ಮಂಗಳೂರು/ಉಳ್ಳಾಲ(ಜೂ.05): ಕಾಸರಗೋಡು- ಮಂಗಳೂರು ನಡುವೆ ಸಂಚರಿಸುವ ವಿದ್ಯಾರ್ಥಿಗಳು, ಉದ್ಯೋಗಸ್ಥರಿಗೆ ಪಾಸ್‌ ನೀಡುವ ವ್ಯವಸ್ಥೆಗೆ ಚಾಲನೆ ನೀಡಲಾಗಿದ್ದು, ನೂರಾರು ಮಂದಿ ಬುಧವಾರ ಮತ್ತು ಗುರುವಾರ ನೋಂದಣಿ ಮಾಡಿಕೊಂಡಿದ್ದಾರೆ. ಅವುಗಳನ್ನು ಪರಿಶೀಲಿಸಿ ಪಾಸ್‌ ನೀಡುವ ಕಾರ್ಯಕ್ಕೆ ಜಿಲ್ಲಾಡಳಿತ ಚಾಲನೆ ನೀಡಿದೆ.

ಬಹಳಷ್ಟುಅರ್ಜಿಗಳು ವೆಬ್‌ ಪೋರ್ಟಲ್‌ಗೆ ಬಂದಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಎಲ್ಲರಿಗೂ ಪಾಸ್‌ ನೀಡಲು ಸ್ವಲ್ಪ ಸಮಯ ಹಿಡಿಯಲಿದೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್‌ ತಿಳಿಸಿದ್ದಾರೆ.

 

ಗುರುವಾರ ಯಾರೂ ಬಂದಿಲ್ಲ: ಗುರುವಾರ ಯಾರಿಗೂ ಪಾಸ್‌ ನೀಡದೆ ಇದ್ದುದರಿಂದ ಕಾಸರಗೋಡಿನಿಂದ ಯಾರೂ ಮಂಗಳೂರಿಗೆ ಬಂದಿಲ್ಲ ಎಂದು ತಲಪಾಡಿಯ ತಪಾಸಣಾ ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಎಲ್ಲರಿಗೂ ಪಾಸ್‌ ಸಿಗಲು ಕೆಲ ದಿನಗಳು ಹಿಡಿಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಹನ ಇದ್ದವರಿಗೆ ಮಾತ್ರ: ಈ ಅಂತಾರಾಜ್ಯ ಸಂಚಾರಕ್ಕೆ ಪಾಸ್‌ ಪಡೆಯಬೇಕಾದರೆ ವೆಬ್‌ ಪೋರ್ಟಲ್‌ನಲ್ಲಿ ವಾಹನದ ನೋಂದಣಿ ಸಂಖ್ಯೆ ಮತ್ತು ಯಾವ ವಾಹನ ಎಂಬ ವಿವರ ನಮೂದಿಸಬೇಕಾಗುತ್ತದೆ. ಇಲ್ಲದಿದ್ದರೆ ಪಾಸ್‌ ಸಿಗುವುದಿಲ್ಲ. ಸ್ವಂತ ವಾಹನ ಇದ್ದವರಿಗೆ ಮಾತ್ರ ಸದ್ಯಕ್ಕೆ ಪ್ರವೇಶ ನೀಡಲು ನಿರ್ಧರಿಸಲಾಗಿದೆ.

 

‘ಈಗ ಮೊದಲ ಹಂತದಲ್ಲಿ ವಾಹನ ಇದ್ದವರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಇದು ಮುಕ್ತ ಸಂಚಾರ ಎಂದು ಜನರು ತಪ್ಪಾಗಿ ಭಾವಿಸಬಾರದು. ಆರಂಭಿಕ ಹಂತದಲ್ಲಿ ಈ ರೀತಿಯ ನಿರ್ಬಂಧ ಇರುತ್ತದೆ. ಮುಂದಿನ ದಿನಗಳಲ್ಲಿ ಜನರ ಅಗತ್ಯತೆ ಅನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

1088 ಅರ್ಜಿ ಸ್ವೀಕಾರ:

ಜಿಲ್ಲಾಡಳಿತ ನಿಗದಿಪಡಿಸಿದ ವೆಬ್‌ ಪೋರ್ಟಲ್‌ hಠಿಠಿps://ಚಿಜಿಠಿ.್ಝy/dkdpಛ್ಟಿಞಜಿಠಿ ನಲ್ಲಿ ಗುರುವಾರದವರೆಗೆ 1088 ಅರ್ಜಿಗಳು ಬಂದಿವೆ. ಇನ್ನೂ ಅರ್ಜಿಗಳು ಬರುತ್ತಲೇ ಇವೆ. ಅವುಗಳನ್ನು ಪರಿಶೀಲಿಸಲು ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಅಸಿಸ್ಟೆಂಟ್‌ ಕಮಿಷನರ್‌ ಮದನ್‌ ತಿಳಿಸಿದ್ದಾರೆ.

ತಲಪಾಡಿ ಗಡಿಯಲ್ಲಿ ಪರದಾಡಿದ ಕಾಸರಗೋಡಿಗರು

ಕಾಸರಗೋಡು ನಿವಾಸಿಗಳು ಮಂಗಳೂರಿಗೆ ನಿತ್ಯ ತೆರಳಲು ಗುರುವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆಗೊಳಿಸಿದ ಆನ್‌ಲೈನ್‌ ಪಾಸ್‌ ಸಿಗದೆ ಕಾಸರಗೋಡು ಆಸುಪಾಸಿನ ನಿವಾಸಿಗಳು ಮಂಗಳೂರಿಗೆ ಬರಲು ಸಾಧ್ಯವಾಗದೆ ತಲಪಾಡಿ ಗೇಟಿನಿಂದ ಗಂಟೆಗಳ ಕಾಲ ಕಾದು ವಾಪಸಾದ ಘಟನೆ ನಡೆಯಿತು. ಆದರೆ ಕಾಸರಗೋಡು ಜಿಲ್ಲಾಡಳಿತದ ಇ-ಪಾಸ್‌ ದೊರೆತು ಮಂಗಳೂರು ನಿವಾಸಿಗಳು ಅಲ್ಲಿ ಕೆಲಸ ನಿರ್ವಹಿಸಿ ವಾಪಸ್ಸಾಗಿದ್ದಾರೆ.

ಹಲವು ದಿನಗಳ ಹೋರಾಟದ ಬಳಿಕ ದ.ಕ ಜಿಲ್ಲಾಡಳಿತ ಇ-ಪಾಸ್‌ ಜಾರಿಗೊಳಿಸಿದರೂ, ಗುರುವಾರ ಸಂಜೆಯವರೆಗೂ ಪಾಸ್‌ ಕೈಗೆ ಸಿಗದೆ ಕಾಸರಗೋಡಿಗರು ಪರದಾಡಿದರು. ಕಾಸರಗೋಡಿನಿಂದ ನಗರದ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ಮೂವರು ಸಿಬ್ಬಂದಿ ಆನ್‌ಲೈನ್‌ ಪಾಸ್‌ನಲ್ಲಿ ಪಡೆದ ಉಲ್ಲೇಖ ಸಂಖ್ಯೆ ಹಿಡಿದು ಗಡಿಭಾಗ ತಲಪಾಡಿ ತಲುಪಿದರೂ, ಪಾಸ್‌ ಲಭ್ಯವಾಗದೆ ಕರ್ನಾಟಕ ಪೊಲೀಸರು ಗಡಿ ದಾಟಿಸಲು ಒಪ್ಪಲಿಲ್ಲ. ಬೆಳಗ್ಗೆ 9ಕ್ಕೆ ಬಂದಿದ್ದ ಮೂವರು ಸಿಬ್ಬಂದಿ ಪಾಸ್‌ ಬರುವುದೆಂಬ ನಿರೀಕ್ಷೆಯಲ್ಲಿ ಸಂಜೆಯವರೆಗೂ ಪೊಲೀಸ್‌ ಚೆಕ್‌ ಪಾಯಿಂಟ್‌ನಲ್ಲಿ ಕಾದು ಸುಸ್ತಾಗಿ ವಾಪಸ್ಸಾಗಿದ್ದಾರೆ. ಇನ್ನು ಪಾಸ್‌ ವ್ಯವಸ್ಥೆ ಕಲ್ಪಿಸಿರುವ ವಿಚಾರ ತಿಳಿದು ಮಂಗಳೂರಿನ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಕಾಸರಗೋಡು ನಿವಾಸಿಗಳಿಗೆ ತುರ್ತಾಗಿ ಕೆಲಸಕ್ಕೆ ಹಾಜರಾಗುವಂತೆ ದೂರವಾಣಿ ಮೂಲಕ ಸೂಚಿಸಲಾಗಿತ್ತು. ಇಲ್ಲವಾದಲ್ಲಿ ಕೆಲಸದಿಂದ ತೆಗೆಯುವುದಾಗಿ ಹೇಳಲಾಗಿದೆ. ಇದರಿಂದ ಬೆದರಿದ ಮಂದಿ ಬೆಳಗ್ಗಿನಿಂದ ಸಂಜೆಯವರೆಗೂ ಇ-ಪಾಸ್‌ಗಾಗಿ ಮೊಬೈಲಿನಲ್ಲಿ ಜೋತುಬಿದ್ದರು. ಅಲ್ಲದೆ ಜನಪ್ರತಿನಿಧಿಗಳನ್ನು, ಪೊಲೀಸರನ್ನು ಸಂಪರ್ಕಿಸಿದರೂ ಪ್ರಯೋಜನ ಕಾಣದೆ ಸುಮ್ಮನಾಗಿದ್ದಾರೆ. ಕಾಸರಗೋಡು ಜಿಲ್ಲಾಡಳಿತ ನೀಡುವ ಇ-ಪಾಸ್‌ ಸಕಾಲಕ್ಕೆ ದೊರೆತ ಪರಿಣಾಮ ಗುರುವಾರದಿಂದಲೇ ಕಾಸರಗೋಡು ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಮಂಗಳೂರಿಗರು ಬೆಳಿಗ್ಗೆ ತೆರಳಿ ಸಂಜೆ ವಾಪಸ್ಸಾಗಿದ್ದಾರೆ.

‘ಉಲ್ಲೇಖ (ರೆಫರೆಸ್ಸ್‌) ಸಂಖ್ಯೆಯಿದ್ದರೆ ಸಾಲದು ’

ಇ-ಪಾಸ್‌ ಪಡೆಯಲು ಅರ್ಜಿ ಸಲ್ಲಿಸಿದ ಮಂದಿಗೆ ಉಲ್ಲೇಖ ಸಂಖ್ಯೆ ದೊರೆತಿತ್ತು. ಅದನ್ನು ಹಿಡಿದುಕೊಂಡು ಹಲವು ಮಂದಿ ಮಂಗಳೂರಿಗೆ ಬಿಡುವಂತೆ ತಲಪಾಡಿ ಗೇಟಿಗೆ ಬಂದಿದ್ದಾರೆ. ಆದರೆ ಜಿಲ್ಲಾಡಳಿತದ ಆದೇಶದಂತೆ ಇ-ಪಾಸ್‌ ಇದ್ದಲ್ಲಿ ಮಾತ್ರ ಮಂಗಳೂರು ಬಿಡುವಂತೆ ಸೂಚಿಸಲಾಗಿದೆ. ಸಂಜೆಯವರೆಗೂ ಯಾರೂ ಕೂಡ ಪಾಸ್‌ ಹಿಡಿದುಕೊಂಡು ಬಂದವರಿಲ್ಲ. ಉಲ್ಲೇಖ ಸಂಖ್ಯೆ ಹಿಡಿದುಕೊಂಡು ಬಂದವರನ್ನು ಬಿಡಲಿಲ್ಲ ಎಂದು ತಲಪಾಡಿ ಕೋವಿಡ್‌-19 ಚೆಕ್‌ ಪಾಯಿಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉರ್ವ ಠಾಣಾ ಎಸ್‌.ಐ. ಶ್ರೀಕಲಾ ತಿಳಿಸಿದರು.