ಕನಕಗಿರಿ(ಜೂ.14): ಪಟ್ಟಣದ ಶಿವಯೋಗಿ ಚನ್ನಮಲ್ಲ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಗುರು ರುದ್ರಸ್ವಾಮಿ ಪ್ರೌಢ ಶಾಲೆ ಆವರಣದಲ್ಲಿ ತರಗತಿಗಳನ್ನು ಆರಂಭಿಸುವ ಕುರಿತು ಶುಕ್ರ​ವಾರ ಪಾಲಕರ ಸಭೆ ಕರೆ​ಯ​ಲಾ​ಗಿ​ತ್ತು.

ಕೊರೋನಾ ಸಾಂಕ್ರಾಮಿಕ ರೋಗವಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಪಾಲಕರ ಸಭೆಗಳನ್ನು ಆಯೋಜಿಸುವ ಮೂಲಕ ಅಭಿಪ್ರಾಯ ಪಡೆಯಲು ಮುಂದಾಗಿದೆ. ಶುಕ್ರವಾರ ನಡೆದ ಸಭೆಯಲ್ಲಿ ಹಲವು ಪಾಲಕರು ಮಾತನಾಡಿ, ಆ. 15ರ ವರೆಗೆ ಶಾಲೆ ಆರಂಭಿಸುವುದು ಬೇಡ. ಅಲ್ಲಿವರೆಗೆ ಕಾದು ನೋಡೋಣ. ಪ್ರತಿಯೊಬ್ಬ ಪಾಲಕರಿಗೆ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣ ಮುಖ್ಯ. ಅದಕ್ಕಾಗಿ ನಮ್ಮ ಮಕ್ಕಳಿಗೆ ಮನೆಯಲ್ಲಿ ಕಲಿಸುವುದು ಸೂಕ್ತ. ಆ. 15ರ ನಂತರ ಸರ್ಕಾರ ಹಾಗೂ ಇಲಾಖೆಯ ಮುಂದಿನ ಆದೇಶದ ವರೆಗೂ ಕಾಯುವುದು ಸೂಕ್ತ ಎಂದು ಸಭೆಯಲ್ಲಿದ್ದ ಹಲವು ಪಾಲಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾ​ರದಿಂದ ಜನಪರ ಕಾ​ರ್ಯ

ಇನ್ನೂ ಕೆಲ ಪಾಲಕರು ಕೊರೋನಾ ಇದೆ ಎಂದು ಭಯ ಪಟ್ಟು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಇರುವುದು ತಪ್ಪು. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತರಗತಿಗಳನ್ನು ಆರಂಭಿಸಬೇಕು. ಅದಕ್ಕಾಗಿ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ಹಿರಿಯ ಮುಖಂಡರಾದ ಮಹಾಬಳೇಶ್ವರ ಸಜ್ಜನ್‌ ಹಾಗೂ ಎಸ್‌.ಐ. ಪಾಟೀಲ್‌ ಮಾತನಾಡಿ, ಪ್ರಾಥಮಿಕ ಹಂತದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ತರಗತಿಗಳು ನಡೆಸುವುದು ತಪ್ಪು. ಮೊದಲು ನಮ್ಮ ಮಕ್ಕಳ ಆರೋಗ್ಯ ಮುಖ್ಯ. ಸದ್ಯದ ಮಟ್ಟಿಗೆ ನಮ್ಮ ಮಕ್ಕಳಿಗೆ ಮನೆಯಲ್ಲಿಯೇ ಶಿಕ್ಷಣ ಕೊಡುವ ಕಡೆ ಗಮನಹರಿಸೋಣ. ಮುಂದಿನ ಸರ್ಕಾರದ ಆದೇಶದ ವರೆಗೆ ಕಾಯುವುದು ಸೂಕ್ತ. ಪಾಲಕರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಶಾಲೆಯ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಗ್ರಾಮೀಣ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳಾದ ರಾಮಚಂದ್ರಪ್ಪ ಬೊಂದಾಡೆ, ವಾಗೀಶ ಹಿರೇಮಠ, ಪಾಲಕರಾದ ಹನುಮಂತ ಗುಡದೂರು, ವೀರಣ್ಣ, ವೀರಭದ್ರಯ್ಯ ಸಾಲಿಮಠ, ಶಿಕ್ಷಕರಾದ ಗಂಗಾಧರ ಗದ್ದಿ, ಶಿವರೆಡ್ಡಿ ಮಣ್ಣೂರು, ಮೌನೇಶ ಬಡಿಗೇರ, ರಮೇಶ ಎಲಿಗಾರ, ಬಸವರಾಜ ಬಳಿಗಾರ ಸೇರಿ ಇತರರು ಇದ್ದರು.