ಪಿಂಚಣಿ, ನರೇಗಾ ಕೂಲಿ ಹಣವೂ ಸಾಲಕ್ಕೆ ಜಮೆ..!
ಓಲ್ಡ್ ಏಜ್ ಪೆನ್ಷನ್ (ಓಎಪಿ), ಅಂಗವಿಕಲರ ಮಾಸಾಶನ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದ ಕಾರ್ಮಿಕರಿಗೆ ನೀಡಬೇಕಾದ ಕೂಲಿ ಹಣವನ್ನೂ ಬ್ಯಾಂಕುಗಳು ಸಾಲದಲ್ಲಿ ಕಡಿತಗೊಳಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಆನಂದ್ ಎಂ. ಸೌದಿ
ಯಾದಗಿರಿ(ಮೇ.17): ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಬರ ಪರಿಹಾರದ ಹಣವನ್ನು ರೈತರ ಸಾಲಕ್ಕೆ ಕಡಿತಗೊಳಿಸಿದ್ದ ಬ್ಯಾಂಕುಗಳು, ಕಳೆದ ಮೂರ್ನಾಲ್ಕು ತಿಂಗಳುಗಳಿಂದ ವೃದ್ಧಾಪ್ಯ, ಅಂಗವಿಕಲರ ಮಾಸಾಶನ ಹಾಗೂ ಉದ್ಯೋಗ ಖಾತ್ರಿಯಲ್ಲಿ ದುಡಿದ ಕೂಲಿಗೂ ‘ಕನ್ನ’ ಹಾಕುತ್ತಿರುವ ಗಂಭೀರ ಆರೋಪಗಳು ಕೇಳಿಬಂದಿವೆ. ಓಲ್ಡ್ ಏಜ್ ಪೆನ್ಷನ್ (ಓಎಪಿ), ಅಂಗವಿಕಲರ ಮಾಸಾಶನ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದ ಕಾರ್ಮಿಕರಿಗೆ ನೀಡಬೇಕಾದ ಕೂಲಿ ಹಣವನ್ನೂ ಬ್ಯಾಂಕುಗಳು ಸಾಲದಲ್ಲಿ ಕಡಿತಗೊಳಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ವಡಗೇರಾ ತಾಲೂಕಿನ ಮುನಮುಟಗಿ ಗ್ರಾಮದ ಚಂದ್ರಾಯಗೌಡ ಎಂಬುವರಿಗೆ ಕಳೆದ ಮೂರು ತಿಂಗಳಿಂದ ಮಾಸಿಕ 1,200 ರು.ಗಳ ವೃದ್ಧಾಪ್ಯ ವೇತನ ಬರುತ್ತಿಲ್ಲ. ಶಹಾಪುರ ಎಸ್‌ಬಿಐ ಶಾಖೆಗೆ ಹೋಗಿ ಕಾರಣ ಕೇಳಿದರೆ ಸಾಲದಲ್ಲಿ ಕಡಿತಗೊಳಿಸಲಾಗಿದೆ ಎಂಬುದಾಗಿ ಹೇಳುತ್ತಿದ್ದಾರಂತೆ.
ಬರ ಪರಿಹಾರ ಹಣ ರೈತರ ಸಾಲಕ್ಕೆ ಜಮೆ..!
ಶಹಾಪುರ ತಾಲೂಕಿನ ಸಗರ ಸಮೀಪದ ಮಹಲ್ ರೋಜಾ ಗ್ರಾಮದ ಬೀರಪ್ಪ ಎಂಬುವರಿಗೆ ಬರುತ್ತಿರುವ ಉದ್ಯೋಗ ಖಾತ್ರಿ ಕೂಲಿ ಹಣ ಹಾಗೂ 1,400 ರು.ಗಳ ಅಂಗವಿಕಲರ ಮಾಸಾಶನವನ್ನು ತಡೆ (ಹೋಲ್ಡ್) ಹಿಡಿಯಲಾಗಿದೆ. 3 ಲಕ್ಷ ರು.ಗಳ ಬೆಳೆ ಸಾಲ ಇರುವುದರಿಂದ ಉದ್ಯೋಗ ಖಾತ್ರಿ ಕೂಲಿ ಹಣ ಮತ್ತು ಅಂಗವಿಕಲರ ಪಿಂಚಣಿ ಹಣ ತಡೆ ಹಿಡಿದಿರುವುದಾಗಿ ಎಸ್‌ಬಿಐ ಸಿಬ್ಬಂದಿ ಹೇಳುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಪತ್ನಿ ಚಿಕಿತ್ಸೆಗೆ ಇದು ಅಡ್ಡಿಯಾಗಿದೆ ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಹಾಗೆಯೇ, ಶಹಾಪುರದ ವಂದನಾ ಆನೆಗೊಂದಿಯವರ ಉದ್ಯೋಗ ಖಾತ್ರಿಯ ಕೂಲಿ ಹಣವನ್ನು ಸಾಲಕ್ಕೆ ಕಡಿತಗೊಳಿಸಲಾಗುತ್ತಿದೆ. ದಿನಕ್ಕೆ ಬರುವ 349 ರು.ಗಳ ಕೂಲಿ ಹಣ ಏಳು ದಿನಗಳಾದ ನಂತರ ಜಮೆ ಆಗುತ್ತದೆ. ಆದರೆ, ಫಲಾನುಭವಿಗಳು ಎಟಿಎಂನಿಂದ ಈ ಹಣ ತೆಗೆದುಕೊಳ್ಳದಂತೆ ಖಾತೆ ‘ಲಾಕ್’ ಮಾಡುವ ಬ್ಯಾಂಕಿನವರು ಸಾಲದ ಹಣಕ್ಕೆ ಜಮೆಯಾಗಿದೆ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ ಎಂದು ಅವರು ದೂರಿದ್ದಾರೆ.
ಬರ ಪರಿಹಾರದ ಹಣವನ್ನು ರೈತರ ಬೆಳೆ ಸಾಲದಲ್ಲಿ ಕಡಿತಗೊಳಿಸಿದರೆ ಅಂತಹ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ ಆದೇಶ ಹೊರಡಿಸಿದ್ದಾರೆ. ಆದರೆ, ಇದಕ್ಕೆ ಕ್ಯಾರೇ ಅನ್ನದ ಕೆಲವು ಬ್ಯಾಂಕ್ ಅಧಿಕಾರಿಗಳು, ಆರ್‌ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಆದೇಶ ಬಂದರೆ ಮಾತ್ರ ನೋಡೋಣ ಎಂದು ಫಲಾನುಭವಿಗಳಿಗೆ ಉತ್ತರಿಸುತ್ತಾರೆ ಎಂದು ಚಂದ್ರಾಯಗೌಡ ಅಳಲು ತೋಡಿಕೊಂಡಿದ್ದಾರೆ.
ಬ್ಯಾಂಕುಗಳ ಈ ಧೋರಣೆಯಿಂದಾಗಿ ಬರದ ಬವಣೆಯಲ್ಲಿರುವ ಬಡ ಕೂಲಿ ಕಾರ್ಮಿಕರ ಬದುಕಿಗೆ ಬರೆ ಎಳೆದಂತಾಗುತ್ತಿದೆ.
ವೃದ್ಧಾಪ್ಯ ವೇತನ ಬರುತ್ತಿಲ್ಲ
ಕಳೆದ ಮೂರು ತಿಂಗಳಿಂದ ಮಾಸಿಕ 1,200 ರು.ಗಳ ವೃದ್ಧಾಪ್ಯ ವೇತನ ಬರುತ್ತಿಲ್ಲ. ಶಹಾಪುರ ಎಸ್‌ಬಿಐ ಶಾಖೆಗೆ ಹೋಗಿ ಕಾರಣ ಕೇಳಿದರೆ ಸಾಲದಲ್ಲಿ ಕಡಿತಗೊಳಿಸಲಾಗಿದೆ ಎಂಬುದಾಗಿ ಹೇಳುತ್ತಿದ್ದಾರೆ.
ಚಂದ್ರಾಯಗೌಡ, ವಡಗೇರಾ ತಾಲೂಕು, ಮುನಮುಟಗಿ ಗ್ರಾಮ]
ಬರ ಪರಿಹಾರ ಹಣ ಸಾಲಕ್ಕೆ ಹೊಂದಾಣಿಕೆ: ಡಿಸಿ ಬ್ರೇಕ್..!
ಅಂಗವಿಕಲರ ಮಾಸಾಶನ ಬರುತ್ತಿಲ್ಲ
ಉದ್ಯೋಗ ಖಾತ್ರಿ ಕೂಲಿ ಹಣ ಹಾಗೂ 1,400 ರು.ಗಳ ಅಂಗವಿಕಲರ ಮಾಸಾಶನವನ್ನು ತಡೆ ಹಿಡಿದಿದ್ದಾರೆ. 3 ಲಕ್ಷ ರು. ಬೆಳೆ ಸಾಲ ಇರುವುದರಿಂದ ಉದ್ಯೋಗ ಖಾತ್ರಿ ಕೂಲಿ ಹಣ ಮತ್ತು ಅಂಗವಿಕಲರ ಪಿಂಚಣಿ ಹಣ ತಡೆ ಹಿಡಿದಿರುವುದಾಗಿ ಎಸ್‌ಬಿಐ ಸಿಬ್ಬಂದಿ ಹೇಳುತ್ತಿದ್ದಾರೆ ಎಂದು ಶಹಾಪುರ ತಾಲೂಕು, ಮಹಲ್ ರೋಜಾ ಗ್ರಾಮದ ಬೀರಪ್ಪ ತಿಳಿಸಿದ್ದಾರೆ.
ಉದ್ಯೋಗ ಖಾತ್ರಿ ಹಣ ‘ಲಾಕ್’
ಉದ್ಯೋಗ ಖಾತ್ರಿಯ ಕೂಲಿ ಹಣವನ್ನು ಸಾಲಕ್ಕೆ ಕಡಿತಗೊಳಿಸುತ್ತಿದ್ದಾರೆ. ದಿನಕ್ಕೆ ಬರುವ 349 ರು.ಗಳ ಕೂಲಿ ಹಣ ಏಳು ದಿನಗಳಾದ ನಂತರ ಜಮೆ ಆಗುತ್ತದೆ. ಆದರೆ, ಈ ಹಣ ಎಟಿಎಂ ಮೂಲಕ ತೆಗೆದುಕೊಳ್ಳದಂತೆ ಖಾತೆ ಲಾಕ್ ಮಾಡಿದ್ದಾರೆ ಎಂದು ಶಹಾಪುರ ವಂದನಾ ಆನೆಗೊಂದಿ ಹೇಳಿದ್ದಾರೆ.