿಲ್ಲ.

ಗದಗ: ತೆಲಂಗಾಣದ 28 ಜೀತ ಕಾರ್ಮಿಕರ ರಕ್ಷಣೆ

ಸರ್ಕಾರ, ತಾಲೂಕು ಮತ್ತು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳಿಗೆ ಸುಮಾರು ವರ್ಷಗಳಿಂದ ಲಿಖಿತ ಮನವಿ ಸಲ್ಲಿಸುತ್ತಲೇ ಬಂದಿದ್ದು, ಯಾವೊಬ್ಬ ಅಧಿಕಾರಿಗಳು ನಮ್ಮ ಗ್ರಾಮದತ್ತ ತಿರುಗಿ ನೋಡಿಲ್ಲ. ಗ್ರಾಮದಲ್ಲಿ ರುದ್ರಭೂಮಿಗೆ ಜಮೀನು ಕೊಡಲು ರೈತರು ಮುಂದೆ ಬಂದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ತಹಸೀಲ್ದಾರರನ್ನು ಕೇಳಿದರೆ ಜಿಲ್ಲಾಧಿಕಾರಿಗಳಿಗೆ ನಿಮ್ಮ ಅರ್ಜಿಯನ್ನು ಕಳಿಸಿಕೊಟ್ಟಿದೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಜಮೀನು ಕೊಡಲು ಮುಂದೆ ಬಂದರೂ ಅಧಿಕಾರಿಗಳು ದರ ನಿಗದಿಪಡಿಸಿ ರೈತರ ಮನವೊಲಿಸುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ವೆಂಕನಗೌಡ ಪಾಟೀಲ ಹೇಳುತ್ತಾರೆ.

ಗ್ರಾಮಸ್ಥರು ನೀಡಿದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಡಲಾಗಿದೆ. ಅನುದಾನಕ್ಕಾಗಿ ಕಾಯುತ್ತಿದ್ದು, ಅನುದಾನ ಬಂದ ಕೂಡಲೇ ಸರ್ಕಾರ ನಿಗದಿಪಡಿಸಿ ದರಕ್ಕೆ ಜಮೀನು ಖರೀದಿಸಿ ರುದ್ರಭೂಮಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಹಸೀಲ್ದಾರ್‌ಯಲ್ಲಪ್ಪ ಗೋಣೆಣ್ಣನವರ ತಿಳಿಸಿದ್ದಾರೆ. 

ಸಧ್ಯ ಹಳ್ಳ ತುಂಬಿ ಹರಿಯುತ್ತಿದ್ದು, ಹಳ್ಳದ ದಂಡೆ ಮೇಲೆ ಶವಸಂಸ್ಕಾರಕ್ಕೂ ತೀವ್ರ ತೊಂದರೆಯಾಗಿದೆ. ಸ್ವಂತ ಜಮೀನು ಉಳ್ಳವರು ಶವಸಂಸ್ಕರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಘಟನೆ ಗ್ರಾಮದಲ್ಲಿ ನಡೆಯುತ್ತಿದೆ. ಗಂಟೆಗಟ್ಟಲೇ ಶವ ಹೊತ್ತುಕೊಂಡು ನಿಲ್ಲುವ ಅನಿವಾರ್ಯತೆ ಎದುರಗಿದ್ದು, ಅಧಿಕಾರಿಗಳು ಎಚ್ಚೆತ್ತು ತುರ್ತು ಶವಸಂಸ್ಕಾರಕ್ಕೆ ವ್ಯವಸ್ಥೆ ಕಲ್ಪಿಸಿ ಕೊಡದೇ ಇದ್ದಲ್ಲಿ ಶವದೊಂದಿಗೆ ತಹಸೀಲ್ದಾರ್‌ ಕಾರ್ಯಾಲಯದೆದುರು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮದ ಮುಖಂಡ ಖಾದರಸಾಬ ಕೋಟಿಹಾಳ ಹೇಳಿದ್ದಾರೆ. 
 

Follow Us:
Download App:
  • android
  • ios