ಅಖಿಲ ಕೊಡವ ಸಮಾಜ ಅಧ್ಯಕ್ಷರಾಗಿ ಪರದಂಡ ಸುಬ್ರಮಣಿ ಕಾವೇರಪ್ಪ ಅವಿರೋಧ ಆಯ್ಕೆ
- ಅಖಿಲ ಕೊಡವ ಸಮಾಜ ಅಧ್ಯಕ್ಷರಾಗಿ ಪರದಂಡ ಸುಬ್ರಮಣಿ ಕಾವೇರಪ್ಪ ಅವಿರೋಧ ಆಯ್ಕೆ
- 49 ವರ್ಷ ಸುದೀರ್ಘ ಕಾಲ ಅಧ್ಯಕ್ಷರಾಗಿದ್ದ ಮಾತಂಡ ಮೊಣ್ಣಪ್ಪ ಸ್ವಯಂ ನಿವೃತ್ತಿ
- ಪಾಡಿ ಇಗ್ಗುತ್ತಪ್ಪ ದೇವಸ್ಥಾನ ತಕ್ಕ ಮುಖ್ಯಸ್ಥರಿಗೆ ಒಲಿದ ಅದೃಷ್ಟ
ಮಡಿಕೇರಿ (ನ.27) : ಕೊಡವ ಜನಾಂಗದ ಹಿರಿಯಣ್ಣನಂತಿರುವ ಅಖಿಲ ಕೊಡವ ಸಮಾಜದಲ್ಲಿ ಸುದೀರ್ಘ 49 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಯಾದ ಮಾತಂಡ ಮೊಣ್ಣಪ್ಪನವರ ಸ್ಥಾನಕ್ಕೆ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದ ತಕ್ಕ ಮುಖ್ಯಸ್ಥರು ಹಾಗೂ ದೇಶ ತಕ್ಕ ಕುಟುಂಬದವರಾದ ನಾಲಡಿ ಗ್ರಾಮದ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶನಿವಾರ ವಿರಾಜಪೇಟೆಯಲ್ಲಿರುವ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಪರದಂಡ ಸುಬ್ರಮಣಿ ಕಾವೇರಪ್ಪನವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಮುಂದಿನ ವರ್ಷ ಪ್ರತ್ಯೇಕ ಕೊಡವ ಲ್ಯಾಂಡ್ ಘೋಷಣೆ: ಡಾ. ಸುಬ್ರಮಣಿಯನ್ ಸ್ವಾಮಿ
ಸ್ವಾತಂತ್ರ್ಯ ಪೂರ್ವ 1942ರಲ್ಲಿ ತಕ್ಕಾಮೆ ಅಡಿಯಲ್ಲಿ ಸ್ಥಾಪನೆಯಾದ ಅಖಿಲ ಕೊಡವ ಸಮಾಜದ ಬೈಲಾ ಪ್ರಕಾರ ದೇಶ ತಕ್ಕ ಕುಟುಂಬವರನ್ನೇ ಇಲ್ಲಿ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕು ಎಂಬ ನಿಯಮದಡಿಯಲ್ಲಿ ಕಳೆದ 15 ದಿವಸದ ಹಿಂದೆ ನಡೆದ ಮಹಾಸಭೆಯಲ್ಲಿ ಇಬ್ಬರು ದೇಶ ತಕ್ಕ ಕುಟುಂಬದವರು ಉಪಸ್ಥಿತರಿದ್ದರು. ಸಭೆಯಲ್ಲಿ ಪರದಂಡ ಸುಬ್ರಮಣಿ ಕಾವೇರಪ್ಪ ಹಾಗೂ ಬೊಳ್ಳೇರ ವಿನಯ್ ಅಪ್ಪಯ್ಯ ಅಧ್ಯಕ್ಷ ಸ್ಥಾನಕ್ಕೆ ಅರ್ಹರು ಎನ್ನಲಾಗಿದೆ. ಮಹಾಸಭೆಯಲ್ಲಿ ಇವರಿಬ್ಬರನ್ನು ಕಾರ್ಯಕಾರಿ ಮಂಡಳಿಗೆ ಆಯ್ಕೆ ಮಾಡಿ ಉಳಿದ ಕೆಲವರನ್ನು ಸಮಿತಿಗೆ ತಗೆದುಕೊಳ್ಳಲಾಯಿತು.
ಶನಿವಾರ ಮಾತಂಡ ಮೊಣ್ಣಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರ ಹಸ್ತಾಂತರದ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಾಗ ಇಬ್ಬರು ದೇಶ ತಕ್ಕ ಕುಟುಂಬದವರು ಉಪಸ್ಥಿತರಿದ್ದು, ದೇಶ ತಕ್ಕ ಕುಟುಂಬದ ಬೊಳ್ಳೇರ ವಿನಯ್ ಅಪಯ್ಯ ಎದ್ದು ನಿಂತು ಪರದಂಡ ಸುಬ್ರಮಣಿ ಕಾವೇರಪ್ಪ ಹೆಸರನ್ನು ಸೂಚಿಸಿದರೆ ಮಂಡೇಪಂಡ ಸುಗುಣ ಮುತ್ತಣ್ಣ ಅನುಮೋದಿಸುವ ಮೂಲಕ ಅಖಿಲ ಕೊಡವ ಸಮಾಜದ ನೂತನ ಅಧ್ಯಕ್ಷರಾಗಿ ಪರದಂಡ ಸುಬ್ರಮಣಿ ಕಾವೇರಪ್ಪನವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮೂಲತಃ ನಾಲ್ಕು ನಾಡಿನ ನಾಲಡಿ ಗ್ರಾಮದವರಾದ ದಿವಂಗತ ಪರದಂಡ ಬಾಬು ಕಾವೇರಪ್ಪ ಹಾಗೂ ಪದ್ಮಿನಿ ಕಾವೇರಪ್ಪ ದಂಪತಿ ಪುತ್ರರಾಗಿರುವ ಸುಬ್ರಮಣಿ ಅವರು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಕಾಂ ಪದವೀಧರರು.
ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಮಾಜಿ ಅಧ್ಯಕ್ಷ ಮಾತಂಡ ಮೊಣ್ಣಪ್ಪ 1942ರಲ್ಲಿ ಸ್ಥಾಪನೆಯಾದ ಅಖಿಲ ಕೊಡವ ಸಮಾಜದಲ್ಲಿ ನಾಲ್ಕು ತಲೆಮಾರುಗಳೊಂದಿಗೆ ಒಡನಾಡಿದ ಅನುಭವವಿದೆ. ಯುವ ಸಮುದಾಯದಿಂದ ಜನಾಂಗದ ಏಳಿಗೆ ಸಾದ್ಯ. ಈ ನಿಟ್ಟಿನಲ್ಲಿ ಯುವ ಜನಾಂಗಕ್ಕೆ ಅಧಿಕಾರವನ್ನು ಹಸ್ತಾಂತರಿಸಲಾಗಿದೆ, ಈ ಸ್ಥಾನದ ಮಹತ್ವ ಅರಿತು ಹೆಚ್ಚಿನ ಜವಬ್ದಾರಿಯಿಂದ ಸಮಾಜವನ್ನು ಮುನ್ನಡೆಸಬೇಕಿದೆ, ಈ ಸ್ಥಾನಕ್ಕೆ ಅದರದೇ ಆದ ಕಟ್ಟುಪಾಡುಗಳಿವೆ ಹಾಗೂ ಜವಾಬ್ದಾರಿಗಳಿವೆ ನಮ್ಮ ಮುಂದಿನ ಪೀಳಿಗೆಗೂ ಈ ಸಮಾಜವನ್ನು ಉಳಿಸಿ ಬೆಳಸಬೇಕಿದೆ ಎಂದರು. ಈ ಸಮಾಜ ನನಗೇನು ನೀಡಿದೆ ಎನ್ನುವುದಕ್ಕಿಂತ ನಾವು ಈ ಸಮಾಜಕ್ಕೆ ನೀಡಿದ್ದು ಏನು ಎಂದು ಚಿಂತಿಸಬೇಕಿದೆ, ಆದರೆ ನನಗೆ ಈ ಸಮಾಜ ಅಂದರೆ ನನ್ನ ಜನಾಂಗ ಎಲ್ಲವನ್ನೂ ನೀಡಿದೆ ಸ್ಮರಿಸಿದರು.
ಅಧಿಕಾರ ವಹಿಸಿಕೊಂಡು ಮಾತನಾಡಿದ ಹಾಲಿ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಹಿರಿಯರು ಹಾಕಿಕೊಟ್ಟಮಾರ್ಗದರ್ಶನದಲ್ಲಿ ಹೆಜ್ಜೆ ಹಾಕುತ್ತೇನೆ. ಇಗ್ಗುತಪ್ಪನ ಸೇವೆ ಮಾಡುತ್ತಿರುವ ನಮ್ಮ ಕುಟುಂಬಕ್ಕೆ ಇದು ಬಯಸದೆ ಬಂದಿರುವ ಅದೃಷ್ಟಎಂದು ತಿಳಿದಿದ್ದೇನೆ. ಸಮಾಜವನ್ನು ರಾಜಕೀಯ ರಹಿತವಾಗಿ ಹಾಗೂ ಕಳಂಕರಹಿತವಾಗಿ ಮುನ್ನಡೆಸುವುದಾಗಿ ಭರವಸೆ ನೀಡಿದರು.
ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ ಈ ಹಿಂದಿನ ಅಧ್ಯಕ್ಷರಾಗಿದ್ದ ಮಾತಂಡ ಮೊಣ್ಣಪ್ಪನವರ ಮಾರ್ಗದರ್ಶನವನ್ನು ನೆನೆಸಿಕೊಂಡ ಅವರು ಕಳೆದ ಎರಡು ವರ್ಷಗಳ ಹಿಂದೆ ಯೂತ್ ವಿಂಗ್ ಸ್ಥಾಪನೆಯಾಗಲು ಮಾತಂಡ ಮೊಣ್ಣಪ್ಪನವರೇ ಮೂಲ ಕಾರಣಕರ್ತರಾಗಿದ್ದಾರೆ. ನೂತನ ಅಧ್ಯಕ್ಷರಿಗೆ ಶುಭಕೋರಿ ಜೊತೆಯಾಗಿಯೇ ಮುನ್ನಡೆಯುವ ಭರವಸೆ ನೀಡಿದರು.
ಇಂದು, ನಾಳೆ ಕೊಡವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ
ಈ ಸಂದರ್ಭದಲ್ಲಿ ಪರದಂಡ ಕುಟುಂಬದಿಂದ 49 ವರ್ಷ ಸೇವೆ ಸಲ್ಲಿಸಿದ ಮಾತಂಡ ಮೊಣ್ಣಪ್ಪನವರಿಗೆ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದ ಒಳಗಿರುವ ಬಿಂಬದ ಭಾವಚಿತ್ರವುಳ್ಳ ದೊಡ್ಡದಾದ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಲಾಯಿತು. ಈ ಸಂದರ್ಭ ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ, ಪ್ರಧಾನ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಸಹ ಕಾರ್ಯದರ್ಶಿಗಳಾದ ನಂದೇಟಿರ ರಾಜ ಮಾದಪ್ಪ ಹಾಗೂ ಅಪ್ಪುಮಣಿಯಂಡ ತುಳಸಿ ಕಾಳಪ್ಪ, ಅಜ್ಜಿಕುಟ್ಟಿರ ಪ್ರಥ್ವಿ ಸುಬ್ಬಯ್ಯ, ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಪರದಂಡ ವಿಠಲ, ಮೂವೇರ ರೇಖಾ ಪ್ರಕಾಶ್, ಕೊಣಿಯಂಡ ಬೋಜಮ್ಮ ಉತ್ತಪ್ಪ, ಅಪ್ಪಚ್ಚೀರ ಕಮಲ ನೀಲಮ್ಮ, ಮಾಚಿಮಾಡ ರವೀಂದ್ರ, ಚೀರಂಡ ಕಂದಾ ಸುಬ್ಬಯ್ಯ, ಚೊಟ್ಟೆಯಾಂಡಮಾಡ ವಿಶ್ವನಾಥ್, ಚಟ್ಟಂಗಡ ರವಿ ಸುಬ್ಬಯ್ಯ, ಅಮ್ಮಣಿಚಂಡ ಪ್ರವೀಣ್ ಚೆಂಗಪ್ಪ, ಮಾಳೆಟೀರ ರತ್ನ ಮಾದಯ್ಯ, ಪಂದಿಮಾಡ ರಮೇಶ್ ಅಚ್ಚಪ್ಪ, ಕುಂಬೇರ ಮನು ಕುಮಾರ್, ಚೇಮಿರ ಅರ್ಜುನ್, ತೇಲಪಂಡ ಸೋಮಯ್ಯ, ಚೇಂದಂಡ ವಸಂತ್ ಸೇರಿದಂತೆ ಹಳೆಯ ಹಾಗೂ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.