ಕೊಡಗು: ಕುಸಿಯುವ ಹಂತಕ್ಕೆ ತಲುಪಿದ ಆನೆಹಳ್ಳ ಸೇತುವೆ, ಆತಂಕದಲ್ಲಿ ಜನತೆ..!
ಕಳೆದ ಎರಡು ವರ್ಷಗಳ ಹಿಂದೆ ಈ ಭಾಗದಲ್ಲಿ ಸುರಿದಿದ್ದ ಧಾರಾಕಾರ ಮಳೆಗೆ ಆನೆಹಳ್ಳ ಸೇತುವೆಯ ಎರಡು ಬದಿಗಳಲ್ಲಿ ಬಹುತೇಕ ಕುಸಿದು ಹೋಗಿದೆ. ಸೇತುವೆಯ ತಡೆಗೋಡೆ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದೆ. ಜೊತೆಗೆ ಸೇತುವೆ ಬಹುತೇಕ ಕಡೆ ಬಿರುಕು ಬಿಟ್ಟಿದ್ದು ಕುಸಿಯುವ ಆತಂಕ ಎದುರಾಗಿದೆ. ಹೀಗಾಗಿ ನಾಲ್ಕೈದು ಗ್ರಾಮಗಳ 80 ಕ್ಕೂ ಹೆಚ್ಚು ಕುಟುಂಬಗಳು ಸಂಪರ್ಕ ಕಳೆದುಕೊಳ್ಳುವ ಆತಂಕ ಶುರುವಾಗಿದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಜೂ.07): ಕೊಡಗು ಜಿಲ್ಲೆಯಲ್ಲಿ ಮಳೆ ಸುರಿಯಲು ಆರಂಭವಾಯಿತ್ತೆಂದರೆ ಬಿಟ್ಟು ಬಿಡದೆ ಸುರಿಯುವುದು ಸರ್ವೇ ಸಾಮಾನ್ಯ ಬಿಡಿ. ಆದರೆ ಆ ಮಳೆಯಿಂದ ಆಗುವ ಅನಾಹುತಗಳು ಒಂದೆರಡಲ್ಲ. ಕಳೆದ ವರ್ಷ ಸುರಿದ ಮಳೆಗೆ ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಹಳ್ಳ ಸೇತುವೆ ಶಿಥಿಲಗೊಂಡಿದ್ದು ಈ ಬಾರಿ ಮಳೆಯಲ್ಲಿ ಕುಸಿದು ಬೀಳುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಚೆಂಬು, ಕಟ್ಟಪ್ಪಳ್ಳಿ ಮತ್ತು ಉಂಬಳೆ ಗ್ರಾಮಗಳ ನಡುವೆ ಸಂಪರ್ಕ ಕಡಿತವಾಗುವ ಆತಂಕ ಎದುರಾಗಿದೆ.
ಹೌದು, ಕಳೆದ ಎರಡು ವರ್ಷಗಳ ಹಿಂದೆ ಈ ಭಾಗದಲ್ಲಿ ಸುರಿದಿದ್ದ ಧಾರಾಕಾರ ಮಳೆಗೆ ಆನೆಹಳ್ಳ ಸೇತುವೆಯ ಎರಡು ಬದಿಗಳಲ್ಲಿ ಬಹುತೇಕ ಕುಸಿದು ಹೋಗಿದೆ. ಸೇತುವೆಯ ತಡೆಗೋಡೆ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದೆ. ಜೊತೆಗೆ ಸೇತುವೆ ಬಹುತೇಕ ಕಡೆ ಬಿರುಕು ಬಿಟ್ಟಿದ್ದು ಕುಸಿಯುವ ಆತಂಕ ಎದುರಾಗಿದೆ. ಹೀಗಾಗಿ ನಾಲ್ಕೈದು ಗ್ರಾಮಗಳ 80 ಕ್ಕೂ ಹೆಚ್ಚು ಕುಟುಂಬಗಳು ಸಂಪರ್ಕ ಕಳೆದುಕೊಳ್ಳುವ ಆತಂಕ ಶುರುವಾಗಿದೆ.
ಪ್ರವಾಹ ಎದುರಿಸಲು ಕೊಡಗು ಪೊಲೀಸರು ಸಜ್ಜು: ಹಾರಂಗಿ ಜಲಾಶಯದ ಆಳ ನೀರಿನಲ್ಲಿ ಕಟ್ಟುನಿಟ್ಟಿನ ತಾಲೀಮು
ಅತ್ಯಾಡಿ, ಕಟ್ಟಪ್ಪಳ್ಳಿ ಮತ್ತು ಉಂಬಳೆ ಸೇರಿದಂತೆ ಹಲವು ಗ್ರಾಮಗಳಿಂದ ನಿತ್ಯ 70 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಮಡಿಕೇರಿ ಮತ್ತು ಸುಳ್ಯ ಶಾಲಾ ಕಾಲೇಜುಗಳಿಗೆ ಹೋಗಲು ಇದೇ ಸೇತುವೆ ಆಶ್ರಯಿಸಿದ್ದಾರೆ. ಒಂದು ವೇಳೆ ಈ ಸೇತುವೆ ಕುಸಿದು ಬಿದ್ದಲ್ಲಿ ಗ್ರಾಮಗಳು ಸಂಪರ್ಕ ಕಡಿತಗೊಳ್ಳುವ ಜೊತೆಗೆ 70 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಂದ ಹೊರಗುಳಿಯಬೇಕಾದ ದಿನಗಳು ಎದುರಾಗಲಿವೆ ಎನ್ನುವುದು ಗ್ರಾಮಗಳ ಜನರ ಆಕ್ರೋಶ.
ಎರಡು ವರ್ಷಗಳ ಹಿಂದೆ ಸೇತುವೆ ಬಹುತೇಕ ಶಿಥಿಲಗೊಂಡಿದ್ದು ಕಳೆದ ವರ್ಷ ಸೇತುವೆ ರಿಪೇರಿ ಮಾಡುವ ಹೆಸರಿನಲ್ಲಿ ಎರಡುವರೆ ಲಕ್ಷ ಬಿಲ್ಲು ಮಾಡಿ ಚೀಲಕ್ಕೆ ಮರಳು ತುಂಬಿ ಮರಳಿನ ಮೂಟೆಗಳನ್ನು ನೀರಿನಿಂದ ಕೊಚ್ಚಿ ಹೋಗಿದ್ದ ತಡೆಗೋಡೆಯ ಸ್ಥಳಕ್ಕೆ ಇರಿಸಲಾಗಿತ್ತು. ಆದರೀಗ ಅವುಗಳು ಒಂದೇ ಒಂದು ಮೂಟೆಯೂ ಅಲ್ಲಿ ಉಳಿದಿಲ್ಲ. ಬದಲಾಗಿ ನದಿಯಲ್ಲಿ ಕೊಚ್ಚಿ ಹೋಗಿದ್ದು, ಎರಡು ವರ್ಷ ಲಕ್ಷ ರೂಪಾಯಿ ಹೊಳೆಯಲ್ಲಿ ಹುಣಿಸೆ ಹಣ್ಣನ್ನು ತೊಳೆದಂತೆ ಆಗಿದೆ. ಎರಡು ಲಕ್ಷ ರೂಪಾಯಿಯನ್ನು ಹಾಳು ಮಾಡಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಇರುವುದೇ ಇದೊಂದೇ ಸೇತುವೆ. ಈ ಸೇತುವೆ ಮೂಲಕ ನಾವು ಕೇವಲ ಮೂರು ಕಿಲೋ ಮೀಟರ್ ಪ್ರಯಾಣದಲ್ಲಿ ಗ್ರಾಮಕ್ಕೆ ತಲುಪುತ್ತೇವೆ. ಒಂದು ವೇಳೆ ಈ ಸೇತುವೆ ಕುಸಿದು ಬಿದ್ದು ಸಂಪರ್ಕ ಕಡಿತಗೊಂಡಲ್ಲಿ ಕಾಡು ರಸ್ತೆಯಂತೆ ಇರುವ ಮತ್ತೊಂದು ರಸ್ತೆಯಲ್ಲಿ 15 ಕಿಲೋ ಮೀಟರ್ ಸುತ್ತಿ ಬಳಸಿ ಬರಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೊಡಗು: ಅಪ್ರಾಪ್ತನ ಕೈಗೆ ಟ್ರ್ಯಾಕ್ಟರ್ ಕೊಟ್ಟ ತಾಯಿ ಬಂಧನ
ಸೇತುವೆ ಬಹುತೇಕ ಶಿಥಿಲಗೊಂಡಿರುವ ಬಗ್ಗೆ ಗ್ರಾಮ ಪಂಚಾಯಿತಿಯಿಂದ ಹಿಡಿದು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ವರೆಗೆ ಮನವಿ ಸಲ್ಲಿಸಿದ್ದೇವೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವ ತಡೆಗೋಡೆ ಸ್ಥಳಕ್ಕೆ ಮರಳಿನ ಮೂಟೆಗಳನ್ನು ಹಾಕಿ ಎರಡುವರೆ ಲಕ್ಷ ಬಿಲ್ಲು ಮಾಡಿರುವುದರ ವಿರುದ್ಧ ದೂರು ನೀಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಜನರ ಆಕ್ರೋಶ.
ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಎದುರಾಗುವ ಅವಾಂತರಕ್ಕೆ ಈ ಸೇತುವೆ ಸಿದ್ಧವಾಗಿದ್ದು, ಅಧಿಕಾರಿಗಳು ಕೂಡಲೇ ಗಮನಹರಿಸಬೇಕಾಗಿದೆ.