ವಿಜಯಪುರ[ಜ. 01]: ಕೇಂದ್ರ ಸರ್ಕಾರವು ರೈತರ ಸಾಲ ಮನ್ನಾ ಮಾಡುವುದು ಒಳ್ಳೆಯದು. ಅದರ ಜತೆಗೆ ರೈತರ ಆರ್ಥಿಕ ಸಬಲೀಕರಣವನ್ನೂ ಮಾಡಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ತಾಲೂಕಿನ ಕಗ್ಗೋಡದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲಮನ್ನಾ ತಾತ್ಕಾಲಿಕ ದೃಷ್ಟಿಯಿಂದ ಮಾತ್ರ ಉತ್ತಮ. ದೂರದೃಷ್ಟಿಇಟ್ಟುಕೊಂಡು ಶಾಶ್ವತ ಪರಿಹಾರದ ಕುರಿತು ಸರ್ಕಾರ ಚಿಂತಿಸಬೇಕು ಎಂದೂ ಅವರು ಸಲಹೆ ನೀಡಿದರು.

ರೈತ-ರಾಮ ಇವರಲ್ಲಿ ಯಾರು ಮುಖ್ಯ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ನನಗೆ ರೈತ ಹಾಗೂ ರಾಮ ಇಬ್ಬರೂ ಮುಖ್ಯ. ರಾಮ ಸ್ವಾಭಿಮಾನದ ಪ್ರಶ್ನೆಯಾದರೆ, ರೈತ ದೇಶದ ಪ್ರಶ್ನೆ. ಯಾವುದೇ ಸರ್ಕಾರ ಇರಲಿ ರೈತರ ಬಗ್ಗೆ ಕಾಳಜಿ ತೋರಬೇಕು ಎಂದು ಹೇಳಿದರು.

ಇದೇ ವೇಳೆ ರಾಮಮಂದಿರ ನಿರ್ಮಾಣದ ವಿಚಾರವಾಗಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಅವಕಾಶವಿರುವುದರಿಂದ ಈಗ ಅದು ದಿಟ್ಟಹೆಜ್ಜೆ ಇಡಬೇಕು ಎಂದು ಪುನರುಚ್ಚರಿಸಿದ ಅವರು, ಲೋಕಸಭಾ ಚುನಾವಣೆ ಪೂರ್ವದಲ್ಲಿ ಸರ್ಕಾರದ ನಿರ್ಧಾರ ಹೊರ ಬೀಳದಿದ್ದರೆ ನಮ್ಮ ಮುಂದಿನ ನಡೆ ಬಗ್ಗೆ ನಂತರ ವಿಚಾರ ಮಾಡಲಾಗುವುದು ಎಚ್ಚರಿಕೆ ನೀಡಿದರು.

ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭಮೇಳದ ಸಂದರ್ಭದಲ್ಲಿ ಸಂಸತ್‌ ಸದಸ್ಯರು ಭಾಗವಹಿಸಲಿದ್ದು, ಆಗ ಅಯೋಧ್ಯೆ ರಾಮಮಂದಿರ ನಿರ್ಮಾಣದ ಬಗ್ಗೆ ಚರ್ಚೆ ನಡೆಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.