ಶಿರಹಟ್ಟಿಯಲ್ಲಿ ವರುಣನ ಆರ್ಭಟ: ಜಲಾವೃತಗೊಂಡ 80 ಮನೆಗಳು, ಸಿಗದ ಪರಿಹಾರ
ಭಾರೀ ಮಳೆಗೆ 80 ಕ್ಕೂ ಹೆಚ್ಚು ಮನೆಗಳು ಜಲಾವೃತ| ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ತಾಂಡಾದಲ್ಲಿ ನಡೆದ ಘಟನೆ| ಜನತೆ ನಿದ್ದೆಗೆಟ್ಟು ಊಟ, ಉಪಹಾರವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ|
ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ(ಸೆ.10): ಕಳೆದ 2 ದಿನಗಳಿಂದ ವರುಣನ ಆರ್ಭಟ ಹೆಚ್ಚಾಗಿದ್ದು, ಮಂಗಳವಾರ ರಾತ್ರಿ ವ್ಯಾಪಕ ಮಳೆಯಾಗಿದ್ದು, ತಾಲೂಕಿನ ಜಲ್ಲಿಗೇರಿ ತಾಂಡಾದಲ್ಲಿನ 80 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು ಜನತೆ ನಿದ್ದೆಗೆಟ್ಟು ಊಟ, ಉಪಹಾರವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ.
ಗುಡ್ಡದ ಪಕ್ಕಕ್ಕೆ ಹೊಂದಿಕೊಂಡಿರುವ ತಾಲೂಕಿನ ಜಲ್ಲಿಗೇರಿ ತಾಂಡಾದಲ್ಲಿ ವಾಸವಿರುವ ಜನತೆ ಗುಡ್ಡದ ಮೇಲಿಂದ ಹಾಗೂ ರೈತರ ಜಮೀನುಗಳ ಒಡ್ಡು ಒಡೆದು ಮಂಗಳವಾರ ತಡರಾತ್ರಿ ರಭಸವಾಗಿ ಹರಿದು ಬಂದ ಮಳೆ ನೀರು ಗ್ರಾಮದ ಮನೆಯೊಳಗೆ ನುಗ್ಗಿದ್ದು, ಮಕ್ಕಳು, ವಯೋವೃದ್ದರು ಸೇರಿದಂತೆ ಮನೆ ಮಂದಿಯಲ್ಲಾ ನಿದ್ದೆಗೆಟ್ಟು ನಡುಗುತ್ತಾ ರಾತ್ರಿ ಕಳೆದ ಘಟನೆ ಜರುಗಿದೆ.
ಹವಾಮಾನ ಇಲಾಖೆ ವರದಿಯಂತೆ ತಾಲೂಕಿನಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಇನ್ನೂ ೨ ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜನ ಎಲ್ಲಿ ವಾಸ ಮಾಡಬೇಕು ಎಂಬ ಚಿಂತೆಯಲ್ಲಿದ್ದು, ಅಧಿಕಾರಿಗಳು ಮಾತ್ರ ಯಾವುದೇ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಆರೋಪ ತಾಂಡಾದ ಜನರಿಂದ ಕೇಳಿಬರುತ್ತಿದೆ.
ಮುಳಗುಂದ: ಪಶು ಆಸ್ಪತ್ರೆ ಸಿಬ್ಬಂದಿ ನಿಧನ, ಅಂತಿಮ ದರ್ಶನ ಪಡೆದ ಹಸು
ಮಂಗಳವಾರ ರಾತ್ರಿ ಪೂರ್ತಿ ಗುಡುಗು ಮಿಂಚು ಸಹಿತ ಜೋರಾದ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಅಧಿಕಾರಿಗಳು ಮಾತ್ರ ಭರವಸೆ ನೀಡಿ ಹೋಗುತ್ತಿದ್ದು, ನಿಜವಾಗಿಯು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎನ್ನುವ ಗಂಭೀರ ಆರೋಪಗಳಿದ್ದು, ಅಧಿಕಾರಿಗಳು ಎಚ್ಚತ್ತುಕೊಂಡು ಜನರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕಾಗಿದೆ.
ಅಧಿಕಾರಿಗಳಿಗೆ ಘೇರಾವ್
ಸುಮಾರು 15 ವರ್ಷಗಳಿಂದ ತಾಂಡಾದ ಜನತೆ ಮಳೆಗಾಲದಲ್ಲಿ ಇದೇ ಸಮಸ್ಯೆ ಎದುರಿಸುತ್ತಿದ್ದು, ಶಾಸಕರಿಗೆ ತಹಶೀಲ್ದಾರ, ತಾಪಂ ಇಓ, ಪಿಡಬ್ಲ್ಯೂಡಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ವಾಸ್ತವ ಸಮಸ್ಯೆ ಕುರಿತು ಮನವರಿಕೆ ಮಾಡಿ ಲಿಖಿತ ಪತ್ರ ನೀಡಿದ್ದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬರೀ ಹಾರಿಕೆ ಉತ್ತರ ನೀಡಿ ಸಮಾಧಾನಪಡಿಸಿ ಹೋಗುತ್ತಿದ್ದಾರೆ ಎಂದು ಗ್ರಾಮ ಮಹಿಳೆಯರು ಅಧಿಕಾರಿಗಳಿಗೆ ಘೇರಾವ್ ಹಾಕಿದ್ದಾರೆ.
ಅಪಾಯದಿಂದ ಪಾರಾದ ಜನತೆ
ಮಂಗಳವಾರ ತಡರಾತ್ರಿ ಸುರಿದ ಮಳೆಗೆ ಮನೆಯಲ್ಲಿ ನೀರು ನುಗ್ಗಿದ್ದು, ಕೆಲವರ ಮನೆಯೊಳಗೆ ಹಾವು, ಚೇಳು ಕಾಣಿಸಿಕೊಂಡಿದ್ದು, ಶಾರ್ಟ ಸರ್ಕ್ಯೂಟ್‌ನಿಂದ ಎಲ್ಲೆಡೆ ವಿದ್ಯುತ್ ಕಾಣಿಸಿಕೊಂಡಿದ್ದು, ಜನತೆ ಸ್ವಲ್ಪ ಅಲಕ್ಷ ತೋರಿದ್ದರೆ ಪ್ರಾಣಹಾನಿಯಾಗುವು ಸಾಧ್ಯತೆ ಕಂಡುಬಂದಿದ್ದು, ತಕ್ಷಣ ಎಚ್ಚತ್ತ ಜನತೆ ವಿದ್ಯುತ್ ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇದೆಲ್ಲವೂ ಅಧಿಕಾರಿಗಳ ಸಮ್ಮುಖದಲ್ಲಿಯೇ ನಡೆದಿದ್ದು, ಜನರ ಪ್ರಾಣ ರಕ್ಷಣೆಗೆ ತುರ್ತು ಕ್ರಮ ತೆಗೆದುಕೊಳ್ಳಬೇಕಾಗಿದೆ ಆದರೆ ಅಧಿಕಾರಿಗಳು ತಾತ್ಕಾಲಿಕವಾಗಿ ತಾಂಡಾದ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.
ಮಂಗಳವಾರ ತಡ ರಾತ್ರಿ ಸುರಿದ ಮಳೆಗೆ ಸುಮಾರು 80ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಜೀವ ಭಯದಲ್ಲಿ ಕಾಲ ಕಳೆಯುವಂತಾಗಿದೆ. ಪ್ರತಿ ವರ್ಷವೂ ಇದೇ ತೊಂದರೆ ಅನುಭವಿಸುತ್ತಿದ್ದು, ಮನೆಯಲ್ಲಿನ ಕಾಳು, ಕಡಿ, ದವಸ, ದಾನ್ಯಗಳೆಲ್ಲವೂ ನೀರು ಪಾಲಾಗಿವೆ. ಯಾವೊಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ. ಕೆಲ ಅಧಿಕಾರಿಗಳ ಭೇಟಿ ನೀಡಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿ ಪರಾರಿಯಾಗಿದ್ದಾರೆ ಎಂದು ಗ್ರಾಮದ ಮುಖಂಡ ಈರಣ್ಣ ಚವ್ಹಾಣ ಅವರು ತಿಳಿಸಿದ್ದಾರೆ.
ಪ್ರತಿ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಲ್ಲಿ ಜಲ್ಲಿಗೇರಿ ತಾಂಡಾದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಗುಡ್ಡದ ಪಕ್ಕದಲ್ಲಿ ತಾಂಡಾದ ಮನೆಗಳಿದ್ದು, ಮಳೆ ನೀರು ಹರಿದು ಹೋಗಲು ಬೇರೆ ವ್ಯವಸ್ಥೆ ಇಲ್ಲದೇ ಇರುವುದರಿಂದ ಮನೆಗಳಿಗೆ ನೀರು ನುಗ್ಗುತ್ತಿದೆ. ಸದ್ಯ ಪಕ್ಕದ ರೈತರೊಂದಿಗೆ ಮಾತನಾಡಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನೀರು ಹರಿದು ಹೋಗಲು ಶಾಶ್ವತ ಕ್ರಮ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ಶಿರಹಟ್ಟಿ ತಾಪಂ ಇಓ ನಿಂಗಪ್ಪ ಓಲೇಕಾರ ಅವರು ಹೇಳಿದ್ದಾರೆ.