ಪೇಜಾವರ ಶ್ರೀ ಚಿಕಿತ್ಸೆಗೆ ಸ್ಪಂದನೆ : ಕಣ್ಣು ತೆರೆಯಲು ಪ್ರಯತ್ನ

ಉಸಿರಾಟದ ಸಮಸ್ಯೆಯಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸುಧಾರಣೆಯಾಗುತ್ತಿದೆ. 

Pejavara Shree Health Condition Improved

ಉಡುಪಿ [ಡಿ.22]:  ಅನಾರೋಗ್ಯ ನಿಮಿತ್ತ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಮುಖ್ಯಮಂತ್ರಿ ಯಡಿಯೂರಪ್ಪ, ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥರು ತಿಳಿಸಿದ್ದಾರೆ. ಇದು ಶ್ರೀಗಳ ಭಕ್ತರಿಗೆ, ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿನ ಸಮಾಧಾನಕ್ಕೆ ಕಾರಣವಾಗಿದೆ.

ಪೇಜಾವರ ಶ್ರೀಗಳು ಮೊದಲ ದಿನಕ್ಕಿಂತ ಶನಿವಾರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮುಂದುವರಿದಿದೆ. ಒಟ್ಟಾರೆ ಗಂಭೀರ ಸ್ಥಿತಿಯಲ್ಲೇ ಇದ್ದಾರೆ ಎಂದು ಕಸ್ತೂರ್ಬಾ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

ಶನಿವಾರ ಆಸ್ಪತ್ರೆಗೆ ಭೇಟಿ ಶ್ರೀಗಳ ಆರೋಗ್ಯ ವಿಚಾರಿಸಿ ನಂತರ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಶ್ರೀಗಳು ಕಣ್ಣು ತೆರೆಯುವ, ಸಹಜವಾಗಿ ಉಸಿರಾಡಲು ಪ್ರಯತ್ನ ಮಾಡಿದ್ದಾರೆ. ಅವರಿಗಿದ್ದ ಸೋಂಕು ಕೂಡ ಕಡಿಮೆಯಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎಂದರು. ಶ್ರೀಗಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೂ ಅವರ ದೇಹ ಸಹಜ ಕೆಲಸಗಳನ್ನು ಮಾಡುತ್ತಿದೆ. ಮೂತ್ರ ವಿಸರ್ಜನೆಯೂ ಆಗುತ್ತಿದೆ. ಆದ್ದರಿಂದ ಅವರು ಪೂರ್ಣ ಗುಣಮುಖರಾಗುತ್ತಾರೆ ಎಂದು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.

48 ಗಂಟೆಗಳ ತೀವ್ರ ನಿಗಾವಣೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮೊದಲ 24 ಗಂಟೆಗಳಲ್ಲಿ ಶ್ರೀಗಳು ಚೇತರಿಸಿಕೊಂಡಿದ್ದರೂ, ಗಂಭೀರ ಸ್ಥಿತಿಯಿಂದ ಹೊರಗೆ ಬಂದಿಲ್ಲ. ತೀವ್ರ ನಿಗಾ ಘಟಕದ ಮುಚ್ಚಿದ ಬಾಗಿಲಿನ ಗಾಜಿನ ಕಿಂಡಿಯಿಂದಷ್ಟೇ ಅವರನ್ನು ನೋಡುವುದಕ್ಕೆ ಅವಕಾಶ ನೀಡಲಾಗುತ್ತಿದೆ.

ಮಸೀದಿ ನಿರ್ಮಾಣಕ್ಕೆ ಹಿಂದೂಗಳು ಸಹಕರಿಸಬೇಕು: ಪೇಜಾವರ ಶ್ರೀ...

ವಿವಿಧ ಗಣ್ಯರ ಭೇಟಿ: ಪೇಜಾವರ ಶ್ರೀಗಳ ಯೋಗಕ್ಷೇಮ ವಿಚಾರಿಸಲು ಶನಿವಾರ ನಾಡಿನ ವಿವಿಧ ಮಠಾಧೀಶರು, ಗಣ್ಯರು, ಜನಪ್ರತಿನಿಧಿಗಳು ಮತ್ತು ಭಕ್ತರು ಸಾಲುಸಾಲಾಗಿ ಆಗಮಿಸುತ್ತಿದ್ದಾರೆ. ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ, ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ, ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರು, ಭೀಮನಕಟ್ಟೆಮಠದ ಶ್ರೀ ರಘುವರೇಂದ್ರ ತೀರ್ಥರು, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಬಾರ್ಕೂರು ಸಂಸ್ಥಾನದ ಶ್ರೀ ಸಂತೋಷ್‌ ಭಾರತಿ, ರಾಮೋಹಳ್ಳಿಯ ಶ್ರೀ ವಿದ್ಯಾನಂದನ ಸ್ವಾಮೀಜಿ, ಭಂಡಾರಿಕೇರಿ ಮಠದ ಶ್ರೀ ವಿದ್ಯೇಶ ತೀರ್ಥರು ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಬಸವರಾಜ ಬೊಮ್ಮಾಯಿ, ಕಾರಜೋಳ, ಸಂಸದೆ ಶೋಭಾ, ಮಾಜಿ ಸಚಿವರಾದ ಆಸ್ಕರ್‌ ಫೆರ್ನಾಂಡಿಸ್‌, ಸಿ.ಎಂ.ಇಬ್ರಾಹಿಂ, ಯು.ಟಿ.ಖಾದರ್‌, ಕೃಷ್ಣ ಪಾಲೇಮಾರ್‌, ಜಿ.ಎ. ಬಾವಾ, ಶಾಸಕ ಐವನ್‌ ಡಿಸೋಜ ಮುಂತಾದವರು ಆಗಮಿಸಿ ಶ್ರೀಗಳ ಆರೋಗ್ಯ ವಿಚಾರಿಸಿದರು ಎಂದು ಪೇಜಾವರ ಶ್ರೀಗಳ ಆಪ್ತ ಸಹಾಯಕ ವಿಷ್ಣುಮೂರ್ತಿ ಆಚಾರ್ಯ ತಿಳಿಸಿದ್ದಾರೆ.

ಪೇಜಾವರ ಶ್ರೀಗಳ ಆಪ್ತರಲ್ಲೊಬ್ಬರಾಗಿರುವ ಉದ್ಯಮಿ ನೀರಾ ರಾಡಿಯಾ ಅವರು ಶುಕ್ರವಾರ ರಾತ್ರಿಯೇ ಆಸ್ಪತ್ರೆಗೆ ಭೇಟಿ ನೀಡಿದ್ದು, ಶನಿವಾರ ಮುಂಜಾನೆ ಮತ್ತೊಮ್ಮೆ ಶ್ರೀಗಳನ್ನು ಭೇಟಿಯಾದರು. ಅವರೊಂದಿಗೆ ಟಾಟಾ ಆಸ್ಪತ್ರೆಯ ಇಬ್ಬರು ತಜ್ಞ ವೈದ್ಯರೂ ಬಂದಿದ್ದರು. ಅವರು ಮಣಿಪಾಲ ಆಸ್ಪತ್ರೆಯ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.

Latest Videos
Follow Us:
Download App:
  • android
  • ios