ಕೆ.ಎಂ. ಮಂಜುನಾಥ್‌

ಬಳ್ಳಾರಿ(ಏ.13):
ಲಾಕ್‌ಡೌನ್‌ನಿಂದ ಸಮಸ್ಯೆ ಎದುರಿಸುತ್ತಿರುವ ಬಡ ಕುಟುಂಬಗಳಿಗೆ ನೆರವು ನೀಡಲು ಜಿಲ್ಲೆಯಲ್ಲಿ ನೂರಾರು ಸಂಸ್ಥೆಗಳು, ದಾನಿಗಳು ಮುಂದೆ ಬರುತ್ತಿದ್ದಾರೆ. ಇದು ಸಮಾಧಾನಕರ ಸಂಗತಿಯೆ. ಆದರೆ, ಇದು ಬರೀ ನಗರ ಕೇಂದ್ರೀತವಾಗುತ್ತಿದೆ ಎಂಬ ಬೇಸರ ಹಳ್ಳಿ ವಲಯದಿಂದ ಕೇಳಿ ಬರುತ್ತಿವೆ.

ಹೌದು. ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆದ ಬಳಿಕ ಜಿಲ್ಲೆಯ ಮಾನವೀಯ ಮನಸ್ಸುಗಳು ಸಂಕಷ್ಟದಿಂದ ಬಳಲುವ ಜನಸಮುದಾಯದ ನೆರವಿಗೆ ನಿಂತಿವೆ. ಹಸಿವು, ಆಶ್ರಯ, ಹಣ, ದುಡಿಮೆಯಿಲ್ಲದೆ ಊಟಕ್ಕಾಗಿ ಪರದಾಡುವ ಕುಟುಂಬಗಳು ಸಂಘ-ಸಂಸ್ಥೆಗಳು ನೀಡುವ ಸಣ್ಣದೊಂದು ನೆರವಿನಿಂದ ಒಂದಷ್ಟು ನಿರಾಳವಾಗಿವೆ. ಆದರೆ, ಇದು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗುತ್ತಿದೆ. ಹಳ್ಳಿಗಳಲ್ಲಿ ಸಹ ನೂರಾರು ಜನರು ಬೆಂಗಳೂರು ಸೇರಿದಂತೆ ನಾನಾ ರಾಜ್ಯಗಳಿಗೆ ದುಡಿಯಲು ಹೋಗಿದ್ದ ಬಡ ಕುಟುಂಬಗಳು ಲಾಕ್‌ಡೌನ್‌ನಿಂದ ಹಳ್ಳಿಗೆ ಮರಳಿವೆ. ಇಲ್ಲೂ ಅದೆಷ್ಟೋ ಜನರು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಅಗತ್ಯ ವಸ್ತುಗಳ ಖರೀದಿಗಾಗಿ ಬೇರೆಯವರ ಬಳಿ ಸಾಲಕ್ಕಾಗಿ ಕೈಯೊಡ್ಡುವ ಸ್ಥಿತಿ ನಿರ್ಮಾರ್ಣವಾಗಿದೆ.

ಕೊರೋನಾ ತೊಲಗಿದ ನಂತರ ವೈಯಕ್ತಿಕ ಕೆಲಸಕ್ಕೆ ರಜೆ: DySpಗೆ SP

ಹಳ್ಳಿಯಲ್ಲಿರುವವರಿಗೂ ಕೊರೋನಾ ವೈರಸ್‌ ಹರಡುತ್ತದೆ ಎಂಬ ಭೀತಿ ಇದ್ದು, ಇವರಿಗೂ ಮಾಸ್ಕ್‌, ಸ್ಯಾನಿಟೈಸರ್‌ಗಳ ಅಗತ್ಯವಿದೆ. ಆದರೆ, ಗ್ರಾಮೀಣರ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಶಾಸಕರು ಹಳ್ಳಿಜನರ ದುಗುಡು ದುಮ್ಮಾನಗಳನ್ನು ಕೇಳುವ ಕಾಳಜಿ ತೆಗೆದುಕೊಂಡಿಲ್ಲ.

ಮಾಸ್ಕ್‌ಗಾಗಿ ಪರದಾಟ

ಮಾಸ್ಕ್‌ ಇಲ್ಲದೆ ಹಳ್ಳಿ ಜನರು ಒದ್ದಾಟ ಅನುಭವಿಸುತ್ತಿದ್ದಾರೆ. ದುಡ್ಡು ಕೊಟ್ಟರೂ ಮಾಸ್ಕ್‌ ಸಿಗುತ್ತಿಲ್ಲ. ಹೊರಗಡೆ ಬಂದರೆ ಮಾಸ್ಕ್‌ ಇಲ್ಲದೆ ಬರಲು ಭಯವಾಗುತ್ತಿದೆ. ಆರೋಗ್ಯ ಮತ್ತಿತರ ತುರ್ತು ಕೆಲಸಕ್ಕೆ ನಗರ ಪ್ರದೇಶಗಳಿಗೆ ತೆರಳಲು ಮಾಸ್ಕ್‌ ಬೇಕೇಬೇಕು. ಇಲ್ಲದಿದ್ದರೆ ಪೊಲೀಸರಿಂದ ಲಾಠಿ ಏಟು ತಿನ್ನಬೇಕು. ಇನ್ನು ಸ್ಯಾನಿಟೈಸರ್‌ ಬಳಕೆ ಮಾಡುವಂತೆ ಹೇಳುತ್ತಿದ್ದಾರೆ. ನಾವು ಹಳ್ಳಿಯಲ್ಲಿರುವ ಜನ. ನಮಗ್ಯಾರು ಸ್ಯಾನಿಟೈಸರ್‌ ತಂದುಕೊಡಬೇಕು? ಸಂಘ-ಸಂಸ್ಥೆಗಳು ಎಲ್ಲೆಲ್ಲೋ ಜೋಡಿಸಿಕೊಂಡು ಜನರಿಗೆ ವಿತರಿಸುತ್ತಿದ್ದಾರೆ. ಆದರೆ, ಅವರಾರ‍ಯರೂ ಹಳ್ಳಿಯತ್ತ ಮುಖವೊಡ್ಡುತ್ತಿಲ್ಲ ಎಂಬುದು ಗ್ರಾಮೀಣ ಜನರ ಅಳಲು.

ಲಾಕ್‌ಡೌನ್‌ನಿಂದ ಗ್ರಾಮೀಣರು ತೀವ್ರ ಸಮಸ್ಯೆ ಎದುರಿಸುತ್ತಿರುವುದು ನಿಜ. ಹಳ್ಳಿಯಿಂದ ಬಂದು ಅನೇಕ ವಲಯದಲ್ಲಿ ಗುರುತಿಸಿಕೊಂಡಿರುವವರು ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಅವರಾದರೂ ತಮ್ಮ ಹಳ್ಳಿಗಳತ್ತ ಗಮನ ಹರಿಸುವ ಕೆಲಸ ಮಾಡಬೇಕು. ಮಾಸ್ಕ್‌ ಹಾಗೂ ಆಹಾರ ಧಾನ್ಯಗಳನ್ನು ವಿತರಿಸುವ ಕುರಿತು ನಾವು ಮುಂದಾಗಿದ್ದೇವೆ. ಎಲ್ಲರೂ ಈ ರೀತಿಯ ಯೋಚನೆ ಬರಬೇಕು ಎಂದು ಬಳ್ಳಾರಿಯ ಲೆಕ್ಕಪರಿಶೋಧಕರು ಸಿದ್ಧರಾಮೇಶ್ವರಗೌಡ ಕರೂರು ಅವರು ಹೇಳಿದ್ದಾರೆ.