ಸದಾನಂದ ದೇಶಭಂಡಾರಿ

ಕುಮಟಾ [ಡಿ.09]: ಸುತ್ತಲೂ ಗೊಂಡಾರಣ್ಯ, ಕ್ರೂರ ಕಾಡುಪ್ರಾಣಿಗಳ ಅವ್ಯಕ್ತ ಭಯ. ಮಾನವರ ಸುಳಿವಿಲ್ಲದ ಅಗೋಚರ ಕಡಿದಾದ ಕಾಲು ದಾರಿ. ಇದೆಲ್ಲದರ ನಡುವೆ ಇರುವ ಕುಗ್ರಾಮವೇ ಬೇಣದಹಳ್ಳಿ. ಈ ಊರಿಗೆ ವಿದ್ಯುತ್‌, ನೀರಿನ ಸೌಲಭ್ಯವಿಲ್ಲ, ರಸ್ತೆಯೂ ಇಲ್ಲ, ಆರೋಗ್ಯ ಸೌಲಭ್ಯವಂತೂ ದೂರದ ಮಾತಾಗಿದೆ. ಈ ಹಳ್ಳಿಗರು ಹೊರ ಪ್ರಪಂಚ ನೋಡುವುದು ವಾರ, ತಿಂಗಳಿಗೊಮ್ಮೆ ಮಾತ್ರ!

ಇದು, ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಅಂಕೋಲಾ ತಾಲೂಕಿನ ಗಡಿ ಭಾಗದಲ್ಲಿ ಬರುತ್ತದೆ. ಈ ಊರು ಅಂಕೋಲಾ ತಾಲೂಕಿನ ಮೊಗಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಆದರೆ, ವ್ಯಾಪಾರ-ವಹಿವಾಟು, ವೈದ್ಯಕೀಯ ಸೌಲಭ್ಯ ಕುಮಟಾಕ್ಕೆ ಅವಲಂಬನೆ. ಆಡಳಿತಾತ್ಮಕ ವ್ಯವಹಾರ ಮಾತ್ರ ಅಂಕೋಲಾ.

ಕುಮಟಾದಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ 11 ಕಿ.ಮೀ. ಸಾಗಿ ಬ್ರಹ್ಮೂರು ತಲುಪಿ ಅಲ್ಲಿಂದ 8 ಕಿ.ಮೀ. ಕಡಿದಾದ ಬೆಟ್ಟದ ಕಾಲು ದಾರಿಯಲ್ಲಿ ಸಾಗಬೇಕು. ಅಂಕೋಲಾದಿಂದ ರಾಷ್ಟಿ್ರಯ ಹೆದ್ದಾರಿ 66ರಿಂದ ಮಾದನಗೇರಿ ತಿರುವಿನಿಂದ ಅಂಗಡಿಬೈಲ್‌ ತಲುಪಿ ಅಲ್ಲಿಂದ 8 ಕಿ.ಮೀ. ಕಡಿದಾದ ಗುಡ್ಡದ ದಾರಿಯಲ್ಲಿ ಸಾಗಬೇಕು.

ಬೇಣದಹಳ್ಳಿ, ಸಾಲಭಾಗ, ದೇವರಗದ್ದೆ, ಕೊಪ್ಪ, ಬಡಗುಮನೆ, ಅತ್ತಿಮನೆ, ಇತ್ತಲಮನೆ, ಈಡಿಭತ್ತೆ, ತಂಗನಮನೆ, ಹೊಸಗದ್ದೆ, ಕೇಳಗಿನಕೇರಿ, ನಡಿಕೇರಿ ಬೇಣದಹಳ್ಳಿ ಗ್ರಾಮದ ಕೇರಿಗಳು. ಇಲ್ಲಿ ಕುಂಬ್ರಿ ಮರಾಠಿ ಜಾತಿಗೆ ಸೇರಿದ ಒಟ್ಟು 35 ಕುಟುಂಬ, 350 ಜನರಿದ್ದಾರೆ. 175 ಮತದಾರರಿದ್ದಾರೆ. ಚಿಮಣಿ ಬುಡ್ಡಿಯನ್ನು ಬಳಸಿ ಗ್ರಾಮಸ್ಥರು ಬಾಳ್ವೆ ಮಾಡುತ್ತಿದ್ದಾರೆ. ಆರು ಗಂಟೆಯಾದರೆ ಕಾರ್ಗತ್ತಲು ಹಳ್ಳಿಯನ್ನು ಆವರಿಸುತ್ತದೆ.

ಹೆಣ್ಣು ಕೊಡುವರಿಲ್ಲ:

ಇಲ್ಲಿನ ಹುಡುಗಿಯರನ್ನು ಬೇರೆ ಊರಿಗೆ ಮದುವೆ ಮಾಡಿಕೊಡುತ್ತಾರೆ. ಆದರೆ, ಈ ಊರಿಗೆ ಬೇರೆ ಊರಿನಿಂದ ಹುಡುಗಿರನ್ನು ಕೊಡೋದಿಲ್ಲ. ಹೀಗಾಗಿ ಇಲ್ಲಿರುವ ಯುವಕರಿಗೆ ಕಂಕಣಭಾಗ್ಯ ಕಡಿಮೆ. ಈ ಗ್ರಾಮದಲ್ಲಿರುವ ಒಂದೊಂದು ಮನೆಗಳು ಕನಿಷ್ಠ ಅರ್ಧ ಕಿ.ಮೀ. ಅಂತರದಲ್ಲಿವೆ.

ಝರಿ ನೀರೇ ಜೀವಜಲ:

ಈ ಊರಲ್ಲಿ ಬಾವಿಗಳೇ ಇಲ್ಲ. ಝರಿ ನೀರೆ ಜೀವಜಲ. ಗುಡ್ಡದ ಬುಡದಿಂದ ಬರುವ ಒರತೆ ನೀರಿನ ಸಣ್ಣ ಜಲ ರಾಶಿಯೇ ಇವರ ಜೀವಾಳ, ಝರಿ ನೀರಿಗೆ ಹರಣಿ ಹಾಕಿ ನೀರನ್ನು ಪಡೆಯಲಾಗುತ್ತಿದೆ. ಜಲ ಝರಿ ಮಾತ್ರ ಎಂದಿಗೂ ಬತ್ತಿಲ್ಲ. ಗಿಡ ಮರಗಳಿಗೂ ಈ ನೀರೆ ಬಳಕೆ ಮಾಡಲಾಗುತ್ತಿದೆ.

ಕಂಬಳಿಯಲ್ಲಿ ಹೊತ್ಯೊಯ್ಯಬೇಕು:

ವೈದ್ಯಕೀಯ ಸೌಲಭ್ಯ ಇಲ್ಲವೇ ಇಲ್ಲ. ನಡುರಾತ್ರಿ ಜನತೆಯ ಆರೋಗ್ಯ ಕೆಟ್ಟರೇ ದೇವರೇ ಗತಿ. ಕಾನನದ ಕಾರ್ಗತ್ತಲಲ್ಲೇ ಕಂಬಳಿಯ ಜೋಕಾಲಿಯಲ್ಲಿ ಅನಾರೋಗ್ಯ ಪೀಡಿತರನ್ನು ಸುಮಾರು 8 ಕಿ.ಮೀ. ಹೊತ್ತೊಯ್ಯಬೇಕಾದ ಅನಿವಾರ್ಯವಿದೆ. ಹೀಗಾಗಿ ಗರ್ಭಿಣಿಯರು ಪ್ರಸವಕ್ಕೆ ಮುನ್ನ ತಿಂಗಳ ಮೊದಲೇ ಕೆಳಗಿನ ಗ್ರಾಮಗಳಿಗೆ ಬಂದು ಉಳಿದುಕೊಳ್ಳುತ್ತಾರೆ. ಸಣ್ಣ-ಪುಟ್ಟಕಾಯಿಲೆಗಳಿಗೆ ಗಿಡಮೂಲಿಕೆಗಳೆ ದಿವ್ಯ ಔಷಧ.

ಶಿವಾಜಿ ಸೋತಾಗ ಕಾಡಿಗೆ ನುಗ್ಗಿದವರು:

ಮಹಾರಾಷ್ಟ್ರ ಮೂಲದ ಕುಂಬ್ರಿ ಮರಾಠಿಗರು ಕಷ್ಟಜೀವಿಗಳು. ಹಿಂದೆ ಮಹಾರಾಷ್ಟದ ದೊರೆ ಶಿವಾಜಿ ಮಹಾರಾಜ ಶತ್ರುಗಳಿಂದ ಸೋತಾಗ ಆತನ ಸೈನ್ಯದಲ್ಲಿದ್ದ ಮರಾಠಿಗರು ಜೀವ ಉಳಿಸಿಕೊಳ್ಳಲು ಕಾಡು ಮೇಡುಗಳಿಗೆ ನುಗ್ಗಿ ಅಡಗಿಕೊಳ್ಳುತ್ತಾರೆ. ಅವರೇ ಇವರು ಎಂಬುದು ಕೆಲವು ದಾಖಲೆಗಳು ಹೇಳುತ್ತವೆ.

ಬೇಣದಹಳ್ಳಿ ಕುಗ್ರಾಮ ಕುಮಟಾ ತಾಲೂಕಿಗೆ ಸೇರ್ಪಡೆಯಾಗಬೇಕು. ಹೆಸರಿಗೆ ಮಾತ್ರ ಅಂಕೋಲಾ ತಾಲೂಕಿಗೆ ಸೇರಿದ್ದೇವೆ. ಇದರಿಂದಾಗಿ ನಮ್ಮೂರಿಗೆ ಯಾವುದೇ ಪ್ರಯೋಜನವಿಲ್ಲ. ಹಲವಾರು ವರ್ಷಗಳಿಂದ ರಸ್ತೆ, ವೈದ್ಯಕೀಯ ವ್ಯವಸ್ಥೆ ಅಥವಾ ಸರ್ಕಾರದ ಯಾವುದೇ ಪ್ರಯೋಜನ ಲಭ್ಯವಾಗುತ್ತಿಲ್ಲ. ನಮ್ಮೂರ ಅಭಿವೃದ್ಧಿಗೆ ಸಹಕರಿಸಿ.

-ಲುಮ್ಮಾ ಮರಾಠಿ, ಬೇಣದಹಳ್ಳಿ