ಹಾವೇರಿ(ಮೇ.22): ಲಾಕ್‌ಡೌನ್‌ ಸಡಲಿಕೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಜನರ ದಟ್ಟಣೆ ಹೆಚ್ಚುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಸಾರ್ವಜನಿಕರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಅಲ್ಲದೇ ಯಾವ ಕಚೇರಿಗಳಲ್ಲೂ ಸ್ಯಾನಿಟೈಸರ್‌ ಇತ್ಯಾದಿ ಸುರಕ್ಷತಾ ಕ್ರಮ ಅನುಸರಿಸುತ್ತಿಲ್ಲ.

ನಗರದ ತಹಸೀಲ್ದಾರ್‌ ಕಚೇರಿಗೆ ವಿವಿಧ ಕಾಗದಪತ್ರ ಪಡೆಯಲು ಆಗಮಿಸುವ ಸಾರ್ವಜನಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಚೇರಿ ಬಾಗಿಲು ತೆಗೆಯುವ ಮುನ್ನವೇ ವಿವಿಧ ಗ್ರಾಮಗಳಿಂದ ಆಗಮಿಸುವ ಸಾರ್ವಜನಿಕರು ಕಚೇರಿಯ ಆವರಣದಲ್ಲಿರುವ ಅಟಲ್‌ಜೀ ಜನಸ್ನೇಹಿ ಕೇಂದ್ರದ ಎದುರು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದು, ಇಲ್ಲಿ ಯಾರೊಬ್ಬರು ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳಲದೇ ನಿರ್ಲಕ್ಷ್ಯ ತೋರುತ್ತಿದ್ದಾರೆ.

ಲಾಕ್‌ಡೌನ್‌ 4.0: ಹಾವೇರಿ ಜಿಲ್ಲೆಗೆ ವಿಶೇಷ ಆರ್ಥಿಕ ಪ್ಯಾಕೇಜ್‌ ರೂಪಿಸಿ, ಸಚಿವ ಬೊಮ್ಮಾಯಿ

ಅಟಲ್‌ಜೀ ಜನಸ್ನೇಹಿ ಕೇಂದ್ರ ತೆರೆಯುತ್ತಿದ್ದಂತೆ ಸಾರ್ವಜನಿಕರು ವಿವಿಧ ಕಾಗದ ಪತ್ರಗಳ್ನು ಪಡೆಯಲು ಮುಗಿ ಬಿಳುತ್ತಿದ್ದು, ಈ ಸಂದರ್ಭದಲ್ಲಿ ನೂಕುನುಗ್ಗಲು ಕಂಡು ಬರುತ್ತಿದೆ. ಸಾರ್ವಜನಿಕರನ್ನು ನಿಯಂತ್ರಿಸಲು ಕಚೇರಿಯ ಆವರಣದಲ್ಲಿ ಸಿಬ್ಬಂದಿ ನೇಮಕ ಮಾಡದೇ ನಿರ್ಲಕ್ಷ್ಯ ತೋರುತ್ತಿರುವುದರಿಂದ ತಹಸೀಲ್ದಾರ್‌ ಕಚೇರಿಯ ಆವರಣದಲ್ಲಿ ಸಾಮಾಜಿಕ ಅಂತರ ಮರೀಚಿಕೆಯಾಗಿದೆ.

ಸುರಕ್ಷತಾ ಕ್ರಮವಿಲ್ಲ:

ಕಚೇರಿಗೆ ಆಗಮಿಸುವ ಸಾರ್ವಜನಿಕರನ್ನು ಥರ್ಮಲ್‌ ಸ್ಕ್ರೀನಿಂಗ್‌ ಮಾಡದೇ ಕಚೇರಿಯ ಆವರಣಕ್ಕೆ ಬಿಡಲಾಗುತ್ತಿದೆ. ಇದು ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೇ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಥರ್ಮಲ್‌ ಸ್ಕ್ರೀನಿಂಗ್‌ ಹಾಗೂ ಸ್ಯಾನಿಟೈಸರ್‌ ವ್ಯವಸ್ಥೆ ಮಾಡದೇ ಇರುವುದು ಕಂಡು ಬರುತ್ತಿದ್ದು, ನಿತ್ಯ ನೂರಾರು ಜನರು ಭೇಟಿ ನೀಡುವ ಸರ್ಕಾರಿ ಕಚೇರಿಗಳಲ್ಲಿಯೇ ಈ ರೀತಿ ನಿರ್ಲಕ್ಷ್ಯ ತೋರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಬಸ್‌ ನಿಲ್ದಾಣದಲ್ಲೂ ಅಷ್ಟೇ:

ನಗರದ ಕೇಂದ್ರ ಬಸ್‌ ನಿಲ್ದಾಣದಿಂದ ಅಂತರ್‌ ಜಿಲ್ಲಾ ಬಸ್‌ ಸಂಚಾರ ಆರಂಭಗೊಂಡಿದ್ದರಿಂದ ಬಸ್‌ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಗುಂಪು ಗುಂಪಾಗಿ ನಿಲ್ಲುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ನಿರ್ಲಕ್ಷಿಸುತ್ತಿದ್ದಾರೆ. ನಿತ್ಯ ವಿವಿಧ ಜಿಲ್ಲೆಗಳಿಂದ ಊರಿಗೆ ತೆರಳಲು ನೂರಾರು ಜನ ಬಸ್‌ ನಿಲ್ದಾಣದಲ್ಲಿ ಜಮಾಯಿಸುತ್ತಿದ್ದು, ಬಸ್‌ ಬರುತ್ತಿದ್ದಂತೆ ಪ್ರಯಾಣಿಕರು ಸಾಮಾಜಿಕ ಅಂತರ ಮರೆತು ಗುಂಪಾಗಿ ಬಸ್‌ ಹತ್ತುತ್ತಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುವವರಿಗೆ ಸ್ಯಾನಿಟೈಸ್‌ರ್‌ ವ್ಯವಸ್ಥೆ ಹಾಗೂ ಥರ್ಮಲ್‌ ಸ್ಕ್ರೀನಿಂಗ್‌ ಮಾಡುವ ವ್ಯವಸ್ಥೆಯೂ ಎಲ್ಲೂ ಕಂಡುಬರುತ್ತಿಲ್ಲ.

ಹೊರ ಜಿಲ್ಲೆಗಳಿಂದ ನಿತ್ಯ ಸಾವಿರಾರು ಜನರು ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಸವಣೂರಿನಲ್ಲಿ 2 ಮತ್ತು ಶಿಗ್ಗಾಂವಿಯಲ್ಲಿ 1 ಕೊರೋನಾ ಪಾಸಿಟಿವ್‌ ಕೇಸ್‌ ಬಿಟ್ಟರೆ ಇನ್ನುಳಿದ ತಾಲೂಕುಗಳಲ್ಲಿ ಸೋಂಕು ಪತ್ತೆಯಾಗಿಲ್ಲ. ಈಗ ಬೇಕಾಬಿಟ್ಟಿಯಾಗಿ ಓಡಾಡಲು ಬಿಟ್ಟರೆ ವೈರಸ್‌ ಸ್ಫೋಟಗೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಗ್ರಾಮೀಣ ಭಾಗಗಳಿಗೆ ಬಿಡುವ ಕೆಲವು ಬಸ್‌ಗಳಲ್ಲಿ ನಿಗದಿಗಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತಿದೆ. ಊರಿಗೆ ಹೋಗುವ ಧಾವಂತದಲ್ಲಿ ಸಾರ್ವಜನಿಕರೂ ನಿಯಮ ಪಾಲನೆ ಮಾಡುತ್ತಿಲ್ಲ.

ನಗರದ ವಿವಿಧ ಬ್ಯಾಂಕ್‌ಗಳಲ್ಲಿ ಸಹ ಗ್ರಾಹಕರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದು, ಇಲ್ಲಿ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗ್ರಾಹಕರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಲಾಕ್‌ಡೌನ್‌ ಸಡಲಿಕೆಯಿಂದ ನಗರದ ಮಾರುಕಟ್ಟೆಪ್ರದೇಶದಲ್ಲಿ ಜನರ ಸಂಚಾರ ದಟ್ಟಣೆ ಹೆಚ್ಚಾಗಿ ಕಂಡು ಬರುತ್ತಿದ್ದು, ಸಾಮಾಜಿಕ ಅಂತರ ಕಾಯ್ದಕೊಳ್ಳುವಲ್ಲಿ ಸಾರ್ವಜನಿಕರು ನಿಲಕ್ಷ್ಯ ತೋರುತ್ತಿದ್ದಾರೆ.

ಜನಪ್ರತಿನಿಧಿಗಳು ಬಂದ ಸಂದರ್ಭದಲ್ಲಂತೂ ಅಧಿಕಾರಿಗಳೇ ಅವರ ಸುತ್ತುವರಿದು ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಅಧಿಕಾರಿಗಳಿಗೆ ಒಂದು ನಿಯಮ, ಸಾರ್ವಜನಿಕರಿಗೆ ಒಂದು ನಿಯಮ ಇದೆಯೇ ಎಂದು ಜನರೇ ಪ್ರಶ್ನಿಸುವಂತಾಗಿದೆ.