ತುಮಕೂರು [ಸೆ.20]: ಮೈಸೂರಿನಿಂದ ಹಿರಿಯೂರಿಗೆ ಕೆಎಸ್‌ಆರ್ ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯೋರ್ವ ಮಾಯಸಂದ್ರ  -ತುರುವೇ ಕೆರೆ ಮಧ್ಯೆ ಕೊನೆಯುಸಿರೆಳೆದ ಘಟನೆ ನಡೆದಿದೆ. 

ಚಿತ್ರದುರ್ಗ ತಾಲೂಕು ಹಿರಿಯೂರಿನ ಘಾಟ್ ಬಳಿಯ ನಿವಾಸಿಯಾಗಿದ್ದ ಸುರೇಶ್ (35) ಬ್ಯಾಂಡ್ ಸೆಟ್ ಬಾರಿಸುವ ಕಲಾವಿದನಾಗಿದ್ದ. ಕೆಲಸವಿಲ್ಲದ ವೇಳೆ ಬೇರೆಡೆ ತೆರಳಿ ಪಂಪ್ ಸ್ಟೌವ್ ರಿಪೇರಿ ಮಾಡಿ ಜೀವನ ನಡೆಸುತ್ತಿದ್ದ. ಸ್ಟೌವ್ ರಿಪೇರಿಗೆ ತೆರಳಿದ್ದ ಸುರೇಶ್ ಇಂದು ತನ್ನ ಪತ್ನಿ ಶೃತಿ(30), ಮಕ್ಕಳಾದ ಚಂದ್ರ (5) ಮತ್ತು ದೇವಿ (3) ಯೊಂದಿಗೆ ಮೈಸೂರಿನಿಂದ ಹಿರಿಯೂರಿಗೆ ತೆರಳುತ್ತಿದ್ದ.

ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ಸುರೇಶ್ ಸಮೀಪದ ಚುಂಚನಗಿರಿ ಬಳಿ ಉಪಹಾರವನ್ನೂ ಸಹ ಸೇವಿಸಿದ್ದಾನೆ. ಪಕ್ಕದ ಲ್ಲೇ ಕುಳಿತಿದ್ದ ಪತ್ನಿ ತನ್ನ ಗಂಡ ಮೃತಪಟ್ಟಾದ ಅಳತೊಡಗಿದ್ದಾಳೆ. ವಿಷಯ ತಿಳಿದ ಕಂಡಕ್ಟರ್ ಶಿವಪ್ಪ, ಚಾಲಕ ವೆಂಕಟೇಶ್‌ಗೆ ವಿಷಯ ತಿಳಿಸಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಬಳಿ ಬಸ್ ನಿಲ್ಲಿಸಲು ಸೂಚಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾನವೀಯತೆ ಮೆರೆದ ಜನ: ಗಂಡನ ಸಾವಿನಿಂದ ಸಂಕಟಪಡುತ್ತಿದ್ದ ಆಕೆಯನ್ನು ಕಂಡ ಜನರು ಸಾಂತ್ವನ ಹೇಳಿ, ಧನ ಸಹಾಯಕ್ಕೆ ಮುಂದಾದರು. ಸಾರ್ವಜನಿಕ ರಿಂದ ಸುಮಾರು 17 ಸಾವಿರ ರು. ಸಂಗ್ರಹ ವಾಯಿತು. ತಂದೆ ಕಣ್ಣ ಮುಂದೆಯೇ ಅಸುನೀಗಿದ್ದರೂ ಸಹ ಮಕ್ಕಳಿಗೆ ತನ್ನ ತಂದೆ ಸತ್ತು ಹೋಗಿದ್ದಾರೆ ಎಂಬ ಅರಿವಿಲ್ಲ.

ತಂದೆಯ ಮುಖಕ್ಕೆ ಮುತ್ತಿಡುತ್ತಿದ್ದ, ಮುಖವನ್ನು ಕೈಯಿಂದ ಸವರುತ್ತಿದ್ದ ದೃಶ್ಯ ಹಾಗೂ ಹತ್ತಿರ ಬಂದವರಿಗೆ ಇವರು ನಮ್ಮಪ್ಪ, ನಮ್ಮಪ್ಪ ಎಂದು ಹೇಳುತ್ತಿದ್ದ ದೃಶ್ಯ ನೆರೆದಿದ್ದರವ ಕಣ್ಣಲ್ಲಿ ನೀರು ತರಿಸಿತ್ತು. ವಿಷಯ ತಿಳಿದ ಲಯನ್ಸ್ ಕ್ಲಬ್ ಅಧ್ಯಕ್ಷ ದುಂಡ ಮಲ್ಲಿಕಾರ್ಜುನ್, ಪದಾಧಿಕಾರಿಗಳಾದ ಲೋಕೇಶ್, ಮಿಹಿರ್ ಕುಮಾರ್, ನಾಗರಾಜು, ರವಿಕುಮಾರ್ ಮೊದಲಾದವ ರು ತಮ್ಮ ಸಂಘದ ಸದಸ್ಯರೊಂದಿಗೆ ಚರ್ಚಿಸಿ 10 ಸಾವಿರ ಧನ ಸಹಾಯ ಮಾಡಿದರು.

ಮೃತನ ಕುಟುಂಬಕ್ಕೆ ಎಪಿಎಂಸಿ ಮಾಜಿ ಅಧ್ಯಕ್ಷ ಮಂಗೀಕುಪ್ಪೆ ಬಸವರಾಜು, ಮನೋಹರ್, ಲೋಕಮ್ಮನಹಳ್ಳಿ ಗೇಟ್ ದಯಾನಂದ್, ಪಿ.ಕಲ್ಲಳ್ಳಿ ರಾಜಶೇಖರ್, ತುರುವೇಕೆರೆಯ ಅರ್ಜುನ್ ಧನ ಸಂಗ್ರಹಿದರು. ಪೊಲೀಸರು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ತಮ್ಮ ಹಣದ ಸಹಕಾರದಿಂದ ಅವರ ಗ್ರಾಮಕ್ಕೆ ಕಳಿಸಿಕೊಡುವುದಾಗಿ ಹೇಳಿ ಸಬ್ ಇನ್ಸ್ ಪೆಕ್ಟರ್ ಟಿ.ಎಂ. ಗಂಗಾಧರ್ ಮಾನವೀಯತೆ ಮೆರೆದಿದ್ದಾರೆ.