ಬಳ್ಳಾರಿ: ಭಾರೀ ಗಾಳಿಗೆ ಕಿತ್ತು ಬಿದ್ದ ಬಾಡೂಟದ ಪೆಂಡಾಲ್, ಎದ್ನೋ ಬಿದ್ನೋ ಓಡಿದ ಜನ..!
ಚುನಾವಣೆ ಹಿನ್ನೆಲೆ ತಾಲೂಕಿನ ಜೋಳದರಾಶಿ ಗ್ರಾಮದ ಬಳಿಯ ಕುಂಟು ಮಾರಮ್ಮ ದೇವಿಗೆ ಪೂಜೆ ಹಾಗೂ ಸುಮಾರು 50 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದ ಗ್ರಾಮೀಣ ಶಾಸಕ ಬಿ. ನಾಗೇಂದ್ರ.
ಬಳ್ಳಾರಿ(ಮಾ.15): ತಾಲೂಕಿನ ಜೋಳದರಾಶಿ ಗ್ರಾಮದ ಬಳಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರು ಕ್ಷೇತ್ರದ ಜನರಿಗೆ ಆಯೋಜಿಸಿದ್ದ ಬಾಡೂಟದ ವೇಳೆ ಬೀಸಿದ ಜೋರಾದ ಗಾಳಿಗೆ ಪೆಂಡಾಲ್ ಕಿತ್ತು ಹೋಗಿ ನೆಲಕ್ಕಪ್ಪಳಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚುನಾವಣೆ ಹಿನ್ನೆಲೆ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರು ತಾಲೂಕಿನ ಜೋಳದರಾಶಿ ಗ್ರಾಮದ ಬಳಿಯ ಕುಂಟು ಮಾರಮ್ಮ ದೇವಿಗೆ ಪೂಜೆ ಹಾಗೂ ಸುಮಾರು 50 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದರು.
ಸಸ್ಯಾಹಾರಿ ಹಾಗೂ ಮಾಂಸಾಹಾರಿಗಳಿಗೆ ಪ್ರತ್ಯೇಕ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಇದ್ದಕ್ಕಿದ್ದಂತೆಯೇ ಜೋರಾಗಿ ಬೀಸಿದ ಗಾಳಿಯಿಂದಾಗಿ ಬಾಡೂಟ ನಡೆಯುತ್ತಿದ್ದ ಜಾಗದ ಪೆಂಡಾಲ್ ಸಂಪೂರ್ಣ ಕಿತ್ತು ಮೇಲೆ ಹಾರಿತು. ಇದರಿಂದ ಕಂಗಾಲಾದ ಜನ ಊಟ ಮಾಡುವುದು ಬಿಟ್ಟು ಹೊರ ಓಡಿ ಬಂದರು. ಮಾಜಿ ಶಾಸಕ ಅನಿಲ್‌ಲಾಡ್ ಸೇರಿದಂತೆ ಅನೇಕ ಗಣ್ಯರು ಬಾಡೂಟ ಸವಿಯುತ್ತಿದ್ದರು. ದಿಢೀರನೆ ಜೋರಾಗಿ ಬೀಸಿದ ಗಾಳಿಗೆ ಕೆಲವೇ ನಿಮಿಷಗಳಲ್ಲಿ ಬೃಹತ್ ಗಾತ್ರದ ಪೆಂಡಾಲ್ ಕಿತ್ತು ಚೆಲ್ಲಾಪಿಲ್ಲಿಯಾಯಿತು. ಯಾವುದೇ ಅಹಿತಕರ ಘಟನೆ ಜರುಗಲಿಲ್ಲ ಎಂದು ಪ್ರತ್ಯಕ್ಷ ದರ್ಶಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ನರೇಂದ್ರ ಮೋದಿ ಬಂದ ನಂತರ ಪ್ರಶಸ್ತಿ ಮೌಲ್ಯ ಹೆಚ್ಚಳ: ಕೆಂದ್ರ ಸಚಿವ ಎ ನಾರಾಯಣಸ್ವಾಮಿ
ಶ್ರೀರಾಮುಲು ವಾಗ್ದಾಳಿ:
ಶಾಸಕ ನಾಗೇಂದ್ರ ಅವರು ಸಾರ್ವಜನಿಕರಿಗೆ ಬಾಡೂಟ ಏರ್ಪಡಿಸಿದ್ದರ ಕುರಿತು ಪ್ರತಿಕ್ರಿಯಿಸಿರುವ ಸಚಿವ ಬಿ. ಶ್ರೀರಾಮುಲು, ಚುನಾವಣೆ ಸಮಯದಲ್ಲಿ ಜನರಿಗೆ ಊಟ ಹಾಕಿಸಲು ನೆನಪಾಯಿತೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಎದುರೇಟು ನೀಡಿರುವ ಶಾಸಕ ನಾಗೇಂದ್ರ, ಪ್ರತಿವರ್ಷವೂ ನಾನು ಕುಂಟು ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ, ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದೇನೆ. ಚುನಾವಣೆ ದೃಷ್ಟಿಯಿಂದಲ್ಲ. ನಮ್ಮ ಮಕ್ಕಳನ್ನು(ಪಕ್ಷದ ಶಾಸಕರನ್ನು) ಹೊತ್ತೊಯ್ದು ಅಧಿಕಾರಕ್ಕೆ ಬಂದಿರುವ ಶ್ರೀರಾಮುಲು, ನಮಗೇನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.