Asianet Suvarna News Asianet Suvarna News

Negative Certificate Mandatory: ಕೊರೋನಾದಿಂದ ಗುಣಮುಖ ವರದಿ ಪಡೆಯಲು ಜನರ ಹರಸಾಹಸ..!

*   ಪ್ರಮಾಣಪತ್ರ ಸಿಗದೇ ಅನಿವಾರ್ಯವಾಗಿ ಮತ್ತೊಮ್ಮೆ ಪರೀಕ್ಷೆ
*   ಹೋಂ ಐಸೋಲೇಷನ್‌ ಇದ್ದರೆ ಪರೀಕ್ಷೆಗೂ ಸಿಬ್ಬಂದಿ ನಕಾರ
*   ಗುಣಮುಖರಿಗೆ ಸಮಸ್ಯೆ, ಅನಗತ್ಯ ಪರೀಕ್ಷೆ ಹೊರೆ
 

People Faces Problems Due to Get the Covid Negative Certificate in Bengaluru grg
Author
Bengaluru, First Published Jan 23, 2022, 5:15 AM IST

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ಜ.23):  ಕೊರೋನಾ(Coronavirus) ಸೋಂಕಿನ ಗುಣಮುಖ ವರದಿ ಎಲ್ಲಿ ಸಿಗುತ್ತದೆ? ಯಾರು ನೀಡುತ್ತಾರೆ? ಮತ್ತೊಮ್ಮೆ ಸೋಂಕು ಪರೀಕ್ಷೆ(Covid Test) ಮಾಡಿಸಿ ಗುಣಮುಖ ವರದಿ ಪಡೆಯಬೇಕಾ? ಹೋಂ ಕ್ವಾರಂಟೈನ್‌ ಮುಗಿದವರಿಗೆ ಏಕೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆಗೆ ಅವಕಾಶವಿಲ್ಲ?. ಇವು ಕೊರೋನಾ ಸೋಂಕಿತರಾಗಿ ಹೋಂ ಐಸೋಲೇಷನ್‌ ಮುಗಿಸಿದ ಸಾವಿರಾರು ಮಂದಿಗೆ ಎದುರಾಗಿರುವ ಪ್ರಶ್ನೆಗಳು!

ನಗರದಲ್ಲಿ(Bengaluru) ಲಕ್ಷಾಂತರ ಮಂದಿ ಕೊರೋನಾ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿದ್ದು(Home Isolation), ಸೋಂಕು ವಾಸಿಯಾದ ಬಳಿಕ ‘ಗುಣಮುಖ’ ಎಂದು ಸಾಭೀತು ಪಡಿಸಲು ಹರಸಾಹಸ ಪಡುತ್ತಿದ್ದಾರೆ. ಒಂದೆಡೆ ಆರೋಗ್ಯ ಇಲಾಖೆಯೇ(Department of Health) ‘ಏಳು ದಿನಗಳ ಹೋಂ ಐಸೋಲೇಷನ್‌ ಮುಗಿದ ಬಳಿಕ ಮತ್ತೊಮ್ಮೆ ಪರೀಕ್ಷೆ ಅವಶ್ಯಕತೆ ಇಲ್ಲ’ ಎಂದು ಸುತ್ತೋಲೆ ಹೊರಡಿಸಿದೆ. ಜತೆಗೆ ‘ಹೋಂ ಐಸೋಲೇಷನ್‌ನಲ್ಲಿರುವವರು ಅವಧಿಯನ್ನು ಪೂರ್ಣಗೊಳಿಸಿದ ಕುರಿತು ವೈದ್ಯರ ಪ್ರಮಾಣಪತ್ರ ನೀಡಿದ ನಂತರವೇ ಮನೆಯಿಂದ ಹೊರಬರಬೇಕು’ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆದರೆ, ‘ಗುಣಮುಖ’ ಪ್ರಮಾಣಪತ್ರ(Certificate) ಮಾತ್ರ ಸಿಗುತ್ತಿಲ್ಲ, ಆ ಬಗ್ಗೆ ಸೂಕ್ತ ಮಾಹಿತಿಯೂ ಇಲ್ಲ. ಆರೋಗ್ಯ ಇಲಾಖೆ ಅಥವಾ ಬಿಬಿಎಂಪಿಯು ಗುಣಮುಖವಾಗಿರುವ ಅಥವಾ ಐಸೋಲೇಷನ್‌ ಮುಗಿದಿರುವ ಕುರಿತು ಸಾಬೀತು ಪಡಿಸಲು ಸೂಕ್ತ ವ್ಯವಸ್ಥೆ ಮಾಡದಿರುವುದು ಸಾವಿರಾರು ಮಂದಿಯನ್ನು ಸಮಸ್ಯೆಗೆ ಸಿಲುಕಿಸಿದೆ.

CoWIN 19 Data Leaked: ಸಾವಿರಾರು ಭಾರತೀಯರ ಕೋವಿಡ್‌ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆ?

ಇತ್ತ ಹಲವು ಕಚೇರಿಗಳು, ಆಸ್ಪತ್ರೆಗಳಲ್ಲಿ ಇತರೆ ಚಿಕಿತ್ಸೆಗೆ, ಹೊರರಾಜ್ಯ ಪ್ರಯಾಣಕ್ಕೆ, ಅಪಾರ್ಟ್‌ಮೆಂಟ್‌ಗಳ ನಿವಾಸಿ ಸಂಘಗಳಲ್ಲಿ ಸೋಂಕಿತರಿಗೆ ನೆಗೆಟಿವ್‌/ಗುಣಮುಖ ಪ್ರಮಾಣ ಪತ್ರ(Negative Certificate) ಕಡ್ಡಾಯಗೊಳಿಸಲಾಗಿದೆ. ಅಗತ್ಯವಿರುವಷ್ಟು ದಿನ ಅನಾರೋಗ್ಯ ರಜೆ ಪಡೆಯಲು ಗುಣಮುಖ ವರದಿ, ಆ ಬಳಿಕ ಕೆಲಸಕ್ಕೆ ಮರಳಲು ನೆಗೆಟಿವ್‌ ವರದಿ ಅವಶ್ಯಕವಾಗಿದೆ. ಹೀಗಾಗಿ, ಗುಣಮುಖರಾದ ಉದ್ಯೋಗಿಗಳು ಅನಿವಾರ್ಯವಾಗಿ ಖಾಸಗಿ ಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಹಲವರು ಸೋಂಕು ತಗುಲಿದ್ದನ್ನು ಮುಚ್ಚಿಟ್ಟು ಮತ್ತೊಮ್ಮೆ ಸರ್ಕಾರಿ ಕೇಂದ್ರಗಳಲ್ಲಿಯೇ ಪರೀಕ್ಷೆಗೊಳಗಾಗುತ್ತಿದ್ದಾರೆ.

ಶನಿವಾರದ ಅಂತ್ಯಕ್ಕೆ 2.2 ಲಕ್ಷ ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಈ ಪೈಕಿ ಕಳೆದ ನಾಲ್ಕು ದಿನಗಳಿಂದ ನಿತ್ಯ 15 ಸಾವಿರಕ್ಕೂ ಅಧಿಕ ಮಂದಿಗೆ ಹೋಂ ಐಸೋಲೇಷನ್‌ಗೆ ನಿಗದಿ ಪಡಿಸಿದ್ದ ಏಳು ದಿನ ಪೂರ್ಣಗೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ 20 ದಿನಕ್ಕೂ ಅಧಿಕ ಮಂದಿ ನಿತ್ಯ ಹೋಂ ಐಸೋಲೇಷನ್‌ ಮುಗಿಸಲಿದ್ದಾರೆ. ಇವರೆಲ್ಲರು ಮತ್ತೊಮ್ಮೆ ಪರೀಕ್ಷೆ ಅಥವಾ ಖಾಸಗಿ ಆಸ್ಪತ್ರೆ ವೈದ್ಯರ ಬಳಿ ಪ್ರಮಾಣಪತ್ರಕ್ಕೆ ಅಲೆದಾಟಬೇಕಿದ ಪರಿಸ್ಥಿತಿ ಎದುರಾಗಲಿದೆ.

ಅನಗತ್ಯ ಪರೀಕ್ಷೆ ಹೊರೆ!

ಸರ್ಕಾರವು ಒಬ್ಬರ ಕೊರೋನಾ ಪರೀಕ್ಷೆಗೆ 500 ರು. ವೆಚ್ಚ ಮಾಡುತ್ತದೆ. ಗುಣಮುಖರಾದವರು ಅಗತ್ಯ ಪರೀಕ್ಷೆ ಮಾಡಿಸಿ ಅಗತ್ಯ ಸಮಯ ಮತ್ತು ಹಣ ವ್ಯರ್ಥ ಮಾಡುವುದು ಬೇಡ ಎಂಬ ಕಾರಣಕ್ಕೆ ‘ಸೋಂಕಿನ ಲಘು ಲಕ್ಷಣ ಇದ್ದವರು, ಲಕ್ಷಣ ಇಲ್ಲದವರು ಏಳು ದಿನಕ್ಕೆ ಗುಣಮುಖ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾರ್ಗಸೂಚಿಯಲ್ಲಿ ತಿಳಿಸಿದೆ. ಗುಣಮುಖರು ಮತ್ತೊಮ್ಮೆ ಪರೀಕ್ಷೆಯಿಂದ ಸರ್ಕಾರಕ್ಕೆ ಪರೀಕ್ಷೆ ವೆಚ್ಚದ ಹೊರೆ ತಗುಲುತ್ತಿದೆ.

ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕಷ್ಟೇ

‘ಯಾವ ಸರ್ಟಿಫಿಕೇಟು ಕೊಡುತ್ತಿಲ್ಲ. ಹೋಂ ಐಸೋಲೇಷನ್‌ನಿಂದ ಹೊರಬರಬೇಕು ಎಂದರೆ ಏಳು ದಿನಕ್ಕೆ ಅಥವಾ 14ನೇ ದಿನಕ್ಕೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು’. - ಗುಣಮುಖ ಪ್ರಮಾಣ ಪತ್ರ ಗೊಂದಲ ಕುರಿತು ಸಹಾಯವಾಣಿಗೆ ‘ಕನ್ನಡಪ್ರಭ’ ಕರೆ ಮಾಡಿದಾಗ ಸಿಬ್ಬಂದಿಯೊಬ್ಬರು ನೀಡಿದ ಮಾಹಿತಿ ಇದು.

Corona Vaccine: 1ನೇ ಡೋಸ್‌ ಲಸಿಕೆ: ಶೇ.100 ಸಾಧನೆ ಹೊಸ್ತಿಲಲ್ಲಿ ಕರ್ನಾಟಕ!

ಸದ್ಯ ಕೊರೋನಾ ಮೂರನೇ ಅಲೆಯಲ್ಲಿ(Corona 3rd Wave) ಸೋಂಕು ತಗುಲಿರುವ ಎಂಬ ವರದಿ ಸುಲಭವಾಗಿ ಸಿಗುತ್ತಿದೆ. ಆದರೆ, ಕೊರೋನಾ ಗುಣಮುಖವಾಗಿದೆ ಎಂಬ ವರದಿ ಮಾತ್ರ ಯಾರಿಗೂ ಲಭ್ಯವಾಗುತ್ತಿಲ್ಲ. ಕಳೆದ ಬಾರಿ ಸೋಂಕು ತಗುಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಡಿಸ್ಚಾರ್ಜ್ ಸರ್ಟಿಫಿಕೆಟ್‌ ಕೊಟ್ಟಿದ್ದರು. ಆದರೆ, ಈ ಬಾರಿ ಸೋಂಕು ಲಕ್ಷಣ ಕಡಿಮೆ ಎಂದು ಮನೆ ಆರೈಕೆಯಲ್ಲಿದ್ದೇನೆ. ಏಳು ದಿನ ಆದ ಬಳಿಕ ಗುಣಮುಖ ಎನ್ನುತ್ತಾರೆ. ಆದರೆ, ಆ ಬಗ್ಗೆ ಪ್ರಯಾಣಪತ್ರ ಇಲ್ಲ. ಅನಿವಾರ್ಯವಾಗಿ ಮತ್ತೊಮ್ಮೆ ಪರೀಕ್ಷೆ ಮಾಡಿಸಿ ಪ್ರಮಾಣ ಪತ್ರ ಪಡೆದೆ ಅಂತ ಗುಣಮುಖರಾದ ತಿಲಕ್‌ ತಿಳಿಸಿದ್ದಾರೆ.  

ಸರ್ಕಾರಿ ಆಸ್ಪತ್ರೆಗಳಲ್ಲಿ(Government Hospitals) ಹೋಂ ಐಸೋಲೇಷನ್‌ ಇದ್ದವರಿಗೆ ಮತ್ತೆ ಸೋಂಕು ಪರೀಕ್ಷೆ ಮಾಡುವುದಿಲ್ಲ ಎನ್ನುತ್ತಾರೆ. ಗುಣಮುಖ ಎಂದು ನೆಗೆಟಿವ್‌ ವರದಿ ಕೊಡಿ ಎಂದು ಕಚೇರಿಯಲ್ಲಿ ಕೇಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಯ್ತು ಅಂತ ಗುಣಮುಖರಾದ ಸುಪದಿ ಭಟ್‌ ಹೇಳಿದ್ದಾರೆ.  
 

Follow Us:
Download App:
  • android
  • ios