ಬಿ. ಸಂಪತ್‌ ನಾಯಕ್‌

ಕಾರ್ಕಳ[ಆ.12]: ಒಂದು ಕಡೆ ವಿಪರೀತ ಮಳೆ, ಮತ್ತೊಂದು ಕಡೆ ಗುಡ್ಡ ಜರಿದು ರಸ್ತೆ ತಡೆ. ಅತ್ತ ಮನೆಗೂ ಹೋಗಲಾಗದೆ ಇತ್ತ ಆಹಾರ - ನೀರು ಇಲ್ಲದೆ ಸಂಕಷ್ಟದಲ್ಲಿದ್ದ ಪ್ರಯಾಣಿಕರಿಗೆ ಕಾರ್ಕಳದ ಸ್ಥಳೀಯರು ಆಹಾರ ತಂದು ಕೊಡುವ ಮೂಲಕ ಮಾನವೀಯತೆ ಮೆರೆದ ಘಟನೆಯೊಂದು ಬಾಳೆಹೊನ್ನೂರು ಸಮೀಪದಲ್ಲಿ ನಡೆದಿದೆ.

ವರುಣನ ಅರ್ಭಟ ಹಲವು ಮಾನವೀಯ ಘಟನೆಗಳಿಗೆ ಸಾಕ್ಷಿಯಾಗಿವೆ. ಬಾಳೆಹೊನ್ನೂರು, ಚಿಕ್ಕಮಗಳೂರು, ಬೇಲೂರು, ಹಾಸನ ರಸ್ತೆ ಮೂಲಕ ಬೆಂಗಳೂರಿಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಹಾಸನ ವಿಭಾಗದ ಕೆಎಸ್‌ಆರ್‌ಟಿಸಿ ಬಸ್ಸೊಂದು ಅರಣ್ಯ ಪ್ರದೇಶದಿಂದ ಸಾಗುತ್ತಿತ್ತು.ಬಸ್‌ನಲ್ಲಿ 22 ಮಂದಿ ಪ್ರಯಾಣಿಸುತ್ತಿದ್ದರು. ಬಾಳೆಹೊನ್ನೂರು ಸಮೀಪದಿಂದ ಆರು ಕಿ.ಮೀ. ದೂರದಲ್ಲಿ ಅರಣ್ಯ ಪ್ರದೇಶವಿದ್ದು ಆ ಭಾಗದಿಂದಲೇ ವಾಹನಗಳು ಸಾಗಬೇಕಿದೆ.

ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ನೀರು ಹರಿದು ಬಂದ ಪರಿಣಾಮವಾಗಿ ಇದ್ದಕ್ಕಿದ್ದಂತೆ ಮುಂದೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಮುಂದಕ್ಕೆ ಹೋಗಲಾಗದೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲೇ ಬಸ್‌ ರಾತ್ರಿ ನಿಲ್ಲಬೇಕಾಯಿತು. ಒಂದೆಡೆ ಕತ್ತಲು, ಮತ್ತೊಂದೆಡೆ ವಿಪರೀತ ಮಳೆಯಾಗುತ್ತಿದ್ದರಿಂದ ಮುಂದೆ ಸಾಗಲು ಸಾಧ್ಯವಾಗದೇ ಮರಳಿ ಹಿಂದಕ್ಕೂ ಚಲಿಸಲಾಗದೆ ಶುಕ್ರವಾರ ಸಂಜೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 10 ಗಂಟೆಯ ತನಕ ಅನ್ನ, ಆಹಾರ ನೀರು ಇಲ್ಲದೆ ಪ್ರಯಾಣಿಕರು, ಇತರ ವಾಹನ ಸವಾರರು ಪರದಾಡುತ್ತಿದ್ದರು.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಕಾರ್ಕಳದ ಸ್ಥಳೀಯ ನಿವಾಸಿ ವಿವೇಕ್‌ ಪೈ ಮತ್ತವರ ಸ್ನೇಹಿತರು ತಮ್ಮ ಕಾರಿನಲ್ಲಿ ತಿರುಪತಿ ದರ್ಶನ ಮಾಡಿ ಅದೇ ರಸ್ತೆ ಮೂಲಕ ಹಿಂದಿರುಗುತ್ತಿದ್ದ ವೇಳೆ ಬಸ್ಸೊಂದು ರಸ್ತೆ ಮಧ್ಯೆ ಸಿಲುಕಿ ಪ್ರಯಾಣಿಕರು ತೊಂದರೆಗೀಡಾಗಿರುವುದನ್ನು ಕಂಡು ಕಾರಿನಿಂದ ಇಳಿದು ಪ್ರಯಾಣಿಕರಲ್ಲಿ ವಿಚಾರಿಸಿದ್ದಾರೆ. ಕೂಡಲೇ ಪ್ರಯಾಣಿಕರ ಸಂಕಷ್ಟಕ್ಕೆ ಯುವಕರು ಸ್ಪಂದಿಸಿ ಆರು ಕಿ.ಮೀ.ದೂರದಿಂದ ಆಹಾರ, ಟೀ ತಂದು ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತೌಫಿಕ್‌ ಹೋಟೆಲ್‌ನ ಮಾಲೀಕರ ಬಳಿ ವಿವೇಕ್‌ ಪೈ ಘಟನೆ ಕುರಿತು ವಿಚಾರ ತಿಳಿಸಿದಾಗ ತಕ್ಷಣ, ಇಡ್ಲಿ ದೋಸೆ ಹಾಗೂ ಟೀ ಕಟ್ಟಿಕೊಡುವ ಮೂಲಕ ತಮ್ಮ ಕೈಯಲಾದ ಸಹಾಯ ಮಾಡಿದ್ದಾರೆ.

ನಾವು ತಿರುಪತಿ ದರ್ಶನ ಮುಗಿಸಿ ಕಾರ್ಕಳಕ್ಕೆ ಹಿಂದಿರುಗಿ ಬರುತ್ತಿದ್ದ ವೇಳೆ ವಿಪರೀತ ಮಳೆ ಹಾಗೂ ಘಾಟಿ ರಸ್ತೆ ಬ್ಲಾಕ್‌ ಅಗಿದ್ದರಿಂದ ನಾವು ಬಾಳೆಹೊನ್ನೂರು ರಸ್ತೆಯಾಗಿ ಆಗಮಿಸುತ್ತಿದ್ದೆವು. ಆಗ ಬಸ್‌ ಮತ್ತಿತರರ ವಾಹನಗಳು ಆ ಕಡೆಯ ಭಾಗದಲ್ಲಿ ಸಿಲುಕಿಕೊಂಡಿರುವುದು ಕಂಡುಬಂತು. ನಾವು ಅವರ ಬಳಿ ತೆರಳಿ ವಿಚಾರಿಸಿದಾಗ ರಾತ್ರಿಯಿಂದ ಆಹಾರ, ನೀರು ಇಲ್ಲದೆ ಸಿಲುಕಿಕೊಂಡಿರುವುದಾಗಿ ತಿಳಿಸಿದರು. ನಾವು 6 ಕಿ.ಮೀ. ದೂರದ ಹೊಟೇಲ್‌ನಿಂದ ದೋಸೆ, ಇಡ್ಲಿ, ಚಹಾ ತಂದು ಕೊಟ್ಟಿದ್ದೇವೆ

- ವಿವೇಕ್‌ ಪೈ