ವಾಹನ ನೋಂದಣಿಗೆ ಪಾರ್ಕಿಂಗ್ ದೃಢೀಕರಣ ಪತ್ರ ಬೇಕಾ?
ಹೊಸ ವಾಹನ ನೋಂದಣಿಗೂ ಮುನ್ನ ಆ ವಾಹನದ ನಿಲುಗಡೆಗೆ ಸೂಕ್ತ ಸ್ಥಳಾವಕಾಶವಿದೆ ಎಂಬ ದೃಢೀಕರಣ ಪತ್ರ ಕಡ್ಡಾಯವಾಗಿ ಪಡೆಯಬೇಕು ಎಂಬ ಆದೇಶ 2020ರಿಂದ ಜಾರಿಗೆ ಬರಲಿದೆ ಎಂಬುದು ಕೇವಲ ವದಂತಿ ಎನ್ನಲಾಗಿದೆ.
ಬೆಂಗಳೂರು [ಡಿ.13]: ಬೆಂಗಳೂರಿನಲ್ಲಿ ಹೊಸ ವಾಹನ ನೋಂದಣಿಗೂ ಮುನ್ನ ಆ ವಾಹನದ ನಿಲುಗಡೆಗೆ ಸೂಕ್ತ ಸ್ಥಳಾವಕಾಶವಿದೆ ಎಂಬ ದೃಢೀಕರಣ ಪತ್ರ ಕಡ್ಡಾಯವಾಗಿ ಪಡೆಯಬೇಕು ಎಂಬ ಆದೇಶ 2020ರಿಂದ ಜಾರಿಗೆ ಬರಲಿದೆ ಎಂಬುದು ಕೇವಲ ವದಂತಿ. ಇಂತಹ ಯಾವುದೇ ಆದೇಶವನ್ನು ಸಾರಿಗೆ ಇಲಾಖೆ ಹೊರಡಿಸಿಲ್ಲ ಎಂದು ಸಾರಿಗೆ ಆಯುಕ್ತ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಆದರೆ, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಸಿದ್ಧಪಡಿಸಿದ ಸಮಗ್ರ ಸಂಚಾರ ಯೋಜನೆ (ಸಿಎಂಪಿ)ಯ ಕರಡಿನಲ್ಲಿ ಇಂತಹ ಶಿಫಾರಸು ಇದೆ. ಆದರೆ, ಈ ಶಿಫಾರಸಿನ ಬಗ್ಗೆ ಇಲಾಖೆ ಯಾವ ಕ್ರಮವನ್ನು ಇನ್ನೂ ಕೈಗೊಂಡಿಲ್ಲ. 2020ರಿಂದ ಈ ನೀತಿ ಜಾರಿಗೆ ಬರುತ್ತದೆ ಎಂಬುದು ಸರಿಯಲ್ಲ ಎಂದು ಅವರು ವಿವರಿಸಿದರು.
ಸಾರಿಗೆ ಇಲಾಖೆಯು ವಾಹನ ನಿಲುಗಡೆಗೆ ಸ್ಥಳಾವಕಾಶವಿದೆ ಎಂಬ ದೃಢೀಕರಣ ಪತ್ರವಿದ್ದರೆ ಮಾತ್ರ ಹೊಸ ವಾಹನಗಳ ನೋಂದಣಿಗೆ ಅವಕಾಶ ನೀಡುವ ಆದೇಶವನ್ನು ಸಾರಿಗೆ ಇಲಾಖೆ ಹೊರಡಿಸಿದೆ ಎಂದು ದೃಶ್ಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿತ್ತು. ಆದರೆ, ಇದು ನಿಜವಲ್ಲ ಎಂದು ಸಾರಿಗೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಸಮಗ್ರ ಸಂಚಾರ ಯೋಜನೆ ಶಿಫಾರಸು ಏನು?
ವಸತಿ ಪ್ರದೇಶಗಳ ರಸ್ತೆಯುದ್ದಕ್ಕೂ ಕಾರು ಮತ್ತಿತರ ಪ್ರಕಾರದ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದು, ರಸ್ತೆಯಲ್ಲಿ ಈ ರೀತಿ ವಾಹನ ನಿಲ್ಲಿಸುವುದರಿಂದ ಇತರೆ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಲಿದೆ. ವಾಹನಗಳ ಸರಾಸರಿ ವೇಗ ಕಡಿಮೆಯಾಗಿ ಸಂಚಾರ ದಟ್ಟಣೆಗೆ ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೊಸ ವಾಹನಗಳ ನೋಂದಣಿಗೂ ಮುನ್ನ ಆ ವಾಹನ ನಿಲುಗಡೆಗೆ ಜಾಗದ ಲಭ್ಯತೆ ಬಗ್ಗೆ ಮಾಲಿಕರು ದೃಢೀಕರಿಸಬೇಕು. ಪ್ರಸ್ತುತ ಇರುವ ವಾಹನಗಳಿಗೆ ಈ ದೃಢೀಕರಣಕ್ಕೆ ಎರಡು ವರ್ಷ ಕಾಲಾವಕಾಶ ನೀಡಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜತೆಗೆ ಕಲ್ಯಾಣ ಮಂಟಪಗಳು, ದೊಡ್ಡ ರೆಸ್ಟೋರೆಂಟ್‌ಗಳು, ಚಿತ್ರಮಂದಿರಗಳು, ಶಾಪಿಂಗ್ ಕೇಂದ್ರಗಳು ಮತ್ತಿತರ ಕಡೆಗಳಲ್ಲಿ ‘ಪೀಕ್ ಲೋಡ್ ಪಾರ್ಕಿಂಗ್’ (ದಟ್ಟಣೆ ನಿಲುಗಡೆ ವ್ಯವಸ್ಥೆ) ಸೌಲಭ್ಯ ಹೊಂದಿರುವ ಬಗ್ಗೆಯೂ ದೃಢೀಕರಿಸಿಕೊಳ್ಳಬೇಕು ಎಂದೂ ಕರಡಿನಲ್ಲಿ ಶಿಫಾರಸು ಮಾಡಲಾಗಿದೆ.