ಕೊರೋನಾ ಮಾಹಿತಿ: ಜಿಲ್ಲಾಧಿಕಾರಿಯನ್ನೇ ಮೀರಿಸಿದ ಈ ಲೇಡಿ!
ಧಾರವಾಡದಲ್ಲೊಬ್ಬಳು ಸೂಪರ ಕೋವಿಡ್ 'ಜಿಲ್ಲಾಧಿಕಾರಿ'| ಕೊರೋನಾ ಹಿನ್ನೆಲೆ, ಪಾಸಿಟಿವ್ ಕೇಸ್ ಬಗ್ಗೆ ಜಿಲ್ಲಾಡಳಿತಕ್ಕೂ ಮೊದಲೇ ಮಾಹಿತಿ ನೀಡುತ್ತಿರುವ ಸಮಾಜ ಸೇವಕಿ| ಧಾರವಾಡದ ಸಮಾಜ ಸೇವಕಿ ಓಟ್ಲೀ ಅಂಬನಕುಮಾರ,
ಹುಬ್ಬಳ್ಳಿ(ಮೇ.21): ಕೊರೋನಾ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ವರ್ಗ ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ಚಹಿಸುತ್ತಿದೆ. ಅತ್ಯಂತ ಶೀಘ್ರವಾಗಿ ಸೋಂಕಿತರ ಹಾಗೂ ಅವರು ಸಂಪರ್ಕಿಸಿದ ಜನರ ಮಾಹಿತಿ ಕಲೆ ಹಾಕುವಲ್ಲಿ ವ್ಯಸ್ತವಾಗಿರುವ ಅಧಿಕಾರಿಗಳು, ಇದನ್ನು ಸಮಯಕ್ಕೆ ಸರಿಯಾಗಿ ಸರ್ಕಾರಕ್ಕೆ ಹಾಗೂ ಜನರ ಗಮನಕ್ಕೆ ತಲುಪಿಸುತ್ತಿದ್ದಾರೆ. ಆದರೀಗ ಧಾರವಾಡದಲ್ಲೊಬ್ಬ ಮಹಿಳೆ ಕೊರೋನಾ ಸೋಂಕಿತರ ಮಾಹಿತಿ ಕಲೆ ಹಾಕವಲ್ಲಿ ಜಿಲ್ಲಾಡಳಿತವನ್ನೇ ಹಿಂದಿಕ್ಕಿದ್ದಾರೆ. ಜಿಲ್ಲಾಡಳಿತ ಅಧಿಕಾರಿಗಳು ಮಾಹಿತಿ ನೀಡುವ ಮೊದಲೇ ಇವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇದನ್ನು ಹಂಚಿಕೊಳ್ಳುತ್ತಿದ್ದಾರೆ. ಸಾಲದೆಂಬಂತೆ ಅವರ ಟ್ರಾವೆಲ್ ಹಿಸ್ಟರಿಯ ಮಾಹಿತಿಯೂ ಇವರ ಬಳಿ ಇದೆ.
ಹೌದು ಇದು ಕೊಂಚ ಅಚ್ಚರಿ ಮೂಡಿಸುವ ವಿಚಾರವಾದರೂ ನಿಜ. ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿರುವ ಓಟ್ಲೀ ಅಂಬನ್ ಕುಮಾರ್ ಧಾರವಾಡದಲ್ಲಿರುವ ಸೋಂಕಿತರ ಪ್ರತಿ ಕ್ಷಣದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಅಲ್ಲದೇ ಹೆಲ್ತ್ ಬುಲೆಟಿನ್ ಹೊರ ಬರುವ ಮೊದಲೇ, ಜಿಲ್ಲಾಧಿಕಾರಿ ಹಾಗು ಜಿಲ್ಲಾಡಳಿತ ಅಧಿಕಾರಿಗಳು ಇದನ್ನು ಜನರ ಜೊತೆ ಹಂಚಿಕೊಳ್ಳುವ ಮೊದಲೇ ಟ್ರಾವೆಲ್ ಹಿಸ್ಟರಿ ಸೇರಿದಂತೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸದ್ಯ ಈ ಸಮಾಜ ಸೇವಕಿ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿಯ ವರ್ತನೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡುವ ಮೊದಲೇ ಹೀಗೆ ಮಾಹಿತಿ ಬಹಿರಂಗಪಡಿಸುವುದು ತಪ್ಪು ಎಂದು ಕಿಡಿ ಕಾರಿದ್ದಾರೆ.