ಬಿರು ಬೇಸಿಗೆ : ನಂದಿ ಗಿರಿಧಾಮದಲ್ಲಿ ಕಾಡುತ್ತಿದೆ ಸಮಸ್ಯೆ

ಸಮಶೀತೋಷ್ಣ ಹವಾಮಾನಕ್ಕೆ ಹೆಸರುವಾಸಿಯಾಗಿರುವ ನಂದಿಗಿರಿ ಧಾಮದಲ್ಲಿ ಬೇಸಿಗೆ ಬಂತೆಂದರೆ ಸಾಕು ಗಿಡಮರಗಳೆಲ್ಲಾ ಒಣಗಿ ಪ್ರೇತಕಳೆ ಆವರಿಸುತ್ತದೆ. ಗಿಡಮರಬಳ್ಳಿಗಳು ಒತ್ತಟ್ಟಿಗಿರಲಿ ಪ್ರವಾಸಿಗರಾದಿಯಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಏರ್ಪಟ್ಟಿದೆ.

People Faces Drinking water problem in Nandi hill  snr

 ಚಿಕ್ಕಬಳ್ಳಾಪುರ  : ಸಮಶೀತೋಷ್ಣ ಹವಾಮಾನಕ್ಕೆ ಹೆಸರುವಾಸಿಯಾಗಿರುವ ನಂದಿಗಿರಿ ಧಾಮದಲ್ಲಿ ಬೇಸಿಗೆ ಬಂತೆಂದರೆ ಸಾಕು ಗಿಡಮರಗಳೆಲ್ಲಾ ಒಣಗಿ ಪ್ರೇತಕಳೆ ಆವರಿಸುತ್ತದೆ. ಗಿಡಮರಬಳ್ಳಿಗಳು ಒತ್ತಟ್ಟಿಗಿರಲಿ ಪ್ರವಾಸಿಗರಾದಿಯಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಏರ್ಪಟ್ಟಿದೆ. ಆದರೆ ಗಿರಿಧಾಮಕ್ಕೆ ಹಿಡಿದಿರುವ ಜಲಕಂಠಕ ದೂರ ಮಾಡುವ ಯಾವುದೇ ಪ್ರಯತ್ನಗಳನ್ನು ಕೈಗೊಂಡಿಲ್ಲ.

ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಿಸಲು ಜಿಲ್ಲಾಡಳಿತ ತೀರ್ಮಾನಿಸಿದಂತೆ, ನಂದಿಗಿರಿಧಾಮದಲ್ಲಿಯೂ ಸಹ ನಿಷೇಧ ಹೇರಿದೆ. ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸುವ ಕಾನೂನನ್ನು ಸಂಪೂರ್ಣವಾಗಿ ಅನುಷ್ಟಾನಕ್ಕೆ ತಂದಿರುವ ಪ್ರವಾಸೋಧ್ಯಮ ಇಲಾಖೆ ನಂದಿಗಿರಿಧಾಮದ ಪ್ರವೇಶ ದ್ವಾರದಲ್ಲಿಯೇ ಪ್ರವಾಸಿಗರಿಂದ ನೀರಿನ ಬಾಟಲ್ ಕಿತ್ತುಕೊಂಡು ಬರಿಗೈಯಲ್ಲಿ ಒಳಗೆ ಬಿಡುತ್ತದೆ.

ನಂದಿ ಹಿಲ್ಸ್‌ನಲ್ಲಿ ಮಾತ್ರವಲ್ಲ ಬೆಂಗಳೂರಿನ ಈ ಸ್ಥಳಗಳಲ್ಲೂ ಸನ್‌ರೈಸ್‌ ಸಖತ್ತಾಗಿರುತ್ತೆ, ಮಿಸ್ ಮಾಡ್ಬೇಡಿ

ನೀರು ಪೂರೈಕೆಗೆ ವ್ಯವಸ್ಥೆ ಇಲ್ಲ

ಆದರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಪರ್ಯಾಯ ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ. ಗಿರಿಧಾಮದಲ್ಲಿ ಶುದ್ಧಕುಡಿಯುವ ನೀರನ್ನು ಒದಗಿಸುವಲ್ಲಿ ಪ್ರವಾಸೋಧ್ಯಮ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ನೀರಿನ ಪ್ಲಾಸ್ಟಿಕ್‌ ಬಾಟಲ್‌ ನಿಷೇಧ ಸ್ವಾಗತಾರ್ಹ, ಹಾಗಂತ ನೀರು ಕುಡಿಯದೆ ಇರಲು ಸಾಧ್ಯವೇ ಎಂಬ ಪ್ರಶ್ನೆಗೆ ಪ್ರವಾಸೋದ್ಯಮ ಇಲಾಖೆಯೇ ಉತ್ತರಿಸಬೇಕಿದೆ.

ಆದರೆ ಇಲ್ಲಿಂದ ಬೆಟ್ಟದ ಮೇಲೆ ನಡೆದುಕೊಂಡು ಬರುವವರಿಗೆ ಒಂದೆರಡು ಕಡೆ ಕುಡಿಯುವ ನೀರಿನ ಘಟಕ ಇದೆ. ಆದರೆ ಇದು ಚಾಲೂ ಆಗಬೇಕಾದರೆ ಬೋರ್‌ವೆಲ್ ಸುಸ್ಥಿತಿಯಲ್ಲಿರಬೇಕು, ಜತೆಗೆ ವಿದ್ಯುತ್ ಇರಬೇಕು.ಇದರಿಂದಾಗಿ ಪ್ರವಾಸಿಗರು ದಾಹನೀಗಿಸಿಕೊಳ್ಳಲು ಪರದಾಟ ನಡೆಸುವಂತಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ ಬೋರ್‌ವೆಲ್‌ನಲ್ಲಿ ನೀರಿಲ್ಲ, ರಿಪೇರಿ ಮಾಡಿಸೋಣ ಎಂದರೆ ಕರೆಂಟಿಲ್ಲ ಎಂದು ಸಬೂಬು ಹೇಳುತ್ತಾರೆ.

ಬೆಟ್ಟದಲ್ಲಿ ನೀರಿನ ಬಾಟಲ್‌ ಮಾರಾಟ

ನಂದಿ ಬೆಟ್ಟದ ಪ್ರವೇಶದ್ವಾರ ಬಿಟ್ಟರೆ ಬೆಟ್ಟದ ಮೇಲಿರುವ ಪ್ರವಾಸೋಧ್ಯಮ ಇಲಾಖೆಯ ಅಂಗಡಿಗಳಲ್ಲಿಯೇ ನೀರು ದೊರೆಯುತ್ತದೆ. ಇಲ್ಲಿ ಒಂದು ಲೀಟರ್‌ಗೆ 50 ರೂಪಾಯಿ ತೆರಬೇಕು. ಇಲ್ಲಿ ಖರೀದಿಸುವ ಬಾಟಲ್‌ಗಳ ಮೇಲೆ ನಿಷೇಧ ಹೇರದಿರುವುದು ಯಾಕೆ? ನಾವು ತರುವ ಬಾಟಲ್ ಮಾತ್ರ ಹೇಗೆ ಪ್ರಕೃತಿಗೆ ಮಾರಕ ಎನ್ನುವುದು ಪ್ರವಾಸಿಗರ ಪ್ರಶ್ನೆ.

ನಂದಿ ಬೆಟ್ಟದ ಉಸ್ತುವಾರಿ ತೋಟಗಾರಿಕೆ ಇಲಾಖೆಯಿಂದ ಪ್ರವಾಸೋಧ್ಯಮ ಇಲಾಖೆಯ ಸುಪರ್ಧಿಗೆ ಹೋದ ನಂತರ ಪ್ರತಿಯೊಂದೂ ಸಹ ವಾಣಿಜ್ಯೀಕರಣವಾಗಿದೆ. ಇಲ್ಲಿನ ತಿಂಡಿ ತೀರ್ಥದ ಬೆಲೆ ಗಗನಕ್ಕೆ ಮುಟ್ಟಿದೆ. ಯಾವುದು ಏನೇ ಆಗಲಿ ಕುಡಿಯುವ ನೀರಿನ ಬಾಟಲ್‌ಗೆ ನಿಷೇಧ ಹೇರಿರುವುದು ತಪ್ಪು. ಊಟಿ ಮಾದರಿಯಲ್ಲಿ ಬಾಟಲ್‌ಗೆ ಡೆಫಾಸಿಟ್ ಪಡೆದು ಒಳಗೆ ಬಿಡುವ ವ್ಯವಸ್ಥೆ ಮಾಡಿದರೆ ಚೆನ್ನ ಎನ್ನುವುದು ಹಿರಿಯ ಪ್ರವಾಸಿಗರೊಬ್ಬರ ಅಭಿಪ್ರಾಯವಾಗಿದೆ.

ನಂದಿಬೆಟ್ಟದ ಮೇಲೆ ಬರುವ ಪ್ರಯಾಣಿಕರ ವಾಹನಗಳನ್ನು ಪ್ರವೇಶ ದ್ವಾರದ ಕೆಳಗಿರುವ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡುವುದರಿಂದ ಪ್ರವಾಸಿಗರು ಬೆಟ್ಟದ ಮೇಲೆ ಹೋಗಲು ಪ್ರವಾಸೋದ್ಯಮ ಇಲಾಖೆ ಬಸ್ ವ್ಯವಸ್ಥೆ ಮಾಡಿದೆ. ಇದಕ್ಕಾಗಿ ಟಿಕೆಟ್‌ಗೆ ತಲಾ 25 ರುಪಾಯಿ ಶುಲ್ಕ ವಿಧಿಸುತ್ತಿರುವುದಕ್ಕೆ ಪ್ರವಾಸಿದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿಯೇ ಬಿಎಂಟಿಸಿ ಕಿ.ಮೀ.ಗೆ 7 ರಿಂದ 10 ರೂಪಾಯಿ ಇಟ್ಟಿದೆ. ಆದರೆ ಇಲ್ಲಿ ಅರ್ಧ ಕಿ.ಮಿ.ಗೆ 25 ರೂಪಾಯಿ ವಿಧಿಸಲಾಗಿದೆ ಎನ್ನುವುದು ಪ್ರವಾಸಿಗರ ಆಕ್ಷೇಪ.

ಬೆಟ್ಟದ ಮೇಲೆ ಮಯೂರ ಫೈನ್ ಟಾಪ್ ಪೈವ್ ಸ್ಟಾರ್ ಹೋಟಲ್, ಗಾಂಧಿ ಭವನ, ನೆಹರು ಭವನ, ಕಾಟೇಜ್‌ಗಳು ಸೇರಿದಂತೆ ವಿವಿಧ ಅತಿಥಿ ಗೃಹಗಳು ಇವೆ. ಆದರೂ ಇಲ್ಲಿಗೆ ಬರುವ ಪ್ರವಾಸಿಗರಿಗೆ ಸರಿಯಾದ ಕುಡಿಯುವ ನೀರು, ಶೌಚಾಲಯಗಳ ಕೊರತೆ ಇದೆ. ಈಗ ಬೇಸಿಗೆಯಲ್ಲಂತೂ ನೀರಿಗೆ ಆಗಾಗ ತತ್ವಾರ ಎದುರಾಗುತ್ತಲೇ ಇದೆ. ಕೊರತೆಗಳನ್ನು ನೀಗಿಸಲು ಪ್ರವಾಸೋದ್ಯಮ ಇಲಾಖೆ ತಲೆಕೆಡಿಸಿಕೊಳ್ಳುತ್ತಿಲ್ಲ.

ನಂದಿ ಬೆಟ್ಟ ಬೇಸಿಗೆಯ ಬಿರು ಬಿಸಿಲಿನಿಂದಾಗಿ ಕಾದ ಕಾವಲಿಯಂತಾಗಿದೆ. ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ನೀರಿನ ಸರಬರಾಜು ಮಾಡುವ ತೋಟಗಾರಿಕೆ ಇಲಾಖೆಯಾಗಲಿ, ಪ್ರವಾಸೋಧ್ಯಮ ಇಲಾಖೆಯಾಗಲಿ ಕುಡಿಯುವ ನೀರನ್ನು ಒದಗಿಸಲು ತುರ್ತಾಗಿ ಕ್ರಮತೆಗೆದುಕೊಳ್ಳಬೇಕಿದೆ.

Latest Videos
Follow Us:
Download App:
  • android
  • ios