ನಂಜನಗೂಡು(ಮೇ 16): ಕೊರೋನಾ ಸೋಂಕಿನ ಹಾಟ್‌ಸ್ಪಾಟ್‌ ಎಂದೇ ಪ್ರಸಿದ್ದಿ ಪಡೆದಿದ್ದ ನಂಜನಗೂಡು ಈಗ ಕೊರೋನಾ ಮುಕ್ತಗೊಂಡ ಹಿನ್ನೆಲೆ ಹಾಗೂ ಕಳೆದ 14 ದಿನಗಳಿಂದ ತಾಲೂಕಿನಲ್ಲಿ ಯಾವುದೇ ಸೋಂಕಿನ ಪ್ರಕರಣ ಕಂಡು ಬಾರದೆ ಇರುವುದರಿಂದ ಕ್ಲಸ್ಟರ್‌ ಕಂಟೈನ್‌ಮೆಂಟ್‌ ಘಟಕದ ಆದೇಶವನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಹಿಂಪಡೆದು ಶುಕ್ರವಾರದಿಂದ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗಿದೆ ಎಂದು ತಹಸೀಲ್ದಾರ್‌ ಕೆ.ಎಂ. ಮಹೇಶ್‌ಕುಮಾರ್‌ ಹೇಳಿದರು.

ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ನಿಯಂತ್ರಿತ ವಲಯಗಳನ್ನು ಹೊರತುಪಡಿಸಿ ಕಾರು ಮುಂತಾದ ವಾಹನಗಳಲ್ಲಿ ಚಾಲಕ ಸೇರಿದಂತೆ ಇಬ್ಬರು ಹಾಗೂ ದ್ವಿಚಕ್ರ ವಾಹನದಲ್ಲಿ ಒಬ್ಬರು ಓಡಾಡಲು ಅನುಮತಿ ನೀಡಲಾಗಿದೆ. ಪಟ್ಟಣ ಪ್ರದೇಶದ ಶಾಪಿಂಗ್‌ ಕಾಂಪ್ಲೆಕ್ಸ್‌, ಅಗತ್ಯ ವಸ್ತುಗಳ ಸಾಮಾಗ್ರಿ ಅಂಗಡಿಗಳು. ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಹಾರ್ಡ್‌ವೇರ್‌, ಸಿಮೆಂಟ್‌, ಕಬ್ಬಿಣ, ಅಂಗಡಿಗಳನ್ನು ಬೆಳಗ್ಗೆ 7 ರಿಂದ 5 ರವರೆಗೆ ತೆರೆದು ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ.

ಮಂಡ್ಯದಲ್ಲಿ ಒಂದೇ ದಿನ 13 ಮಂದಿಗೆ ಕೊರೋನಾ ಸೋಂಕು

ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ನಿಯಂತ್ರಿತ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಕಾರ್ಮಿಕರನ್ನು ಬಳಸಿಕೊಂಡು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಅನುಮತಿ ನೀಡಲಾಗಿದೆ.

ಖಾಸಗಿ ಕಚೇರಿಗಳು ಶೇ. 33ರಷ್ಟುಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಬಹುದಾಗಿದೆ. ಬಟ್ಟೆ, ಚಿನ್ನ, ಬೆಳ್ಳಿ, ಪಾದರಕ್ಷೆ, ಹೇರ್‌ ಕಟಿಂಗ್‌ ಸೆಲೂನ್‌, ಆಟೋ, ಟ್ಯಾಕ್ಸಿ, ಬಸ್‌ ಸಂಚಾರ ಹಾಗೂ ಧಾರ್ಮಿಕ ಕ್ಷೇತ್ರಗಳ ಸಂದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಸಮುದಾಯ ಭವನ ಕೀ ಕೇಳಿದ ಪೊಲೀಸಪ್ಪನ ಕಿವಿ ಕಚ್ಚಿದ ಶಿಕ್ಷಕ!

ಮೈಸೂರು ಹಾಗೂ ನಂಜನಗೂಡಿನಲ್ಲಿ ಸೋಂಕು ದೃಢಪಟ್ಟಿದ್ದ ಎಲ್ಲರೂ ಸಹ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದು, ಯಾವುದೇ ಸಕ್ರಿಯ ಪ್ರಕರಣಗಳು ಉಳಿದಿಲ್ಲ. ವಾಹನ ಚಾಲಕರು ಸಾರ್ವಜನಿಕರು ಇದನ್ನೇ ಲಾಭವೆಂದು ತಿಳಿದು ಅನಗತ್ಯ ಸಂಚಾರ ಮಾಡಬಾರದು, ಅಗತ್ಯವಿದ್ದಲ್ಲಿ ಮಾತ್ರ ಹೊರಬರಬೇಕು, ಹೊರಗಡೆ ಬರುವಾಗ ಮಾಸ್ಕ್‌ ಧರಿಸುವುದು ಕಡ್ಡಾಯ ಜೊತೆಗೆ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಕೊರೋನಾದಿಂದ ದೂರವಿರಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.