ಸಿದ್ದಲಿಂಗ ಕಿಣಗಿ 

ಸಿಂದಗಿ(ಜ.20): ಹಲವು ವರ್ಷಗಳಿಂದ ಗ್ರಾಮವೊಂದರ ಜನ ಮೂಲ ಸೌಕರ‍್ಯಗಳಿಲ್ಲದೇ ವಿವಿಧ ಸ್ಥಳಗಳಿಗೆ ವಲಸೆ ಹೋಗಿ ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರ ಮೂಲ ಸೌಕರ್ಯ ನೀಡುವ ಮೂಲಕ ಗ್ರಾಮ ಪುನರ್‌ ನಿರ್ಮಾಣಕ್ಕೆ ಮುಂದಾಗಬೇಕು. ಹಾಳು ಬಿದ್ದು ಜಾಗ ಉಳ್ಳವರ ಪಾಲಾಗುವ ಮುನ್ನ ಅಭಿವೃದ್ಧಿ ಪಡಿಸಬೇಕು ಎಂದು ಸುಮಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಿಕ್ಕಣಗುತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳೆಯ ರುಕಮಾಪುರ ಎಂಬ ಗ್ರಾಮವನ್ನು ಪುನರ್‌ ನಿರ್ಮಾಣ ಮಾಡಬೇಕಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸುಮಾರು ವರ್ಷಗಳಿಂದಲೂ ತಾಲೂಕಿನ ಹಿಕ್ಕಣಗುತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳೆಯ ರುಕಮಾಪುರ ಎಂಬ ಗ್ರಾಮದಲ್ಲಿ ಮೊದಲು ಜನ ವಸತಿ ಇತ್ತು. ಆದರೆ, ಕಾಲ ಕಳೆದ ಹಾಗೆ ಅಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನ ಬೇಸತ್ತು ಅನೇಕ ವರ್ಷಗಳ ಹಿಂದೆಯೆ ಸುಮಾರು 7.5 ಎಕರೆ ಪ್ರದೇಶದ ಹಳೆಯ ರುಕಮಾಪುರ ಗ್ರಾಮವನ್ನು ತೊರೆದು ಸಮೀಪದ ಹಿಕ್ಕಣಗುತ್ತಿ, ಆಲಮೇಲ, ಚಾಂದಕವಟೆ, ಗಣಿಹಾರ, ಬಳಗಾನೂರ, ಸಿಂದಗಿ ಗ್ರಾಮಗಳಿಗೆ ವಲಸೆ ಬಂದು ಇಲ್ಲೆಯೇ ಕಾಯಂ ನಿವಾಸಿಗಳಾಗಿದ್ದಾರೆ. ಆದರೆ, ಹಳೆಯ ರುಕಮಾಪುರ ಗ್ರಾಮ ಸಂಪೂರ್ಣ ಹಾಳು ಬಿದ್ದಿದೆ.

ಗ್ರಾಮ ಇದ್ದ ಪುರಾವೆ ಉಂಟು:

ಅನೇಕ ವರ್ಷಗಳಿಂದ ಅಲ್ಲಿ ಗ್ರಾಮ ಇತ್ತು ಎಂಬುವುದಕ್ಕೆ ಅನೇಕ ಪುರಾವೆಗಳಿವೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ದೊಡ್ಡ ಹುಡೆ ಇದೆ. ಗಣೇಶ ಮತ್ತು ಹನುಮಂತನ ದೇವಾಲಯವಿದೆ. ಗಾಣದ ಕಲ್ಲುಗಳು ಸೇರಿದಂತೆ ಅನೇಕ ಪುರಾವೆಗಳು ದೊರತಿವೆ.

ಪತ್ರ ವ್ಯವಹಾರದಲ್ಲಿಯೇ ಕಾಲಹರಣ:

ಊರು ಈಗ ಸಂಪೂರ್ಣ ಹಾಳು ಬಿದ್ದ ಪರಿಣಾಮ ಜನವಸತಿ ಇಲ್ಲ. ಸರ್ಕಾರ ಯೋಗ್ಯ ಸೌಲಭ್ಯಗಳನ್ನು ರೂಪಿಸಿ ಅತ್ಯಂತ ಬಡವರಿಗೆ ಆಯ್ಕೆ ಮಾಡಿ ಜಾಗ ನೀಡಿದ್ದೇ ಆದಲ್ಲಿ ಆ ಪ್ರದೇಶದಲ್ಲಿ ಸುಮಾರು 100 ಮನೆಗಳು ನಿರ್ಮಾಣಗೊಳ್ಳುತ್ತವೆ. ಜಾಗ​ವನ್ನು ಬಡವರಿಗೆ ನೀಡಿ ಎಂದು ಸಮಾಜ ಸೇವಕ ಮಡಿವಾಳಪ್ಪ ಹಂದಿಗನೂರ ಸುಮಾರು 19 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಲೆ ಬಂದಿದ್ದಾರೆ. ಅವರ ಹೋರಾಟಕ್ಕೆ ಕೇವಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪತ್ರ ವ್ಯವಹಾರವನ್ನು ಮಾತ್ರ ಮಾಡುತ್ತಿದ್ದಾರೆ ಹೊರತು ಕಾರ್ಯ ಕೈಗೆತ್ತಿಕೊಂಡಿಲ್ಲ.

ಏಕಾಂಗಿ ಹೋರಾಟ:

ಅನೇಕ ಬಾರಿ ಅಧಿಕಾರಿಗಳನ್ನು ಮಡಿವಾಳಪ್ಪ ತರಾಟೆಗೆ ತೆಗೆದುಕೊಂಡ ಪ್ರಸಂಗಗಳು ನಡೆದಿವೆ. ಜನ ಮಾತ್ರ ಹೋರಾಟಗಾರ ಮಡಿವಾಳಪ್ಪನೊಂದಿಗೆ ಇದ್ದರೂ ಅವರ ಹೋರಾಟ ಏಕಾಂಗಿತನದಿಂದ ಕೂಡಿದೆ. ಸರ್ಕಾರ ಆ ಜಾಗ​ವನ್ನು ಕೂಡಲೇ ಬಡವರಿಗೆ ನೀಡ​ದಿ​ದ್ದರೆ ಅದು ಉಳ್ಳವರ ಪಾಲಾಗಿ ಸರ್ಕಾರಕ್ಕೆ ಪಂಗನಾಮ ಹಾಕುವುದು ಗ್ಯಾರಂಟಿ.

ವಿಷಯಕ್ಕೆ ಸಂಬಂಧಿ​ಸಿ​ದಂತೆ ಮಡಿವಾಳಪ್ಪ ಜಿಲ್ಲಾಧಿಕಾರಿಗೆ, ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ, ತಾಲೂಕು ಪಂಚಾಯತಿ ಅಧಿಕಾರಿಗಳಿಗೆ, ತಹಸೀಲ್ದಾರ್‌ ಸೇರಿದಂತೆ ಅನೇಕರಿಗೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಆದರೂ ನನ್ನ ಪ್ರಯತ್ನಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದು ಮಡಿವಾಳಪ್ಪ ಹೋರಾಟ ಮಾತ್ರ ಮುಂದುವರಿಸಿದ್ದಾರೆ.

ಯಾರು ಮಡಿವಾಳಪ್ಪ?

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದ 60 ವರ್ಷ ವಯಸ್ಸಿನ ಗಾಂಧಿವಾದಿ ಮಡಿವಾಳಪ್ಪ ಹಂದಿಗನೂರ ಎಂಬಾತರೇ ಪುನರ್‌ ಗ್ರಾಮ ನಿರ್ಮಾಣ ಹೋರಾಟಗಾರ. ತಾಲೂಕಿನ ಗಣಿಹಾರ ಗ್ರಾಮದ ಹಿರಿಯ ವ್ಯಕ್ತಿ. ಕೃಷಿ ಚಟುವಟಿಕೆಯನ್ನು ಮಾಡುತ್ತಾರೆ. ಆದರೆ, ಸಾಮಾಜಿಕ ಸೇವೆಯಲ್ಲಿ ಅವರಿಗೆ ಎಲ್ಲಿಲ್ಲದ ಸಂತೋಷ. ಮಕ್ಕಳು ತಮ್ಮ ಕಾಯಕದಲ್ಲಿದ್ದಾರೆ. ಈ ಮೊದಲು ವಾಡಿ- ಶೇಡಬಾಳ ರೈಲು ಮಾರ್ಗಕ್ಕೆ ಈ ಹಿಂದೆ ಅನೇಕ ಹೋರಾಟವನ್ನು ಮಾಡಿ ಮಾಹಿತಿ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಪತ್ರವೂ ಕೂಡ ಬರೆದಿದ್ದರು. ತಮ್ಮ ನಿತ್ಯ ಕೃಷಿ ಕಾಯಕದ ಜೊತೆಗೆ ಯಾರ ಮೇಲೆ ಅವಲಂಬನೆ ಇಲ್ಲದೆ ಸಾಮಾಜಿಕ ಸೇವೆ ಮಾಡುತ್ತಿದ್ದಾರೆ.

ನಾನು ಗಾಂಧಿ ಅಭಿಮಾನಿ. ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕೆಂದು ಹಾಳು ಬಿದ್ದಿರುವ ಜಾಗ​ವನ್ನು ಬಡವರಿಗೆ ಕೊಡು​ವಂತೆ ಹೋರಾಟ ಮಾಡುತ್ತಿದ್ದೇನೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಆ ಜಾಗ ಉಳ್ಳವರ ಪಾಲಾಗುವ ಮೊದಲು ಬಡವರಿಗೆ ಸಿಕ್ಕರೆ ಸಂತಸ. ಯಾವುದೇ ಕಾಲಕ್ಕೂ ಹೋರಾಟ ಕೈ ಬಿಡುವುದಿಲ್ಲ. ಈ ವಿಚಾರಕ್ಕೆ ನಾನು ಮುಂದೆ ಸಿಎಂ ಬಳಿ ಹೋಗುವುದಾದರೇ ಹೋಗಿಯೇ ತೀರುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಮಡಿವಾಳಪ್ಪ ಹಂದಿಗನೂರ ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ಸಿಂದಗಿ ತಹಸೀಲ್ದಾರ್‌ ಬಿ.ಎಸ್‌.ಕಡಕಬಾವಿ ಅವರು, ಹಿಕ್ಕಣಗುತ್ತಿ ಗ್ರಾಪಂ ವ್ಯಾಪ್ತಿಯಲ್ಲಿ ಹಳೆಯ ರುಕಮಾಪುರ ಬರುತ್ತದೆ. ಮಡಿವಾಳಪ್ಪರಿಗೆ ಸ್ಪಂದನೆ ಮಾಡಿದ್ದೇನೆ. ನಾನು ತಾಪಂ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದೇನೆ. ಆ ಸ್ಥಳಕ್ಕೆ ಹೋಗಿ ಪರಿಶೀಲಿಸಿ ನೂತನ ಗ್ರಾಮವಾಗುತ್ತಿದ್ದರೆ ಸರ್ಕಾರಕ್ಕೆ ಮನವರಿಕೆ ಮಾಡಿ ವಿವಿಧ ಮೂಲಭೂತ ಸೌಕರ‍್ಯ ಒದಗಿಸುವ ಕ್ರಮ ಜರುಗಿಸೋಣ ಎಂದು ಪತ್ರದ ಮೂಲಕ ತಿಳಿಸಿದ್ದೇನೆ. ಇನ್ನೂ ಕೆಲವೆ ದಿನಗಳಲ್ಲಿ ಈ ವಿಷಯಕ್ಕೆ ಸಂಬಂಧಿ​ಸಿ​ದಂತೆ ತಾಪಂ ಮತ್ತು ಗ್ರಾಪಂ ಅಧಿಕಾರಿಗಳನ್ನು ಭೇಟಿ ಮಾಡಿ ವರದಿ ತೆಗೆ​ದು​ಕೊ​ಳ್ಳು​ತ್ತೇನೆ ಎಂದು ತಿಳಿಸಿದ್ದಾರೆ.