Asianet Suvarna News Asianet Suvarna News

ಬರ ಪರಿಹಾರ ಹಣ ರೈತರ ಸಾಲಕ್ಕೆ ಜಮೆ..!

ಕೇಂದ್ರ ಸರ್ಕಾರದಿಂದ ಇತ್ತೀಚೆಗಷ್ಟೆ ಬಿಡುಗಡೆಯಾದ ಹಣವನ್ನು ರಾಜ್ಯ ಸರ್ಕಾರ ರೈತರ ಖಾತೆಗಳಿಗೆ ಜಮೆಯಾಗುವಂತೆ ಬಿಡುಗಡೆ ಮಾಡಿತ್ತು. ಆದರೆ, ಕೆಲವು ಬ್ಯಾಂಕುಗಳಲ್ಲಿ ಈ ಪರಿಹಾರ ಹಣವನ್ನು ರೈತರ ಉಳಿತಾಯ ಖಾತೆಗಳಿಗೆ ಜಮೆ ಮಾಡದೆ, ಅವರ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. 

Drought Compensation Money Deposited for Farmers Loan in Karnataka grg
Author
First Published May 15, 2024, 4:54 AM IST | Last Updated May 15, 2024, 4:54 AM IST

ಯಾದಗಿರಿ(ಮೇ.15): "ದೇವರು ವರ ಕೊಟ್ಟರೂ, ಪೂಜಾರಿ ವರ ಕೊಡ.." ಎನ್ನುವಂತೆ, ಬರದಿಂದ ನೊಂದು ಬೆಂದಿರುವ ರೈತರಿಗೆ ಕೇಂದ್ರ ಸರ್ಕಾರ ಬರ ಪರಿಹಾರ ಹಣ ಬಿಡುಗಡೆ ಮಾಡಿದೆ. ಆದರೆ, ರೈತರಿಗೆ ಸಲ್ಲಬೇಕಾಗಿರುವ ಈ ಪರಿಹಾರದ ಹಣವನ್ನು ಬ್ಯಾಂಕುಗಳು ಬೆಳೆ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಪ್ರತಿ ಹೆಕ್ಟೇರ್‌ ಮಳೆಯಾಶ್ರಿತ- ಒಣಬೇಸಾಯಕ್ಕೆ 8,500 ರುಪಾಯಿಗಳು ನೀರಾವರಿಗೆ 17 ಸಾವಿರ ರುಪಾಯಿಗಳನ್ನು ಮತ್ತು ಬಹುವಾರ್ಷಿಕ ಹಾಗೂ ತೋಟಗಾರಿಕೆ ಬೆಳೆಗಳಿಗೆ 22,500 ರು.ಗಳವರೆಗೆ ಪರಿಹಾರ ನೀಡಲು ಸರ್ಕಾರ ನಿಗದಿಪಡಿಸಿದೆ.

ಕೇಂದ್ರ ನೀಡಿದ ಬರ ಹಣ ರೈತರಿಗೆ ಪಾವತಿ: ಸಚಿವ ಕೃಷ್ಣ ಬೈರೇಗೌಡ

ಕೇಂದ್ರ ಸರ್ಕಾರದಿಂದ ಇತ್ತೀಚೆಗಷ್ಟೆ ಬಿಡುಗಡೆಯಾದ ಹಣವನ್ನು ರಾಜ್ಯ ಸರ್ಕಾರ ರೈತರ ಖಾತೆಗಳಿಗೆ ಜಮೆಯಾಗುವಂತೆ ಬಿಡುಗಡೆ ಮಾಡಿತ್ತು. ಆದರೆ, ಕೆಲವು ಬ್ಯಾಂಕುಗಳಲ್ಲಿ ಈ ಪರಿಹಾರ ಹಣವನ್ನು ರೈತರ ಉಳಿತಾಯ ಖಾತೆಗಳಿಗೆ ಜಮೆ ಮಾಡದೆ, ಅವರ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಹುಣಸಗಿಯ ಪ್ರಗತಿ ಕೃಷ್ಣಾ ಬ್ಯಾಂಕಿನಲ್ಲಿ ಇಂತಹ ಕಾರಣಗಳಿಂದ ರೈತರು ಪ್ರತಿಭಟನೆಗಿಳಿದಿದ್ದಾರೆ.

ಎನ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ಹಣ ಬಿಡುಗಡೆಯಾಗಿ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡುವ ಪ್ರಕ್ರಿಯೆ ಎಲ್ಲೆಡೆ ಆರಂಭವಾಗಿದೆ. ಆದರಿಲ್ಲಿ, ಬ್ಯಾಂಕುಗಳು ಉಳಿತಾಯ ಖಾತೆ ಬಂದ್ ಮಾಡಿ, ಪರಿಹಾರದ ಹಣ ಸಾಲದ ಖಾತೆಗಳಿಗೆ ಜಮೆ ಮಾಡುತ್ತಿರುವುದು ರೈತರಲ್ಲಿ ಆಕ್ರೋಶ ಮೂಡಿಸಿದೆ. ಗ್ರಾಮದ ಹನುಮಂತರಾಯ, ಪರಮಣ್ಣ, ಯೆಲ್ಲಪ್ಪ ಮುಂತಾದವರು ಪರಿಹಾರಕ್ಕಾಗಿ ಪರದಾಡುತ್ತಿದ್ದಾರೆ.

ಹುಣಸಗಿ ತಾಲೂಕಿನ ಸಿದ್ದಾಪೂರ ರೈತರು ವಜ್ಜಲ್ ಗ್ರಾಮದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ ಸಾಲದ ಖಾತೆಗೆ ಜಮಾ ಮಾಡುತ್ತಿರುವದನ್ನು ಖಂಡಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿನ 30ಕ್ಕೂ ಹೆಚ್ಚು ರೈತರು ಪರಿಹಾರ ಹಣಕ್ಕಾಗಿ ಪರದಾಡುತ್ತಿದ್ದಾರೆ. ಇಂತಹನೇಕ ಪ್ರಕರಣಗಳು ಜಿಲ್ಲೆಯ ವಿವಿಧೆಡೆಯೂ ನಡೆದಿದ್ದು, ಇದೀಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ.

ಈ ಹಿಂದೆಯೂ ಕೂಡ ಯಾದಗಿರಿ ಜಿಲ್ಲೆಯಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನದಂತಹ ಪಿಂಚಣಿ ಹಾಗೂ ಪರಿಹಾರ ಹಣವನ್ನು ಬ್ಯಾಂಕುಗಳು ಸಾಲದ ಖಾತೆಗಳಿಗೆ ಜಮೆ ಮಾಡಿಕೊಂಡಿದ್ದು ಚರ್ಚಗೆ ಗ್ರಾಸವಾಗಿತ್ತು. ಬ್ಯಾಂಕುಗಳು ಈ ನೀತಿ ಕ್ರಿಮಿನಲ್‌ ಅಪರಾಧದಂತೆ ಎಂದು ಅಂದಿನ ಕಂದಾಯ ಸಚಿವರಾಗಿದ್ದ ಆರ್. ಅಶೋಕ್‌ ಅವರು ಅಧಿವೇಶನದಲ್ಲಿ ಪ್ರತಿಕ್ರಿಯಿಸಿ, ಅಂತಹ ಬ್ಯಾಂಕುಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದರು.

ಇಷ್ಟೆಲ್ಲವುಗಳ ಮಧ್ಯೆಯೂ, ಮತ್ತೆ ಇಂತಹ ಪ್ರಕರಣಗಳು ರೈತರ ನಿದ್ದೆಗೆಡಿಸಿವೆ. ಭೀಕರ ಬರದಿಂದ ನೊಂದಿರುವ ರೈತರಿಗೆಂದು ಬಿಡುಗಡೆ ಮಾಡಿರುವ ಹಣ ಬೆಳೆ ಸಾಲಕ್ಕೆ ವರ್ಗಾವಣೆ ಮಾಡಿಕೊಳ್ಳಬಾರದು ಎಂದು ನಿಯಮಗಳಿದ್ದರೂ, ಈಗ ಬೆಳೆ ವಿಮೆ, ಬೆಳೆ ಪರಿಹಾರ, ಉದ್ಯೋಗ ಖಾತ್ರಿ ಹಣ, ಪಿಂಚಣಿ ಮುಂತಾದವುಗಳನ್ನು ಬ್ಯಾಂಕುಗಳು ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳುತ್ತ ಮೊಂಡುತನ ಪ್ರದರ್ಶಿಸುತ್ತಿವೆ ಎಂದು ರೈತರು ಆರೋಪಿಸಿದ್ದಾರೆ.

ಬೆಳೆ ಪರಿಹಾರ, ಬೆಳೆ ವಿಮೆ, ಪಿಎಂ ಕಿಸಾನ್‌ ಯೋಜನೆ, ಉದ್ಯೋಗ ಖಾತ್ರಿ ಯೋಜನೆ, ರೇಷನ್‌ ಕಾರ್ಡ್‌ ಹಣ ಸೇರಿದಂತೆ ಇನ್ನಿತರ ಯೋಜನೆಯ ಹಣ ಉಳಿತಾಯ ಖಾತೆಗೆ ಜಮಾ ಆದರೆ ಅದನ್ನು ಸಾಲದ ಖಾತೆಗೆ ಹಣ ಜಮಾ ಮಾಡಿಕೊಳ್ಳುತ್ತಿರುವದು ಎಷ್ಟರ ಮಟ್ಟಿಗೆ ಸರಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

SDRF, NDRF ನಿಯಮದಂತೆ ಕರ್ನಾಟಕಕ್ಕೆ ಬರ ಪರಿಹಾರ ನೀಡಿದ್ದೇವೆ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ

ನನ್ನ 3 ಎಕರೆ 8 ಗುಂಟೆ ಜಮೀನಿನಲ್ಲಿ ತೊಗರಿ ಬೆಳೆ ಬೆಳೆದಿದ್ದೆ. ಬ್ಯಾಂಕಿನಲ್ಲಿ 80 ಸಾವಿರ ರು.ಗಳ ಸಾಲ ಇದ್ದು, ಇತ್ತೀಚೆಗಷ್ಟೇ ಕಂತು ತುಂಬಿ ರಿನೀವಲ್‌ ಮಾಡಿದ್ದೆ. ಈಗ ಸರ್ಕಾರದಿಂದ 15 ಸಾವಿರ ರು.ಗಳ ಬರ ಪರಿಹಾರ ಬಂದಿದೆಯಾದರೂ, ಬ್ಯಾಂಕಿನವರು ಉಳಿತಾಯ ಖಾತೆಗೆ ಜಮೆ ಮಾಡದೆ, ಸಾಲದ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ. ಬರ ಪರಿಹಾರ ಕೇಳಿದರೆ ಕೊಡುವುದಿಲ್ಲ ಎನ್ನುತ್ತಿದ್ದಾರೆ ಎಂದು ಯಾದಗಿರಿ ಜಿಲ್ಲೆ ಸಿದ್ದಾಪೂರ ಗ್ರಾಮಸ್ಥ ಮಹಾದೇವಪ್ಪ ತಳ್ಳಳ್ಳಿ ಹೇಳಿದ್ದಾರೆ.

ಸುಮಾರು 25-30ಕ್ಕೂ ಹೆಚ್ಚು ರೈತರಿಗೆ ಬಂದಿರುವ ಬರ ಪರಿಹಾರ ಹಣವನ್ನು ನೀಡುವಲ್ಲಿ ಬ್ಯಾಂಕ್‌ ನಿರಾಕರಿಸಿವೆ. ಪಿಎಂ ಕಿಸಾನ್‌ ಹಣ, ಬರ ಪರಿಹಾರ ಹಣ, ಉದ್ಯೋಗ ಖಾತ್ರಿ ಹಣವನ್ನೂ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳುತ್ತಿವೆ. ಹೀಗಾದರೆ, ಬದುಕು ಹೇಗೆ ಸಾಗಬೇಕು? ಎಂದು ಯಾದಗಿರಿ ಜಿಲ್ಲೆ ಸಿದ್ದಾಪೂರ ರೈತ ಮುಖಂಡ, ಚಂದ್ರಕಾಂತ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios