'ಇನ್ಮುಂದೆ ಎಲ್ಲೆಂದರಲ್ಲಿ ಉಗುಳಿದ್ರೆ ಬೀಳಲಿದೆ ದಂಡ'
ಉಗುಳುವುದರಿಂದ ಕೊರೋನಾ, ಕ್ಷಯ, ಇತರೆ ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚು| ಬಿಬಿಎಂಪಿ, ನಮ್ಮ ಬೆಂಗಳೂರು ಫೌಂಡೇಷನ್, ಬ್ಯೂಟಿಫುಲ್ ಬೆಂಗಳೂರು ಸೇರಿದಂತೆ ಇತರೆ ಸಂಸ್ಥೆಗಳ ಸಹಯೋಗದಲ್ಲಿ ‘ಸ್ವಚ್ಛ ಸರ್ವೇಕ್ಷಣ್’ ಅಭಿಯಾನ| ಭಿತ್ತಿಪತ್ರ ಆಟೋ, ಕಾರುಗಳಿಗೆ ಅಂಟಿಸುವ ಮೂಲಕ ಜಾಗೃತಿ|
ಬೆಂಗಳೂರು(ಮಾ.28): ಎಲ್ಲೆಂದರಲ್ಲಿ ಉಗುಳುವುದರಿಂದ ಕೊರೋನಾ, ಕ್ಷಯ ರೋಗ ಹಾಗೂ ಇನ್ನಿತರೆ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಎಚ್ಚರಿಕೆ ನೀಡಿದ್ದಾರೆ.
"
ಶನಿವಾರ ಬಿಬಿಎಂಪಿ, ನಮ್ಮ ಬೆಂಗಳೂರು ಫೌಂಡೇಷನ್, ಬ್ಯೂಟಿಫುಲ್ ಬೆಂಗಳೂರು ಸೇರಿದಂತೆ ಇತರೆ ಸಂಸ್ಥೆಗಳ ಸಹಯೋಗದಲ್ಲಿ ‘ಸ್ವಚ್ಛ ಸರ್ವೇಕ್ಷಣ್’ ಅಭಿಯಾನದ ಅಂಗವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ‘ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಲ್ಲಿಸಿ’ ಎಂಬ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ: ಜಾತ್ರೆ, ಧಾರ್ಮಿಕ ಉತ್ಸವ ರದ್ದು!
ನಗರದ ಟ್ರಾಫಿಕ್ ಸಿಗ್ನಲ್, ಬಸ್ ನಿಲ್ದಾಣ, ತಂಗುದಾಣ, ಉದ್ಯಾನ ಸೇರಿದಂತೆ ಇನ್ನಿತರೆ ಪ್ರಮುಖ ಸ್ಥಳಗಳಲ್ಲಿ ತಂಬಾಕು ಹಾಕಿಕೊಂಡು ಉಗಿದಾಗ ಅಲ್ಲಿ ಸ್ವಚ್ಛತೆ ಹಾಳಾಗುತ್ತದೆ. ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಬೈಲಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ಒಂದು ಸಾವಿರ ದಂಡ ವಿಧಿಸಬಹುದಾಗಿದೆ. ಕೋವಿಡ್ ಇರುವ ಹಿನ್ನೆಲೆಯಲ್ಲಿ ಮಾರ್ಷಲ್‌ಗಳು ಮಾಸ್ಕ್ ಧರಿಸದಿರುವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವವರಿಗೆ ದಂಡ ವಿಧಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸುವುದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಿದೆ ಎಂದರು.
ಮಾರ್ಷಲ್‌ಗಳು ಮತ್ತು ಸ್ವಯಂ ಸೇವಕರು ನಗರದ ಗರುಡಾಮಾಲ್‌ನಿಂದ ಮ್ಯಾಗ್ರತ್ ರಸ್ತೆ, ಬ್ರಿಗೇಡ್ ರಸ್ತೆ ಮೂಲಕ ಚರ್ಚ್ ಸ್ಟ್ರೀಟ್‌ವರೆಗೆ ಸಾಗಿ ಜಾಗೃತಿ ಮೂಡಿಸಿದರು. ಈ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಲ್ಲಿಸಿ ಎಂಬ ಭಿತ್ತಿಪತ್ರಗಳನ್ನು ಆಟೋ, ಕಾರುಗಳಿಗೆ ಅಂಟಿಸುವ ಮೂಲಕ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಚಾಲಕರಿಗೆ ವಿತರಿಸಲಾಯಿತು.