ಮಂಗಳೂರು(ಆ.13): ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ- ಪರ್ಲಾಣಿ- ಹೊಸಮಠ- ಮಾರಂಗಾಯಿ ನಡುವೆ ಪರ್ಲಾಣಿ ಎಂಬಲ್ಲಿ ಮೃತ್ಯುಂಜಯ ಹೊಳೆಗೆ ಅಡ್ಡಲಾಗಿ ಕಟ್ಟಿದ ಸೇತುವೆ ಮುರಿದಿದ್ದರಿಂದ ಈ ಪರಿಸರದ 400ಕ್ಕೂ ಅಧಿಕ ಕುಟುಂಬಗಳು ಸಂಪರ್ಕ ಸೇತುವೇ ಇಲ್ಲದಾಗಿ ಕಂಗಾಲಾಗಿದ್ದವು. ಇದೀಗ ತಾತ್ಕಾಲಿಕವಾಗಿ ಬೃಹತ್‌ ತೆಂಗಿನ ಮರಗಳನ್ನು ಹೊಳೆಗಡ್ಡಲಾಗಿಟ್ಟು ಅಪಾಯಕಾರಿ ಸ್ಥಿತಿಯಲ್ಲಿ ಗ್ರಾಮಸ್ಥರು ನದಿ ದಾಟುವಂತಾಗಿದೆ.

ಸೇತುವೆ ಮುರಿದಿದ್ದರಿಂದ ಸುಮಾರು 40-50 ಅಡಿ ಅಗಲದ ಕಂದಕ ನಿರ್ಮಾಣವಾಗಿತ್ತು. ಕೆಳಗೆ ಭೋರ್ಗರೆದು ಹರಿವ ಹೊಳೆ. ಸೇತುವೆ ಮುರಿದಾಗಿನಿಂದ ಅಲ್ಲಿ ಎನ್‌ಡಿಆರ್‌ಎಫ್‌ ತಂಡ ಬೀಡುಬಿಟ್ಟು ಇಬ್ಬರು ಗರ್ಭಿಣಿಯರು, ಮಗು ಸೇರಿದಂತೆ ಅನೇಕರನ್ನು ಹಗ್ಗದ ಮೂಲಕ ಹೊಳೆ ದಾಟಿಸಿದ್ದರು.

ಸಂತ್ರಸ್ತರಿಗೆ ಆಹಾರ ಪೂರೈಕೆಯನ್ನೂ ಹಗ್ಗದ ಮೂಲಕವೇ ನೀಡುವಂತಾಗಿತ್ತು. ಕೊನೆಗೂ ಗ್ರಾಮಸ್ಥರು, ಅಧಿಕಾರಿಗಳು ಒಟ್ಟುಸೇರಿ ದೊಡ್ಡ ಮೂರ್ನಾಲ್ಕು ತೆಂಗಿನ ಮರಗಳನ್ನು ಮುರಿದ ಸೇತುವೆ ಜಾಗದಲ್ಲಿ ಅಡ್ಡಲಾಗಿ ಕಟ್ಟಿದ್ದಾರೆ. ಇದು ಅಪಾಯಕಾರಿಯಾದರೂ ಎನ್‌ಡಿಆರ್‌ಎಫ್‌ ತಂಡದ ನೆರವಿನಲ್ಲಿ ಗ್ರಾಮಸ್ಥರು ಅತ್ತಿಂದಿತ್ತ ಕಷ್ಟದಲ್ಲಿ ಸಾಗುತ್ತಿದ್ದಾರೆ.

ಶಿವಮೊಗ್ಗ: ನೆರೆ ಪರಿಹಾರ ಸ್ವೀಕಾರ ಕೇಂದ್ರ ಆರಂಭ, ನೀವೂ ನೆರವಾಗಬಹುದು

10 ಎಕರೆ ಜಾಗ ಪೂರ್ತಿ ನಾಶ:

ಈ ಪ್ರದೇಶದಲ್ಲಿ ಪ್ರವಾಹ ಉಕ್ಕೇರಿ ಸುಮಾರು 10 ಎಕರೆಗೂ ಅಧಿಕ ಕೃಷಿಭೂಮಿ ಸಂಪೂರ್ಣ ಮರಳು- ಮಣ್ಣಿನಿಂದ ಆವೃತವಾಗಿದೆ. ಅದನ್ನು ತೆರವುಗೊಳಿಸದೆ ಕೃಷಿ, ತೋಟ ಮಾಡಲು ಸಾಧ್ಯವೇ ಇಲ್ಲ ಎಂದು ಸ್ಥಳೀಯರಾದ ಚಂದ್ರಹಾಸ ಚಾರ್ಮಾಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು. ಈಗ ತೆಂಗಿನ ಮರ ಅಡ್ಡಲಾಗಿ ಹಾಕಿದ್ದರಿಂದ ಹೈನುಗಾರರು ಅದರಲ್ಲೇ ಹಾಲು ಮಾರಾಟಕ್ಕೆ ಹೋಗುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

ನದಿ ಪಥವೇ ಬದಲು:

ಇಲ್ಲಿನ ಮೃತ್ಯುಂಜಯ ಹೊಳೆಯು ಸೇತುವೆ ಜಾಗದಲ್ಲಿ ಹರಿವಿನ ಪಥವನ್ನೇ ಬದಲಾಯಿಸಿಬಿಟ್ಟಿದೆ. ಹೊಳೆಮೂಲಕ ಬಂದ ದೊಡ್ಡ ಮರದ ದಿಮ್ಮಿಗಳು ಸೇತುವೆಗೆ ಅಡ್ಡಲಾಗಿ ನಿಂತಿದ್ದವು. ಒತ್ತಡ ತಾಳಲಾರದೆ ಸೇತುವೆಯೇ ಕುಸಿದು ದಿಢೀರನೆ ನದಿ ಪಥ ತಿರುಗಿಬಿಟ್ಟಿತ್ತು. ಕೊನೆಗೆ ಆ ಜಾಗದಲ್ಲಿ ಮರಳು ತುಂಬಿದ ಚೀಲಗಳನ್ನಿಟ್ಟು ಸದ್ಯದ ಮಟ್ಟಿಗೆ ನದಿ ಪಥವನ್ನು ಯಥಾಸ್ಥಿತಿಗೆ ತರಲಾಗಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೃಹತ್‌ ಗುಡ್ಡದಲ್ಲಿ ದೊಡ್ಡ ಬಿರುಕು!

ಕುಸಿದ ಪರ್ಲಾಣಿ ಸೇತುವೆಯಿಂದ 2-3 ಕಿ.ಮೀ. ದೂರದಲ್ಲಿ ಬೃಹತ್‌ ಗುಡ್ಡವಿದೆ. ಅದರ ನಡುವೆ ಬೃಹತ್‌ ಬಿರುಕು ಮೂಡಿದ್ದು, ಭೂಕುಸಿತದ ಆತಂಕ ಸ್ಥಳೀಯರನ್ನು ಕಾಡಿದೆ. ಆ ಗುಡ್ಡವೇನಾದರೂ ಜರಿದರೆ ಪರ್ಲಾಣಿ, ಹೊಸಮಠ ಸಂಪೂರ್ಣ ನಾಶವಾಗುವ ಭೀತಿ ಎದುರಾಗಿದೆ. ಅಲ್ಲಿರುವ ಹತ್ತಾರು ಕುಟುಂಬಗಳು ನಿತ್ಯವೂ ಆತಂಕದಲ್ಲಿ ಕಾಲ ಕಳೆಯಬೇಕಾಗಿದೆ.