ಸಂಜೀವಕುಮಾರ ಹಿರೇಮಠ

ಹೊಳೆಆಲೂರ(ಅ.5): ಇಲ್ಲಿಗೆ ಸಮೀಪದ ಹುನಗುಂಡಿಯಿಂದ ಮಾಡಲಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬರುವ ಕೆಮ್ಮಣಕೇರ ಹಳ್ಳದ ಸೇತುವೆ ಮಳೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಹೀಗಾಗಿ ಹುನಗುಂಡಿ -ಮಾಡಲಗೇರಿ ರಸ್ತೆಯಿಂದ ಚಲಿಸುವ ಪ್ರಯಾಣಿಕರು ಹಾಗೂ ರೈತರು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ ಎರಡು ಮೂರು ತಿಂಗಳಿಂದ ಈ ರಸ್ತೆಯ ಮೂಲಕ ರಿಕ್ಷಾ, ಟ್ರ್ಯಾಕ್ಟರ್‌, ಎತ್ತಿನ ಚಕ್ಕಡಿ ಸೇರಿ ಯಾವುದೇ ವಾಹನಗಳು ಸಂಚರಿಸುತ್ತಿಲ್ಲ. ಹೀಗಾಗಿ ರೈತರು ತಮ್ಮ ಜಮೀನುಗಳಿಗೆ ಹೋಗಲು ಹಾಗೂ ಮಾಡಲಗೇರಿಯಿಂದ ಹೊಳೆಆಲೂರ ಕಡೆಗೆ ಬರುವ, ಬೇಲೂರ ದನದ ಸಂತೆಗೆ ಹೋಗುವವರು, ಗಜೇಂದ್ರಗಡಕ್ಕೆ ಹೋಗುವವರು ಇದೀಗ ಸುತ್ತುವರೆದು ಪ್ರಯಾಣಿಸುವಂತಾಗಿದೆ.

ಇತ್ತ ಕಡೆ ತಲೆ ಹಾಕದ ಅಧಿಕಾರಿಗಳು

ಈ ರಸ್ತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಸಂಬಂಧ​ಪ​ಟ್ಟಿ​ದೆ. ಆದರೆ ಯಾವುದೇ ಅಧಿಕಾರಿಗಳು ಇತ್ತ ತಲೆ ಹಾಕಿಲ್ಲ. ಎಷ್ಟೋ ಬಾರಿ ಮಾಡಲಗೇರಿ ಹಾಗೂ ಹುನಗುಂಡಿ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗೆ ಎರಡು ಮೂರು ತಿಂಗಳು ಹೇಳುತ್ತಾ ಬಂದಿದ್ದರೂ, ಇ​ತ್ತ ಕಡೆ ಗಮ​ನ​ ಹ​ರಿ​ಸಿ​ಲ್ಲ. ಹೀಗಾಗಿ ಮೊದಲಿನಿಂದಲೂ ಜನಪ್ರತಿನಿಧಿಗಳು ಮತ್ತು ಸಂಬಂಧ​ಪಟ್ಟಅಧಿಕಾರಿಗಳು ಗ್ರಾಮೀಣ ಭಾಗದ ರಸ್ತೆಗಳೆಂದರೆ ತಾತ್ಸಾರ ಮಾಡುತ್ತಾರೆ ಎಂದು ಪ್ರಯಾಣಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಹೊಳೆಆಲೂರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆಗಮಿಸುವ ರೈತರು ಎರಡು ಮೂರು ತಿಂಗಳಿಂದ ಈ ರಸ್ತೆಯ ಸಂಪರ್ಕ ಕಡಿತದಿಂದ ರೈತರ ಮಾಲುಗಳು ಹೆಸರು, ಶೇಂಗಾ ಮುಂತಾದ ಉತ್ಪನ್ನಗಳನ್ನು 10 ಕಿ.ಮೀ. ದೂರವಾಗುವ ನೈನಾಪೂರ, ಹೊಳೆಹಡಗಲಿ, ಅಮರಗೋಳ ಮಾರ್ಗವಾಗಿ ತಂದು ವ್ಯಾಪಾರ ವಹಿವಾಟು ಮಾಡುವ ಸ್ಥಿತಿ ಇದೆ. ಇಷ್ಟೆಲ್ಲಾ ಆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿರುವುದು ಇಲ್ಲಿನ ಪ್ರಯಾಣಿಕರು ಹಾಗೂ ರೈತರ ತಲೆ ಕೆಡಿಸಿದೆ.

ಈ ಬಗ್ಗೆ ಮಾತನಾಡಿದ ಹುನಗುಂಡಿಯ ರಿಕ್ಷಾ ಚಾಲಕ ದೊಡ್ಡಯ್ಯ ಹಿರೇಮಠ ಅವರು, ನಾವು ಇಲ್ಲಿಂದ ಬೇಲೂರಿಗೆ ದನದ ಸಂತೆಗೆ ಹೋಗುತ್ತೇವೆ. ಈ ರಸ್ತೆ ಬಂದ್‌ ಆಗಿರುವುದರಿಂದ ನಮಗೆ ತುಂಬಾ ಪ್ರಾಬ್ಲಂ ಆಗಿದೆ. ಇದರ ಜೊತೆ ದುಡಿಯುವ ರೈತರು ನಡೆದುಕೊಂಡೇ ಜಮೀನುಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾ​ಣ​ವಾ​ಗಿದೆ. ಎತ್ತು, ಹೋರಿಗಳನ್ನು ಒಯ್ಯಲು ಸಹ ಕಷ್ಟಪಡಬೇಕಾಗಿದೆ ಎಂದು ಹೇಳಿದ್ದಾರೆ. 

ನಾನು ಹಳ್ಳದ ಸೇತುವೆ ನೋಡಿ ಸಮಸ್ಯೆಗಳನ್ನು ಅಧಿ​ಕಾ​ರಿ​ಗ​ಳಿ​ಗೆ ತಿಳಿಸಿದ್ದೇನೆ. ಅಧಿಕಾರಿಗಳು ಈ ರಸ್ತೆಯಲ್ಲಿ ಬರುವ ಎರಡು ಮೂರು ಸೇತುವೆಗಳನ್ನು ದುರಸ್ತಿ ಮಾಡಿಕೊಡಲು ಒಪ್ಪಿದ್ದಾರೆ. ಆದಷ್ಟುಬೇಗ ಕೆಲಸ ಮಾಡಿಕೊಡುತ್ತೇವೆ ಎಂದು ಹೊಳೆಆಲೂರ ಜಿಪಂ ಸದಸ್ಯ ಪಡಿಯಪ್ಪ ಪೂಜಾರ ಅವರು ತಿಳಿಸಿದ್ದಾರೆ.