ಲಾಕ್‌ಡೌನ್‌ ಮಾನ ಬೀದೀಲಿ ಹರಾಜು ಹಾಕಿದ ದಾವಣಗೆರೆ!

ಅನಗತ್ಯವಾಗಿ ಸುತ್ತಾಡುವವರು, ವಾಹನಗಳೇ ಪೊಲೀಸರಿಗೂ ತಲೆನೋವು| ಜನರಲ್ಲಿ ಕಂಡುಬಾರದ ಸಾಮಾಜಿಕ ಅಂತರ, ಸ್ವಯಂಪ್ರೇರಣೆಯ ಜಾಗೃತಿ| ಮಾರುಕಟ್ಟೆಗೆ ಹೋಗುವವರಿಗೆ ಮೊದಲು ಕಡಿವಾಣ ಹಾಕಬೇಕಾಗಿದೆ| ಮನೆ, ಅಂಗಡಿ, ಮುಂಗಟ್ಟುಗಳ ಸಿಸಿ ಕ್ಯಾಮೆರಾವನ್ನು ರಸ್ತೆಯಲ್ಲಿ ಸಾಗುವ ವಾಹನಗಳತ್ತ ಕೇಂದ್ರೀಕರಿಸುವಂತೆ ವ್ಯವಸ್ಥೆ ಮಾಡಬೇಕಿದೆ|

People did not Social Distance in Davanagere During India LockDown

ದಾವಣಗೆರೆ(ಏ.20): ನಗರ, ಜಿಲ್ಲೆಯಲ್ಲಿ ಪ್ರಧಾನಿ, ಸಿಎಂ, ಜಿಲ್ಲಾಡಳಿತ ಮನವಿಗೆ ಕಿಮ್ಮತ್ತು ನೀಡದೇ ಜನ ಎಂದಿನ ತಮ್ಮ ನಿರ್ಲಕ್ಷ್ಯ ಪ್ರದರ್ಶಿಸುತ್ತಿರುವುದು ದಿನವೂ ಜಗಜ್ಜಾಹೀರಾಗುತ್ತಿದೆ. ಇದನ್ನು ಕಂಡವರೆಲ್ಲ ಹೀಗೇ ಹೇಳಿ ಗೇಲಿ ಮಾಡುತ್ತಿದ್ದಾರೆ.

ದೇಶಾದ್ಯಂತ 2ನೇ ಹಂತದ ಲಾಕ್‌ ಡೌನ್‌ ನಂತರ ಮೊದಲ ಭಾನುವಾರ ನಗರ, ಜಿಲ್ಲಾ ಕೇಂದ್ರದಲ್ಲಿ ಜನಸಂಚಾರ, ವಾಹನ ಸಂಚಾರ ಕಂಡು ಎಂದಿನಂತೆ ಕಂಡುಬಂದಿತು. ಸಂತೆ ದಿನವಾಗಿದ್ದರೂ ಲಾಕ್‌ ಡೌನ್‌ ಹಿನ್ನೆಲೆ ಅಂತಹ ವಹಿವಾಟು ಇರಲಿಲ್ಲ. ಕೆ.ಆರ್‌. ಮಾರುಕಟ್ಟೆ, ಗಡಿಯಾರ ಕಂಬ, ಹಗೇದಿಬ್ಬ ವೃತ್ತ, ಬೇತೂರು ರಸ್ತೆ, ಹಳೇ ದಾವಣಗೆರೆ, ಆಜಾದ್‌ ನಗರ, ಭಾಷಾ ನಗರ, ಕೆಟಿಜೆ ನಗರ, ವಿನೋಬ ನಗರ, ಲೇಬರ್‌ ಕಾಲನಿ, ಭಗತ್‌ ಸಿಂಗ್‌ ನಗರ, ನಿಟುವಳ್ಳಿ, ಎಚ್‌ಕೆಆರ್‌ ವೃತ್ತ, ಯಲ್ಲಮ್ಮ ನಗರ, ಅನೇಕ ಕಡೆ ಜನಸಂಚಾರ ಸಾಮಾನ್ಯ ಎಂಬಂತಿತ್ತು.

ಲಾಕ್‌ಡೌನ್ ಉಲ್ಲಂಘಿಸಿದ 125 ಜನ ಬಂಧನ

ಕೋವಿಡ್‌-19 ವೈರಸ್‌ ನಿಯಂತ್ರಿಸಲು ಸರ್ಕಾರ, ಜಿಲ್ಲಾಡಳಿತ ಲಾಕ್‌ ಡೌನ್‌, ನಿಷೇಧಾಜ್ಞೆ, ಕರ್ಫ್ಯೂ  ಜಾರಿಗೊಳಿಸಿದೆ. ಆದರೂ ಕೆಲ ಕಿಡಿಗೇಡಿಗಳು, ಅನವಶ್ಯಕವಾಗಿ ರಸ್ತೆಗೆ ಇಳಿಯುವವರು, ಅನಗತ್ಯ ಗುಂಪು ಸೇರುವವರು, ವಿನಾಕಾರಣ ಕಾರು, ದ್ವಿಚಕ್ರ ವಾಹನಗಳಲ್ಲಿ ವ್ಯರ್ಥವಾಗಿ ಸುತ್ತುವವರೇ ಈಗ ತಲೆನೋವಾಗಿದ್ದಾರೆ. ಪೊಲೀಸ್‌ ಜೀಪು ಸೇರಿದಂತೆ ದೊಡ್ಡ ವಾಹನ ತಮ್ಮ ಭಾಗಕ್ಕೆ ಪ್ರವೇಶಿಸಬಾರದು ಎಂದು ರಸ್ತೆ ಪ್ರವೇಶ ಸ್ಥಳ ಬಂದ್‌ ಮಾಡಿರುವ ನಿದರ್ಶನಗಳೂ ಇವೆ.

ನಗರದಲ್ಲಿ ಭಾನುವಾರ ಹಿನ್ನೆಲೆ ಕುರಿ, ಕೋಳಿ, ಮೀನು ಮಾಂಸ ಮಾರಾಟ ಜೋರಾಗಿತ್ತು. ಅನೇಕ ಕಡೆ ಇಂದಿಗೂ ವೈರಸ್‌ ಗಂಭೀರತೆ ಅರಿತಿಲ್ಲ. ನ್ಯಾಯಬೆಲೆ ಅಂಗಡಿ, ಕಿರಾಣಿ ಅಂಗಡಿ, ಮಾಂಸದಂಗಡಿಗಳ ಬಳಿ ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಸೇರುತ್ತಿದ್ದಾರೆ.

ಮನೆಗಳ ಮುಂದೆಯೇ ಎಪಿಎಂಸಿ ನಿಗದಿಪಡಿಸಿದ ದರದಲ್ಲಿ ಹಣ್ಣು, ಸೊಪ್ಪು, ತರಕಾರಿ ಮಾರುವ ಗಾಡಿಗಳು ಬರುತ್ತವೆ. ಹೀಗಿದ್ದರೂ ಮಾಲ್‌, ಮಾರುಕಟ್ಟೆಗೆ ಹೋಗುವವರಿಗೆ ಮೊದಲು ಕಡಿವಾಣ ಹಾಕಬೇಕಾಗಿದೆ. ದಾರಿಯಲ್ಲಿ ಓಡಾಡುವ ಜನರು, ವಾಹನಗಳ ಚಾಲಕರಿಗೆ ಕಾಯಂ ವಿಳಾಸ, ವಾಸದ ವಿಳಾಸ, ಕಚೇರಿ ಮತ್ತಿತರ ವಿಷಯಗಳನ್ನು ಕೂಲಂಕುಶವಾಗಿ ವಿಚಾರಿಸಿ, ಪರಿಶೀಲಿಸಿ ವಾಹನ ಜಪ್ತಿ, ದೂರು ದಾಖಲಿನಂಥ ಕ್ರಮ ಕೈಗೊಳ್ಳುತ್ತಿದ್ದಾರೆ.

ವಿನಾಕಾರಣ ವಾಹನಗಳಲ್ಲಿ ಅಲೆಯುವವರು ಜನ ವಸತಿ ಪ್ರದೇಶದ ಕ್ರಾಸ್‌, ಮುಖ್ಯ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ. ಈ ಬಗ್ಗೆ ಆಯಾ ಠಾಣೆ ಎಸ್‌ಐ, ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ಸೂಕ್ತ ನಿರ್ದೇಶನ ನೀಡಬೇಕಿದೆ. ಆಯಾ ಭಾಗದ ಮನೆ, ಅಂಗಡಿ, ಮುಂಗಟ್ಟುಗಳ ಸಿಸಿ ಕ್ಯಾಮೆರಾವನ್ನು ರಸ್ತೆಯಲ್ಲಿ ಸಾಗುವ ವಾಹನಗಳತ್ತ ಕೇಂದ್ರೀಕರಿಸುವಂತೆ ವ್ಯವಸ್ಥೆ ಮಾಡಬೇಕಿದೆ. ಈ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆ ಗಮನಹರಿಸಬೇಕಿದೆ.
 

Latest Videos
Follow Us:
Download App:
  • android
  • ios