ಮೈಸೂರು : ಈ ಬಾರಿಯಾದರೂ ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಆಗುವುದೇ?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ಫೆ.16 ರಂದು ಎರಡನೇ ಬಜೆಟ್ ಮಂಡಿಸುತ್ತಿದೆ. ಮೈಸೂರು ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ಒಟ್ಟಾರೆ ಹದಿನೈದನೇ ಬಜೆಟ್ ಇದಾಗಿದೆ. ಇದರಿಂದ ಸಹಜವಾಗಿಯೇ ತವರು ಜಿಲ್ಲೆಗೆ ಏನೆಲ್ಲಾ ಯೋಜನೆ, ಸೌಲಭ್ಯ ಕಲ್ಪಿಸಬಹುದು ಎಂಬ ನಿರೀಕ್ಷೆ ಇದ್ದೇ ಇರುತ್ತದೆ.
ಮಹೇಂದ್ರ ದೇವನೂರು
ಮೈಸೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ಫೆ.16 ರಂದು ಎರಡನೇ ಬಜೆಟ್ ಮಂಡಿಸುತ್ತಿದೆ. ಮೈಸೂರು ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ಒಟ್ಟಾರೆ ಹದಿನೈದನೇ ಬಜೆಟ್ ಇದಾಗಿದೆ. ಇದರಿಂದ ಸಹಜವಾಗಿಯೇ ತವರು ಜಿಲ್ಲೆಗೆ ಏನೆಲ್ಲಾ ಯೋಜನೆ, ಸೌಲಭ್ಯ ಕಲ್ಪಿಸಬಹುದು ಎಂಬ ನಿರೀಕ್ಷೆ ಇದ್ದೇ ಇರುತ್ತದೆ.
ಜಿಲ್ಲೆಗೆ ಮೂಲಭೂತ ಸೌಲಭ್ಯ, ಕೈಗಾರಿಕೆ ಅಭಿವೃದ್ಧಿ, ಪ್ರವಾಸೋದ್ಯಮ, ರೈತರ ಕಲ್ಯಾಣ ಸೇರಿದಂತೆ ಹಲವು ಮತ್ತರ ಯೋಜನೆ ಕಲ್ಪಿಸಲು ಇದು ಸಕಾಲ.
ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಬೇಡಿಕೆ ತೀರಾ ಹಳೆಯದು. ಅನೇಕ ಬಾರಿ ಸರ್ಕಾರದ ಮುಂದೆ ಕೈಗಾರಿಕೋದ್ಯಮಿಗಳು ಈ ಪ್ರಸ್ತಾವನೆಯನ್ನು ಇಟ್ಟಿದ್ದಾರೆ. ಆದರೆ ಈವರೆಗೂ ಕಾರ್ಯಗತವಾಗಿಲ್ಲ. ಆದರೆ ಈ ಬಾರಿಯಾದರೂ ಇದಕ್ಕೆ ಮನ್ನಣೆ ನೀಡುವ ನಿರೀಕ್ಷೆ ಇದೆ.
ಈ ಪ್ರಕ್ರಿಯೆ 1998 ರಲ್ಲಿ ಪ್ರಾರಂಭವಾಗಿ 2003ರಲ್ಲಿ ಕರ್ನಾಟಕ ಪುರಸಭೆಗಳ ಅಧಿನಿಯಮ 1964ಕ್ಕೆ, 364ಎ ಸೇರ್ಪಡೆಯೊಂದಿಗೆ ತಿದ್ದುಪಡಿ ಮಾಡಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಚಾಲನೆ ನೀಡಲಾಗಿದೆ. ಪ್ರಸ್ತುತ ಹೂಟಗಳ್ಳಿ ನಗರಸಭೆಗೆ ಸೇರಿದ್ದು, ತೆರಿಗೆಯನ್ನು ನಗರಸಭೆಗೆ ಹೋಗುತ್ತಿದೆ. ನಿರ್ವಹಣಾ ವೆಚ್ಚವನ್ನು ಕೆಐಎಡಿಬಿ ಕಟ್ಟಡ ನಿರ್ಮಾಣ, ನಕ್ಷೆ ಅನುಮೋದಿಸಿದ ನಂತರ ಹೂಟಗಳ್ಳಿ ನಗರಸಭೆ ನಿರ್ಮಾಣ ಲೈಸೆನ್ಸ್ ನೀಡುತ್ತಿದೆ. ಒಟ್ಟಾರೆ ಎರಡು ಸಂಸ್ಥೆಯಿಂದ ಅನುಮೋದನೆ ಪಡೆಯುವುದು, ತೆರಿಗೆ ಪಾವತಿಸುವುದು, ಈಸ್ ಆಫ್ಡೂಯಗ್್ ಬಿಸಿನೆಸ್‌ಗೆ ವ್ಯತಿರಿಕ್ತವಾಗಿದೆ.
ಹೂಟಗಳ್ಳಿ ನಗರಸಭೆಗೆ ಕಳೆದ ಮೂರು ವರ್ಷದಲ್ಲಿ 65 ಕೋಟಿ ರು.ಗೂ ಹೆಚ್ಚು ತೆರಿಗೆಯನ್ನು ಕೈಗಾರಿಕಾ ಪ್ರದೇಶದ ಉದ್ಯಮಿಗಳು ಪಾವತಿಸಿದ್ದೇವೆ. ಆದರೆ ಈ ಪ್ರದೇಶದ ಮೂಲಭೂತ ಅಗತ್ಯತೆಗಳ ಪೂರೈಕೆಯಲ್ಲಿ ನಗರಸಭೆ ವಿಫಲವಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಸ್ತುತ ಬಜೆಟಿನಲ್ಲಿ ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಪ್ರಕಟಿಸಿ ಅಗತ್ಯ ಆಯುಕ್ತರು ಮತ್ತು ಸಿಬ್ಬಂದಿ ನಿಯೋಜಿಸಬೇಕಾಗಿ ಮೈಸೂರು ಕೈಗಾರಿಕೆಗಳ ಸಂಘ ಸರ್ಕಾರವನ್ನು ಆಗ್ರಹಿಸಿದೆ.
ಕೈಗಾರಿಕೆಗಳಿಗೆ ವಿದ್ಯುತ್ ದರದಲ್ಲಿ ಅಡ್ಡ ಸಹಾಯಧನ ಹೊರೆಯಿಂದ ಕಾಪಾಡಬೇಕು, ಕೆಇಆರ್‌ಸಿ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಮೈಸೂರು ರಫ್ತು ಕೇಂದ್ರದ ನಿರ್ಮಾಣ ಕಾಮಗಾರಿ ಪುನಾರಂಭಿಸಬೇಕು, ರಾಜ್ಯ ಸರ್ಕಾರದ ಪಾಲಿನ 2ನೇ ಕಂತಿನ ಅನುದಾನ 1 ಕೋಟಿಯನ್ನು ಬಜೆಟ್ನಲ್ಲಿ ಒದಗಿಸಬೇಕು ಮತ್ತು ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿ ಸಂಘ ಕೋರಿದೆ.
ಹಿಂದುಳಿದ ವರ್ಗ 2ಎ ಮತ್ತು ಮತೀಯ ಅಲ್ಪಸಂಖ್ಯಾತ ವರ್ಗದವರಿಗೆ ಕೆಐಎಡಿಬಿ/ ಕೆಎಸ್ಎಸ್ಐಡಿಸಿ ಮಂಜೂರು ಮಾಡುವ ಕೈಗಾರಿಕಾ ಶೆಡ್ಡು, ನಿವೇಶನವನ್ನು ಶೇ. 25ರಷ್ಟು ರಿಯಾಯಿತಿ ಮತ್ತು ಸುಲಭ ಕಂತಿನ ಯೋಜನೆಯನ್ನು ಪುನಾರಂಭಿಸಬೇಕು ಮತ್ತು 2020-25ರ ಕೈಗಾರಿಕಾ ನೀತಿಯನ್ನು ಪುನರ್ ಪರಿಷ್ಕರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ಕೈಗಾರಿಕಾ ಟೌನ್ ಶಿಪ್ ನಿರ್ಮಾಣವಾಗಬೇಕು. ಕೈಗಾರಿಕೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗಿದೆ. ಅಲ್ಲದೆ ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಮೈಸೂರು ನಗರದಲ್ಲಿ ವಾಹನ ನಿಲುಗಡೆ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
- ಕೆ.ಬಿ. ಲಿಂಗರಾಜು, ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷರು.
ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಇದರಿಂದ ರಹದಾರಿ ಪಡೆಯಲು ಮತ್ತು ತೆರಿಗೆ ಪಾವತಿಸುವ ಪ್ರಕ್ರಿಯೆ ಸುಲಭವಾಗುತ್ತದೆ. ಇದರಿಂದ ಸರ್ಕಾರಕ್ಕೆ ಆರ್ಥಿಕ ಬೆಂಬಲದ ಅಗತ್ಯವಿಲ್ಲ.
- ಸುರೇಶ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ, ಮೈಸೂರು ಕೈಗಾರಿಕೆಗಳ ಸಂಘ.