ಆಧಾರ್ ತಿದ್ದುಪಡಿಗೆ ಶುಕ್ರವಾರ ಮಾತ್ರ: ಜನ ಸುಸ್ತೋ ಸುಸ್ತು..!
ಹಲವು ಪ್ರಮಾದಗಳಿರುವ ತಾಲೂಕಿನ ಲಕ್ಷಾಂತರ ಆಧಾರ್ ಕಾರ್ಡ್ ತಿದ್ದುಪಡಿಗೆ ಕೇವಲ ಒಂದು ಕೇಂದ್ರ ಮಾತ್ರ ಇದ್ದು, ವಾರದ ಒಂದು ದಿನ ಅವಕಾಶ ಕಲ್ಪಿಸಿರುವ ಕ್ರಮ ಯಾವುದೇ ರೀತಿಯಿಂದಲೂ ಸರಿಯಲ್ಲ ಎನ್ನುವುದು ಸಾರ್ವಜನಿಕರ ವಾದವಾಗಿದೆ.
ಎಚ್.ಕೆ.ಬಿ. ಸ್ವಾಮಿ
ಸೊರಬ(ಡಿ.10): ಶುಕ್ರವಾರ ಬಂತೆಂದರೆ ಆಧಾರ್ ಕಾರ್ಡ್ ತಿದ್ದುಪಡಿಗೆ ಪಟ್ಟಣದ ಉಪ ಅಂಚೆ ಕಚೇರಿಯಲ್ಲಿ ಜನ ಸಾಗರ ಸಾಲುಗಟ್ಟಿ ನಿಂತಿರುತ್ತದೆ. ಆದರೆ ಅಂದು ಬರುವ ಎಲ್ಲರಿಗೂ ಆಧಾರ್ ತಿದ್ದುಪಡಿ ಭಾಗ್ಯ ದೊರೆಯುತ್ತದೆ ಎಂದಿಲ್ಲ. ಹಾಗೊಂದು ವೇಳೆ ಸಿಗದಿದ್ದರೆ ಮುಂದಿನ ಶುಕ್ರವಾರದವೆಗೆ ಕಾಯಬೇಕು. ಇದು ಗ್ರಾಮಸ್ಥರು ಆಕ್ರೋಶಕ್ಕೆ ಕಾರಣವಾಗಿದೆ.
ಕೆಲವರ ಆಧಾರ್ ಕಾರ್ಡ್‌ನಲ್ಲಿ ಹೆಸರು ತಪ್ಪಾಗಿರುವುದು, ಮೊಬೈಲ್ ಸಂಖ್ಯೆ ಬದಲಾವಣೆ, ಹುಟ್ಟಿದ ದಿನಾಂಕ ಹಾಗೂ ಊರಿನ ಹೆಸರು ತಪ್ಪಾಗಿ ಮುದ್ರಿತವಾಗಿರುವುದು, ಗಂಡ ಅಥವಾ ತಂದೆಯ ಹೆಸರಿನಲ್ಲಿ ಇನಿಷಿಯಲ್ ಇಲ್ಲದಿರುವುದು, ಹೀಗೆ ಹಲವು ಸಮಸ್ಯೆಗಳನ್ನು ಹೊತ್ತು ಸರಿಪಡಿಸಲು ಬರುವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಗೆ ಪ್ರತೀ ಶುಕ್ರವಾರ ತಾಲೂಕು ಕಚೇರಿಯಿಂದ ಅವಕಾಶ ಕಲ್ಪಿಸಲಾಗಿದೆ. ಹಲವು ಪ್ರಮಾದಗಳಿರುವ ತಾಲೂಕಿನ ಲಕ್ಷಾಂತರ ಆಧಾರ್ ಕಾರ್ಡ್ ತಿದ್ದುಪಡಿಗೆ ಕೇವಲ ಒಂದು ಕೇಂದ್ರ ಮಾತ್ರ ಇದ್ದು, ವಾರದ ಒಂದು ದಿನ ಅವಕಾಶ ಕಲ್ಪಿಸಿರುವ ಕ್ರಮ ಯಾವುದೇ ರೀತಿಯಿಂದಲೂ ಸರಿಯಲ್ಲ ಎನ್ನುವುದು ಸಾರ್ವಜನಿಕರ ವಾದವಾಗಿದೆ.
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಇಬ್ಬರು ಶಿಕ್ಷಕರ ಅಮಾನತು
ಆಧಾರ್ ಕಾರ್ಡ್‌ನ ಸಮಸ್ಯೆಗಳನ್ನು ಹೊತ್ತು ತಾಲೂಕಿನ ಐದು ಹೋಬಳಿಗಳ ೪೧ ಗ್ರಾ.ಪಂ.ಗಳಿಂದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಸೊರಬ ತಾಲೂಕು ಕೇಂದ್ರದಲ್ಲಿರುವ ಉಪ ಅಂಚೆ ಕಚೇರಿಗೆ ಧಾವಿಸಬೇಕಿದೆ. ವಾರದ ಶುಕ್ರವಾರದ ಬಂತೆಂದರೆ ಗ್ರಾಮಸ್ಥರು ತಮ್ಮ ಎಲ್ಲಾ ಚಟುವಟಿಕೆಗಳನ್ನು ಬದಿಗೊತ್ತಿ ತಿಂಡಿ ಕಟ್ಟಿಕೊಂಡು ಬೆಳಗ್ಗೆ ೫ ಗಂಟೆಯ ಹೊತ್ತಿಗೆ ಅಂಚೆ ಕಚೇರಿ ಮುಂಭಾಗದಲ್ಲಿ ಸಾಲುಗಟ್ಟಿ ನಿಲ್ಲಬೇಕಿದೆ. ಸ್ತ್ರೀಯರು ಮಕ್ಕಳನ್ನು ಸೊಂಟದ ಮೇಲೆ ಹೊತ್ತು ಬಂದು ಸರತಿ ಸಾಲಿನಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಲ್ಲುವ ಎಲ್ಲರಿಗೂ ಅದೇ ದಿನ ಆಧಾರ್ ತಿದ್ದುಪಡಿ ಭಾಗ್ಯ ಲಭಿಸುವುದಿಲ್ಲ. ಒಂದು ದಿನಕ್ಕೆ ೫೦ ಜನರು ಮಾತ್ರ ತಿದ್ದುಪಡಿಯ ಅರ್ಹತೆಯನ್ನು ಪಡೆಯುತ್ತಾರೆ. ಉಳಿದವರು ನಿರಾಶೆಯ ಮಡುವಿನಲ್ಲಿ ಗ್ರಾಮಗಳಿಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಸರ್ವರ್ ಡೌನ್, ನೆಟ್‌ವರ್ಕ್‌ನಲ್ಲಿ ಅಡಚಣೆಯಾಗಿದೆ ಎನ್ನುವ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ತಾಲೂಕಿನಲ್ಲಿ ಲಕ್ಷಾಂತರ ಜನರ ಆಧಾರ ತಿದ್ದುಪಡಿಗೆ ಕೇವಲ ಒಂದೇ ಒಂದು ಕೇಂದ್ರವನ್ನು ನಿಗದಿಪಡಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕಾರಣವಾಗಿದೆ.
ಸೊರಬ ಕಸಬಾ ಸೇರಿದಂತೆ ಆನವಟ್ಟಿ, ಜಡೆ, ಚಂದ್ರಗುತ್ತಿ, ಉಳವಿ, ಉದ್ರಿ ಹೋಬಳಿಗಳು ತಾಲೂಕು ಕೇಂದ್ರದಿಂದ ಸುಮಾರು 30-45 ಕಿ.ಮೀ. ದೂರದಲ್ಲಿವೆ. ಆಧಾರ್ ತಿದ್ದುಪಡಿಗಾಗಿ ಪ್ರತಿ ಶುಕ್ರವಾರ ಕೃಷಿ ಚಟುವಟಿಕೆಗಳನ್ನು ಬದಿಗೊತ್ತಿ ಸೊರಬ ಪಟ್ಟಣಕ್ಕೆ ಬರಬೇಕಿದೆ. ಈ ಸಂದರ್ಭದಲ್ಲಿ ಖರ್ಚುವೆಚ್ಚಗಳು ಅಧಿಕವಾಗಿ ಸಮಸ್ಯೆಯಾಗುತ್ತದೆ. ಮಕ್ಕಳು, ವಯೋವೃದ್ಧರು, ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ದಿನವಿಡೀ ಸರತಿ ಸಾಲಿನಲ್ಲಿ ನಿಲ್ಲುವುದರಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಜೀವಕ್ಕೆ ಆಪತ್ತು ಬಂದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಜ್ಞಾನೇಂದ್ರ, ಈಶ್ವರಪ್ಪ ಜೊತೆ ಸನಾತನ ಧರ್ಮದ ಚರ್ಚೆಗೆ ಸಿದ್ಧ: ಕಿಮ್ಮನೆ
ಈ ಹಿಂದೆ ತಾಲೂಕು ಕಚೇರಿಯಿಂದ ಹೋಬಳಿವಾರು ಗ್ರಾಮ-೧, ಸೊರಬ ಪಟ್ಟಣದಲ್ಲಿ ಕರ್ನಾಟಕ-೧ ಕೇಂದ್ರವನ್ನು ಆಧಾರ್ ಮತ್ತು ಪಡಿತರ ಚೀಟಿ ತಿದ್ದುಪಡಿಗಾಗಿ ಸ್ಥಾಪಿಸಲಾಗಿತ್ತು. ಇದರಿಂದ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಸಮಯ ಮತ್ತು ಖರ್ಚುವೆಚ್ಚ ಎಲ್ಲವೂ ಉಳಿತಾಯವಾಗಿ ಅನುಕೂಲವಾಗಿತ್ತು. ಆದರೆ ಗ್ರಾಮ-೧ ಕೇಂದ್ರದಲ್ಲಿ ಆಧಾರ್ ತಿದ್ದುಪಡಿಯ ಅವಕಾಶವನ್ನು ರದ್ದುಪಡಿಸಿ ಪಟ್ಟಣದ ಉಪ ಅಂಚೆ ಕಚೇರಿಯಲ್ಲಿ ಕಲ್ಪಿಸಲಾಗಿದೆ. ಇದರಿಂದ ರೈತರು, ವಿದ್ಯಾರ್ಥಿಗಳು, ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಹೋಬಳಿಮಟ್ಟದಲ್ಲಿ ಆಧಾರ್ ತಿದ್ದುಪಡಿ ಕೇಂದ್ರವನ್ನು ಸ್ಥಾಪಿಸುವಂತೆ ಜನ ಆಗ್ರಹಿಸಿದ್ದಾರೆ.
ಪಟ್ಟಣದ ಉಪ ಅಂಚೆ ಕಚೇರಿಯಲ್ಲಿ ಆಧಾರ್ ತಿದ್ದುಪಡಿಗೆ ಅವಕಾಶ ಕಲ್ಪಿಸಿದ್ದರಿಂದ ದೂರದ ಊರಿನಿಂದ ಬರುವವರಿಗೆ ತೊಂದರೆ ಆಗುತ್ತಿದೆ. ಅಲ್ಲದೇ ವಾರದಲ್ಲಿ ಒಂದು ದಿನ ಅವಕಾಶ ನೀಡಿ ೫೦ ಜನರ ತಿದ್ದುಪಡಿಗೆ ಒಳಪಡಿಸುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಸರತಿ ಸಾಲಿನಲ್ಲಿ ನಿಂತವರು ನಿರಾಶೆಯಿಂದ ತೆರಳುಂವಂತಾಗಿದೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ. ವಾರದ ಎಲ್ಲಾ ದಿನವೂ ಅವಕಾಶ ಕಲ್ಪಿಸಿ, ಹೋಬಳಿವಾರು ಆಧಾರ್ ತಿದ್ದುಪಡಿ ಕೇಂದ್ರ ಆರಂಭಿಸಬೇಕು ಎಂದು ಕೃಷಿಕ ಮಹೇಶ್ ಸಂಪಗೋಡು ತಿಳಿಸಿದ್ದಾರೆ.