ಪೂಜೆಗೆ ಬಂದು ಪ್ರವಾಹದಲ್ಲಿ ಸಿಲುಕಿದ ಭಕ್ತರು..!
ದೇವಸ್ಥಾನಕ್ಕೆ ಬಂದಿದ್ದ ಜನ ಮರಳಿ ಬರುವ ವೇಳೆ ನೀರಿನಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮೆಲೆನಾಡಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಫಾಲ್ಸ್‌ನಲ್ಲಿ ಪ್ರವಾಹ ಹೆಚ್ಚಾದ ಪರಿಣಾಮ 15 ಮಂದಿ ನೀರಿನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಸ್ಥಳೀಯರು ನೀರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಕ್ತರನ್ನು ರಕ್ಷಿಸಿದ್ದಾರೆ.
ಚಿಕ್ಕಮಗಳೂರು(ಆ.07): ದೇವರಿಗೆ ಪೂಜೆ ಸಲ್ಲಿಸಿ ವಾಪಸ್ ಬರುತ್ತಿರುವ ವೇಳೆಯಲ್ಲಿ ಏಕಾಏಕಿ ಫಾಲ್ಸ್‌ಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ 15 ಮಂದಿ ನೀರಿನಲ್ಲಿ ಸಿಲುಕಿಕೊಂಡಿದ್ದು, ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತರೀಕೆರೆ ತಾಲೂಕಿನ ಕಲ್ಲತ್ತಗಿರಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಕಡೂರಿನ ತಾಲೂಕಿನ ಗ್ರಾಮವೊಂದರ 8 ಮಂದಿ ಮಹಿಳೆಯರು ಸೇರಿದಂತೆ 15 ಮಂದಿ ಕಲ್ಲತ್ತಗಿರಿಯ ಶ್ರೀ ವೀರಭದ್ರೇಶ್ವರ ದೇವಾಲಯಕ್ಕೆ ಆಗಮಿಸಿದ್ದರು. ಇಲ್ಲಿಗೆ ತೆರಳಬೇಕಾದರೆ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಕಲ್ಲತ್ತಗಿರಿ ಫಾಲ್ಸ್ ದಾಟಿಕೊಂಡು ಹೋಗಬೇಕು. ಸ್ಥಳೀಯರು ತುಂಬಾ ಮಳೆ ಬರುತ್ತಿದೆ, ಫಾಲ್ಸ್ ದಾಟಿಕೊಂಡು ಹೋಗಬೇಡಿ ಎಂದು ಹೇಳಿದ್ದರೂ, ಅವರ ಮಾತು ಕೇಳದೇ ಕೆಲ ಭಕ್ತರು ಫಾಲ್ಸ್ ದಾಟಿಕೊಂಡು ದೇವಾಲಯಕ್ಕೆ ಹೋಗಿದ್ದಾರೆ.
ಭಾರೀ ಮಳೆ: ಘಾಟಿಯಲ್ಲಿ10ಕ್ಕೂ ಹೆಚ್ಚು ಕಡೆ ಭೂ ಕುಸಿತ
ಪೂಜೆ ಸಲ್ಲಿಸಿ ವಾಪಸ್ ಬರುವಾಗ ಸುಮಾರು 1.30ರ ವೇಳೆಗೆ ಫಾಲ್ಸ್‌ನಲ್ಲಿ ನೀರು ಹರಿಯುವ ರಭಸ ಅಧಿಕವಾಗಿದೆ. ದೇವಾಲಯದಿಂದ ಹೊರಗೆ ಬರದಂತಹ ಪರಿಸ್ಥಿತಿ ನಿರ್ಮಾಣಗೊಂಡಿತು. ಕೂಡಲೇ ಸ್ಥಳದಲ್ಲಿದ್ದ ಶಿವಣ್ಣ ಹಾಗೂ ಕಲ್ಲತಗಿರಿಯ ಮುನಿಯಪ್ಪ ಎಂಬವರು ಹಗ್ಗವನ್ನು ಕಟ್ಟಿನೆರವಾದರು. ಆಗ ಸ್ಥಳಕ್ಕೆ ಪೊಲೀಸ್ ಇಲಾಖೆ, ಅಗ್ನಿಶಾಮಕದಳ ಹಾಗೂ ಸ್ಥಳೀಯ ತೋಟಗಾರಿಕೆ ಇಲಾಖೆ ಸಿಬ್ಬಂದಿ ಎಲ್ಲರೂ ಸೇರಿ ಹಗ್ಗದ ನೆರವಿನಿಂದ ಭಕ್ತರನ್ನು ಪಾರು ಮಾಡಿದ್ದಾರೆ.
ನೇತ್ರಾವತಿಯಲ್ಲಿ ನೀರಿನ ಮಟ್ಟ ಏರಿಕೆ, ಹೈ ಅಲರ್ಟ್‌ಗೆ ಸೂಚನೆ