ಖಾನಾಪುರ(ಡಿ.07): ಸ್ಥಳೀಯ ಲೈಲಾ ಶುಗರ್ಸ್ ಕಾರ್ಖಾನೆಗೆ ಕಬ್ಬು ಪೂರೈಸುತ್ತಿರುವ ರೈತರಿಗೆ ಕಾರ್ಖಾನೆಯಿಂದ ಮೊದಲ ಕಂತಿನ ರೂಪದಲ್ಲಿ 2200 ರು. ಮತ್ತು ಕಬ್ಬು ಕಟಾವು ವೆಚ್ಚ 283 ರು. ಸೇರಿದಂತೆ ಪ್ರತಿ ಟನ್ ಕಬ್ಬಿಗೆ ಒಟ್ಟು 2483 ದರದ ಪ್ರಕಾರ ಬಿಲ್‌ನ್ನು ಎರಡು ದಿನಗಳಲ್ಲಿ ಪಾವತಿಸಲಾಗುತ್ತದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲ ಹೇಳಿದ್ದಾರೆ. 

ಅವರು ಪಟ್ಟಣದ ಹೊರವಲಯದ ಲೈಲಾ ಶುಗರ್ಸ್ ಕಾರ್ಖಾನೆಯ ಆವರಣದಲ್ಲಿ ಶುಕ್ರವಾರ ಕಾರ್ಖಾನೆಯ ವತಿಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕಿನ ರೈತರು ಈ ವರ್ಷ ಅತಿವೃಷ್ಟಿಯಿಂದ ಕಂಗಾಲಾಗಿದ್ದು, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ರೈತರಿಗೆ ಆದಷ್ಟು ಶೀಘ್ರವೇ ಬಿಲ್ ಪಾವತಿಸಲು ಕಾರ್ಖಾನೆಯ ವ್ಯವಸ್ಥಾಪಕ ಮಂಡಳಿ ಮುಂದಾಗಿದೆ. ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮು ಮುಗಿಯುವುದರ ಒಳಗಾಗಿ ಎರಡನೇ ಕಂತನ್ನೂ ಪಾವತಿಸಲು ಕಾರ್ಖಾನೆ ಬದ್ಧವಿದ್ದು, ತಾವು ಬೆಳೆದ ಕಬ್ಬನ್ನು ಲೈಲಾ ಕಾರ್ಖಾನೆಗೆ ಸಾಗಿಸುವ ಮೂಲಕ ತಮ್ಮೊಂದಿಗೆ ಸಹಕರಿಸಬೇಕು ಎಂದು ಕೋರಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಾರ್ಖಾನೆ ಕಳೆದ ವರ್ಷದ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಸರ್ಕಾರ ನಿಗದಿಪಡಿಸಿದ ಎಫ್.ಆರ್.ಪಿ ದರದಂತೆ ರೈತರಿಗೆ ಬಿಲ್ಲು ಪಾ ವತಿಸಿದೆ. ಈ ವರ್ಷವೂ ಎಫ್.ಆರ್.ಪಿ ದರದಂತೆ ಅಥವಾ ಅಕ್ಕಪಕ್ಕದ ಕಾರ್ಖಾನೆಗಳು ಘೋಷಿಸುವ ದರದಂತೆ ಕಬ್ಬಿನ ಬಿಲ್ಲು ಪಾವತಿಸಲಾಗುವುದು. ಇದುವರೆಗೂ ಕಾರ್ಖಾನೆ ಕಬ್ಬು ಪೂರೈಸಿದ ರೈತರ ಖಾತೆಗಳಿಗೆ ಎರಡು ದಿನಗಳಲ್ಲಿ 2200 ರಂತೆ ಬಿಲ್ಲು ನೀಡಲಾಗುತ್ತದೆ. 

ಕಳೆದ ವರ್ಷದ ಹಂಗಾಮಿನಲ್ಲಿ ಕಾರ್ಖಾನೆಯ ಕಬ್ಬಿನ ರಿಕವರಿ 11.8 ಪ್ರಮಾಣ ದಷ್ಟಿದೆ. ಇದರ ಪ್ರಕಾರ ಸರ್ಕಾರ ನಿಗದಿಪಡಿಸಿದ ದರ ಪ್ರತಿ ಟನ್ ಕಬ್ಬಿಗೆ 3099 ಇದ್ದು, ಇದೇ ದರವನ್ನು ಕಾರ್ಖಾನೆ ಎಲ್ಲ ಕಬ್ಬು ಪೂರೈಕೆದಾರರಿಗೂ ನೀಡಲು ಕಾರ್ಖಾನೆ ಬದ್ಧವಾಗಿದೆ. 

ಪ್ರತಿ ಟನ್ ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚವಾದ 740 ಇದ್ದು, ಇದನ್ನು ಒಟ್ಟು ಬಿಲ್ಲಿನಲ್ಲಿ ಕಳೆದು ಇನ್ನುಳಿದ ಬಾಕಿ 159 ಬಿಲ್ಲನ್ನು ಇದೇ ಡಿಸೆಂಬರ್ ತಿಂಗಳ ಅಂತ್ಯದೊಳಗೆ ಸಂಬಂಧಿಸಿದ ರೈತರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುತ್ತದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಕಾರ್ಖಾನೆಯ ಸಿಇಒ ಮುರಳಿ, ತೋಪಿನಕಟ್ಟಿ ಗ್ರುಪ್‌ನ ಮುಖಂಡರಾದ ಚಾಂಗಪ್ಪ ನಿಲಜಕರ, ವಿಠ್ಠಲ ಕರಂಬಳಕರ ಸೇರಿದಂತೆ ಕಾರ್ಖಾನೆಯ ಅಧಿಕಾರಿಗಳು, ಮಹಾಲಕ್ಷ್ಮೀ ಗ್ರುಪ್‌ನ ಪದಾಧಿಕಾರಿಗಳು ಇದ್ದರು.