ಕಾರವಾರ: ಬನವಾಸಿ ಕದಂಬೋತ್ಸವ ನಡೆದು 2 ವರ್ಷವಾದ್ರೂ ಶಾಮಿಯಾನ ಮಾಲೀಕನಿಗೆ ಬಿಲ್ ಬಂದಿಲ್ಲ..!
2020ರಲ್ಲಿ ನಡೆದ ಉತ್ಸವದಲ್ಲಿ ಅಂದಿನ ಸಿಎಂ ಯಡಿಯೂರಪ್ಪನವರು ಭಾಗಿಯಾಗಿದ್ದ ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಲ್‌ನವರಿಗೆ ಇನ್ನೂ ಸರ್ಕಾರ ಬಿಲ್ಲನ್ನೇ ಪಾವತಿಸಿಲ್ಲ
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ(ನ.10): ಕನ್ನಡ ನಾಡಿನ ಮೊದಲ ರಾಜಧಾನಿ ಬನವಾಸಿಯಲ್ಲಿ ಪ್ರತಿ ವರ್ಷ ಸರ್ಕಾರದಿಂದ ಕದಂಬೋತ್ಸವ ಆಚರಿಸಲಾಗುತ್ತಿತ್ತು. 2020ರ ನಂತರ ಕೋವಿಡ್ ಹಾಗೂ ಇನ್ನಿತರ ಕಾರಣದಿಂದ ಉತ್ಸವವನ್ನು ಸರ್ಕಾರ ಆಚರಿಸಿಲ್ಲ. ಆದರೆ, 2020ರಲ್ಲಿ ನಡೆದ ಉತ್ಸವದಲ್ಲಿ ಅಂದಿನ ಸಿಎಂ ಯಡಿಯೂರಪ್ಪನವರು ಭಾಗಿಯಾಗಿದ್ದ ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಲ್‌ನವರಿಗೆ ಇನ್ನೂ ಸರ್ಕಾರ ಬಿಲ್ಲನ್ನೇ ಪಾವತಿಸಿಲ್ಲ. ಕಳೆದ ಎರಡು ವರ್ಷದಿಂದ ಬಿಲ್‌ಗಾಗಿ ಪೆಂಡಲ್ ಹಾಕಿದವರು ಕಚೇರಿಯಿಂದ ಕಚೇರಿ ಓಡಾಡುತ್ತಿದ್ದು, ಬಾಕಿಯಿರುವ ಲಕ್ಷಾಂತರ ರೂಪಾಯಿ ಬಿಲ್ ಪಾವತಿಸುವಂತೆ ಗೋಗರೆಯುತ್ತಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...
ಬನವಾಸಿ ಅಂದ್ರೆ ನಮಗೆ ಮೊದಲು ನೆನಪಾಗೋದು ಕನ್ನಡಿಗರ ಮೊದಲನೇ ರಾಜಧಾನಿ ಹಾಗೂ ಕದಂಬರ ಶೌರ್ಯ. ಈ ಯಶೋಗಾಥೆ ಹಾಗೂ ಸಂಪದ್ಭರಿತವಾಗಿರುವ ಕನ್ನಡ ನಾಡು, ನುಡಿಯನ್ನು ಸಾರುವ ಉದ್ದೇಶದಿಂದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಪ್ರತಿ ವರ್ಷ ಕದಂಬೋತ್ಸವ ಅನ್ನೋ ಉತ್ಸವವನ್ನು ಸರ್ಕಾರ ಅದ್ಧೂರಿಯಾಗಿ ನಡೆಸುತ್ತಿತ್ತು. ಕಳೆದ 2020ರಲ್ಲಿ ಸಿಎಂ ಯಡಿಯೂರಪ್ಪನವರು ಇದ್ದಾಗ ಕೊನೆಯದಾಗಿ ಉತ್ಸವವನ್ನು ಆಚರಿಸಲಾಗಿತ್ತು. ನಂತರ ಕೊರೋನಾ ಇನ್ನಿತರ ಕಾರಣದಿಂದ ಉತ್ಸವವನ್ನು ಆಚರಿಸಿರಲಿಲ್ಲ. ಆದರೆ, 2020ರಲ್ಲಿ ನಡೆದ ಉತ್ಸವದ ಬಿಲ್ ಗಳನ್ನು ಸರಕಾರ ಇನ್ನೂ ಪಾವತಿಸಿಲ್ಲ ಅನ್ನೋ ಆರೋಪ ಇದೀಗ ಕೇಳಿ ಬಂದಿದೆ.
ಸಿಎಂ ಯಡಿಯೂರಪ್ಪ ಉತ್ಸವಕ್ಕೆ ಆಗಮಿಸುತ್ತಾರೆ ಅನ್ನೋ ಹಿನ್ನೆಲೆಯಲ್ಲಿ ಪೆಂಡಲ್, ಕುರ್ಚಿ ಇನ್ನಿತರ ವಸ್ತುಗಳನ್ನು ಕಾರವಾರದ ಶಾಮಿಯಾನ ಮಾಲೀಕರೊಬ್ಬರಿಂದ ಹಾಕಿಸಲಾಗಿತ್ತು. ಅಂದಿನ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಇತರ ಇಲಾಖೆಯ ಅಧಿಕಾರಿಗಳು ಹಾಕಿಸಿದ್ದರು. ಪೆಂಡಲ್ ಹಾಕಿದ್ದ ಸುಮಾರು 10 ಲಕ್ಷ ರೂ. ಬಿಲ್ಲನ್ನು ಶಾಮಿಯಾನ ಮಾಲೀಕರು ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಆದರೆ, ಮೂರನೇ ವರ್ಷಕ್ಕೆ ಕಾಲಿಟ್ಟರೂ ಇಂದಿಗೂ ಬಿಲ್ ದೊರಕದ್ದರಿಂದ ಶಾಮಿಯಾನ ಮಾಲಕ ಪರದಾಡುವಂತಾಗಿದ್ದು, ಸರ್ಕಾರದ ವಿರುದ್ಧ ಇದೀಗ ಶಾಮಿಯಾನ ಮಾಲೀಕ ಪ್ರಶಾಂತ್ ಸಾವಂತ್ ಕಿಡಿಕಾರಿದ್ದಾರೆ.
ಭತ್ತಕ್ಕೆ ಜಿಗಿಹುಳು ಕಾಟ: ಗದ್ದೆಗಳಿಗೆ ವಿಜ್ಞಾನಿಗಳ ಭೇಟಿ
ಅಂದಹಾಗೆ, ಕದಂಬೋತ್ಸವದ ಶಾಮಿಯಾನ ಟೆಂಡರ್ ಬೆಂಗಳೂರು ಮೂಲದ ನಂದಕಿಶೋರ್ ಎಂಬವರಿಗೆ ಆಗಿತ್ತಂತೆ. ಆದರೆ, ಸಿಎಂ ಆಗಮನ ಹಿನ್ನೆಲೆಯಲ್ಲಿ ಹೆಚ್ಚುವರಿ ವಸ್ತುಗಳು ಬೇಕೆಂದು ಕಾರವಾರದ ಶಾಮಿಯಾನ ಮಾಲೀಕನಿಂದ ಹಾಕಿಸಿದ್ದರು.
ಒಟ್ಟು ಸುಮಾರು 23 ಲಕ್ಷ ರೂ. ಬಿಲ್ ಗಳಾಗಿದ್ದು, ಬೆಂಗಳೂರಿನ ಶಾಮಿಯಾನ ಮಾಲೀಕನಿಗೂ ಬಿಲ್ ಮಂಜೂರಿಯಾಗಿಲ್ಲ ಅನ್ನೋ ಮಾಹಿತಿಗಳಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳ ಬಳಿ ಹಣ ಬಿಡುಗಡೆ ಮಾಡಿ ಎಂದು ಪ್ರತಿ ದಿನ ಓಡಾಡಿದರೂ ಬಿಲ್ ಮಾತ್ರ ಇನ್ನೂ ನೀಡದೆ ಶಾಮಿಯಾನ ಮಾಲಕನನ್ನೇ ಸತಾಯಿಸಲಾಗುತ್ತಿದೆ.
ಸದ್ಯ ಕರಾವಳಿ ಉತ್ಸವವನ್ನು ಆಯೋಜನೆ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮೊದಲ ಹಳೆಯ ಉತ್ಸವದ ಬಿಲ್ ಗಳನ್ನು ನೀಡಿ ನಂತರ ಕರಾವಳಿ ಉತ್ಸವ ಮಾಡಿ ಅಂತಾ ಶಾಮಿಯಾನ ಮಾಲೀಕರು ಆಗ್ರಹಿಸಿದ್ದಾರೆ. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಕೇಳಿದರೆ ಮೂರು ವರ್ಷದಿಂದ ಬಿಲ್ ಆಗದೇ ಇರುವ ವಿಚಾರ ತನ್ನ ಗಮನಕ್ಕೆ ಬಂದಿಲ್ಲ. ವಿಚಾರಿಸಿ ಸಮಸ್ಯೆ ಬಗೆಹರಿಸುತ್ತೇನೆ ಅಂತ ಜಿಲ್ಲಾಧಿಕಾರಿ ಪ್ರಭುಲಿಂಗ್ ಕವಳಕಟ್ಟಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯಮಟ್ಟದ ಉತ್ಸವದಲ್ಲಿ ಅದು ಕೂಡಾ ಮಾಜಿ ಸಿಎಂ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಲ್ ಬಿಲ್ ಗಳನ್ನೇ ಇನ್ನೂ ಕೊಡದೇ ಸತಾಯಿಸುತ್ತಿರುವುದು ನಿಜಕ್ಕೂ ದುರಂತ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಆದಷ್ಟು ಬೇಗ ಬಿಲ್ ಮೊತ್ತವನ್ನು ನೀಡುವ ಮೂಲಕ ಸಮಸ್ಯೆ ಬಗೆಹರಿಸಬೇಕಿದೆ.