Asianet Suvarna News Asianet Suvarna News

ಮುಂದಿನ ವರ್ಷ ಪ್ರತ್ಯೇಕ ಕೊಡವ ಲ್ಯಾಂಡ್‌ ಘೋಷಣೆ: ಡಾ. ಸುಬ್ರಮಣಿಯನ್‌ ಸ್ವಾಮಿ

  • ಮುಂದಿನ ವರ್ಷ ಪ್ರತ್ಯೇಕ ಕೊಡವ ಲ್ಯಾಂಡ್‌ ಘೋಷಣೆ: ಡಾ. ಸುಬ್ರಮಣಿಯನ್‌ ಸ್ವಾಮಿ ವಿಶ್ವಾಸ
  • ಸಿಎನ್‌ಸಿ ಕೊಡವ ನ್ಯಾಷನಲ್‌ ಡೇ ಕಾರ್ಯಕ್ರಮದಲ್ಲಿ ಭರವಸೆ
  • ಸುಪ್ರೀಂ ಕೋರ್ಚ್‌ನಲ್ಲಿ ಕೊಡವರ ಪರ ವಾದ ಮಂಡನೆ
Announcement of separate Kodava land next year says dr.subramaniyam swamy rav
Author
First Published Nov 27, 2022, 8:55 AM IST

ಮಡಿಕೇರಿ (ನ.27) : ಕೊಡವ ಸ್ವಾಯತ್ತ ನಾಡಿನ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸುಪ್ರಿಂಕೋರ್ಚ್‌ನಲ್ಲಿ ವಾದ ಮಂಡಿಸಿ ಮುಂದಿನ ಜೂನ್‌ ಅಥವಾ ಜುಲೈ ಅಂತ್ಯದೊಳಗೆ ಕೊಡವ ಲ್ಯಾಂಡ್‌ ಬೇಡಿಕೆಗೆ ನ್ಯಾಯಾಲಯದಿಂದ ಸ್ಪಂದನೆ ದೊರಕುವಂತೆ ಮಾಡುವುದಾಗಿ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ಸುಬ್ರಮಣಿಯನ್‌ ಸ್ವಾಮಿ ಭರವಸೆ ನೀಡಿದ್ದಾರೆ.

ಮಡಿಕೇರಿ ಸಮೀಪದ ಕ್ಯಾಪಿಟಲ್‌ ವಿಲೇಜ್‌ನಲ್ಲಿ ಶನಿವಾರ ಕೊಡವ ನ್ಯಾಷನಲ್‌ ಕೌನ್ಸಿಲ್‌ ವತಿಯಿಂದ ನಡೆದ ಕೊಡವ ನ್ಯಾಷನಲ್‌ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡವರಿಗೆ ಸ್ವಾಯತ್ತ ನಾಡು ಕೇಳಲು ಸಂವಿಧಾನಾತ್ಮಕವಾಗಿ ಎಲ್ಲ ರೀತಿಯಲ್ಲೂ ಹಕ್ಕಿದೆ. ಕೊಡವ ಸ್ವಾಯತ್ತ ನಾಡಿನ ಬೇಡಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಚ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಇದಕ್ಕಾಗಿ ವಕೀಲರನ್ನು ಕೂಡ ನಿಯೋಜಿಸಿರುವೆ ಎಂದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈ ಹಿಂದೆ ತಾನು ಕೊಡವ ಸ್ವಾಯತ್ತ ನಾಡಿನ ಬೇಡಿಕೆಯನ್ನು ಈಡೇರಿಸುವುದಾಗಿ ಹೇಳಿದ್ದರು. ಆದರೆ ಅವರು ಏನನ್ನೂ ಮಾಡಲಿಲ್ಲ. ಈಗಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಗೆ ಸಿಎನ್‌ಸಿ ಬೇಡಿಕೆ ಬಗ್ಗೆ ತಿಳುವಳಿಕೆ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ಸುಪ್ರೀಂಕೋರ್ಚ್‌ನಲ್ಲಿ ತಾನೇ ಕೊಡವರ ಬೇಡಿಕೆ ಪರ ವಾದ ಮಂಡಿಸುವೆ ಎಂದೂ ಸುಬ್ರಮಣಿಯನ್‌ಸ್ವಾಮಿ ತಿಳಿಸಿದರು.

ಕೊಡವ ಜನಾಂಗದ ಅವಹೇಳನ: ದುಷ್ಕರ್ಮಿಯ ಬಂಧಿಸಿದ ಪೊಲೀಸ್‌ ತಂಡಕ್ಕೆ ಬಹುಮಾನ ಘೋಷಣೆ

ಪತ್ರ್ಯೇಕ ರಾಜ್ಯ ಬೇಡಿಕೆ ಅಪ್ರಸ್ತುತ: ಕೊಡವ ಲ್ಯಾಂಡ್‌ ಬೇಡಿಕೆ ನ್ಯಾಯುತವಾಗಿದೆ. ಸಿಎನ್‌ಸಿಯ ಬೇಡಿಕೆಗಳು ಸುಪ್ರೀಂ ಕೋರ್ಚ್‌ನ ಮೂಲಕ ಈಡೇರುವ ವಿಶ್ವಾಸವಿದೆ ಎಂದ ಅವರು, ಪ್ರತ್ಯೇಕ ರಾಜ್ಯ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಈ ಬೇಡಿಕೆ ಈಗ ಅಪ್ರಸ್ತುತ ಎಂದು ಅಭಿಪ್ರಾಯಪಟ್ಟರು.

ಗೋವಾ, ತೆಲಂಗಾಣ, ಉತ್ತರಾಖಂಡ್‌ ಪ್ರದೇಶಗಳು ನಿರಂತರ ಹೋರಾಟದ ಫಲವಾಗಿ ಪ್ರತ್ಯೇಕ ರಾಜ್ಯಗಳಾಗಿ ಮಾರ್ಪಟ್ಟಿವೆ. ಕೊಡವರು ಎಂದೆಂದಿಗೂ ಈ ದೇಶದ ಅಂಗವಾಗಿಯೇ ಉಳಿಯಲಿದ್ದಾರೆ. ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಪ್ರತ್ಯೇಕ ಹೋಂ ಲ್ಯಾಂಡ್‌ ಕೇಳುತ್ತಿದ್ದಾರೆ. ಇದಕ್ಕೆ ನನ್ನ ಸಂಪೂರ್ಣ ಸಹಕಾರ ಮತ್ತು ಬೆಂಬಲವಿದೆ. ಮುಂದಿನ ವರ್ಷ ಪ್ರತ್ಯೇಕ ಕೊಡವ ಹೋಂ ಲ್ಯಾಂಡ್‌ ದಿನವನ್ನು ಸಂಭ್ರಮದಿಂದ ಆಚರಿಸೋಣ. ಇಡೀ ಭಾರತೀಯರು ಕೊಡವರ ಪರವಾಗಿ ಇದ್ದಾರೆ ಎಂದು ಸುಬ್ರಮಣಿಯನ್‌ ಸ್ವಾಮಿ ತಿಳಿಸಿದರು.

ರಾಜಕೀಯ ಭಾಷಣ: ಸುಬ್ರಮಣಿಯನ್‌ ಸ್ವಾಮಿ ಅವರು ತಮ್ಮ ಮಾತಿನ ಮಧ್ಯೆ ರಾಜಕೀಯ ವಿಷಯವನ್ನು ಪ್ರಸ್ತಾಪಿಸಿ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸದ್ಯದಲ್ಲಿಯೇ ಜೈಲು ಸೇರಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ವಿರುದ್ಧ ಹೋರಾಡುವ ಎದೆಗಾರಿಕೆ ಹೊಂದಿಲ್ಲ ಎಂದು ಟೀಕಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್‌.ಯು. ನಾಚಪ್ಪ, ಸಿಎನ್‌ಸಿ ಸಂಘಟನೆ ಅರೆಬರೆ ಜ್ಞಾನದೊಂದಿಗೆ ಮಾತನಾಡುತ್ತಿಲ್ಲ. ಸಂವಿಧಾನಕ್ಕೆ ಗೌರವ ನೀಡಿ ಸಂವಿಧಾನದ ಆಶಯದಂತೆ ನಡೆದುಕೊಳ್ಳುತ್ತಿದೆ. ಸಂವಿಧಾನದ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡಾಗ ಮಾತ್ರ ಕೊಡವರ ನ್ಯಾಯುತ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.

ಕೊಡಗು ಕರ್ನಾಟಕ ರಾಜ್ಯದೊಂದಿಗೆ ವಿಲೀನವಾಗುವ ಮೊದಲು ರಾಮರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಗಸ್ತ್ಯ ಮುನಿಗಳು ತಪಸ್ಸು ಮಾಡಿದ ಮತ್ತು ಕಾವೇರಿ ನದಿ ಉದ್ಭವಿಸಿದ ಪವಿತ್ರ ಭೂಮಿ ಇಂದು ಭೂ ಮಾಫಿಯಾಗಳ ತಾಣವಾಗಿದೆ. 1956ರಲ್ಲಿ ಜನರ ಒಪ್ಪಿಗೆಗೆ ವಿರುದ್ಧವಾಗಿ ವಿವಿಧ ಪ್ರದೇಶಗಳು ಕರ್ನಾಟಕದಲ್ಲಿ ವಿಲೀನವಾಗಿದ್ದು, ಇದೊಂದು ಅಪ್ರಾಕೃತಿಕ ರಾಜ್ಯವಾಗಿದೆ ಎಂದು ನಾಚಪ್ಪ ಟೀಕಿಸಿದರು.

ಪ್ರಬಲ ಸಮುದಾಯಗಳು ಸಣ್ಣ ಸಣ್ಣ ಸಮುದಾಯವನ್ನು ತುಳಿದು ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಕೊಡವರ ಭೂಮಿ, ನೀರು ಮತ್ತು ಕೋವಿ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಪವಿತ್ರ ಭೂಮಿ ಕೊಡಗಿನಲ್ಲಿ ಭೂ ಮಾಫಿಯಾ ಮತ್ತು ಸಮಾಜಘಾತುಕ ಶಕ್ತಿಗಳು ಪ್ರಬಲವಾಗುತ್ತಿವೆ. ಇವುಗಳಿಂದ ಕೊಡಗು ಮುಕ್ತವಾಗಬೇಕಾದರೆ ಪ್ರತ್ಯೇಕ ಕೊಡವ ಲ್ಯಾಂಡ್‌ ಘೋಷಣೆಯಾಗಬೇಕೆಂದು ಅಭಿಪ್ರಾಯಪಟ್ಟರು.

ಕೊಡವ ಜಾತಿ ನಮೂದಿಸಬೇಕು: ಕೊಡವ ಎನ್ನುವ ಜನಪದೀಯ ಪದವನ್ನು ಕೂಡ ಇಲ್ಲದಂತೆ ಮಾಡಲು ಪ್ರಯತ್ನಗಳು ನಡೆಯುತ್ತಿದೆ. ಜಾತಿ ದೃಢೀಕರಣ ಪತ್ರ ಮತ್ತು ಆದಾಯ ದೃಢೀಕರಣ ಪತ್ರದಲ್ಲಿ ‘ಕೊಡವ ಜಾಾತಿ’ ಎಂದು ನಮೂದಿಸಬೇಕೆಂದು ಮನವಿ ಸಲ್ಲಿಸಲಾಗಿದೆ. ಆದರೆ ಮುಖ್ಯಮಂತ್ರಿಗಳು ಮನವಿಯನ್ನು ಖುರ್ಚಿಯ ಕೆಳಗಿಟ್ಟಿದ್ದಾರೆ. ಹುಟ್ಟು, ಸಾವು ಬದುಕಿನುದ್ದಕ್ಕೂ ಕೋವಿ ಕೊಡವರ ಬದುಕಿನ ಒಂದು ಅಂಗವಾಗಿದೆ. ಆದರೆ ಈಗ ಅದನ್ನೂ ಕಸಿದುಕೊಳ್ಳುವ ಷಡ್ಯಂತ್ರ ನಡೆಯುತ್ತಿದೆ. ಕೊಡವ ಕುಲಶಾಸ್ತ್ರ ಅಧ್ಯಯನಕ್ಕೂ ಪ್ರಬಲರಿಂದ ತಡೆಯಾಗಿದೆ ಎಂದು ನಾಚಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಿಎನ್‌ಸಿಯ ಹೋರಾಟಕ್ಕೆ ಡಾ. ಸುಬ್ರಮಣಿಯನ್‌ ಸ್ವಾಮಿ ಅವರು ನಿರಂತರ ಬೆಂಬಲ ನೀಡುತ್ತಾ ಬಂದಿದ್ದಾರೆ ಎಂದ ನಾಚಪ್ಪ, ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸುಬ್ರಮಣಿಯನ್‌ ಸ್ವಾಮಿ ಅವರಿಗೆ ಸಲ್ಲಿಸಿದರು. ನಂತರ ಕೊಡವ ಸಾಂಪ್ರದಾಯಿಕ ಗೆಜ್ಜೆತಂಡ್‌ ಅನ್ನು ಕೊಡುಗೆಯಾಗಿ ನೀಡಿ ಕೃತಜ್ಞತೆ ಸಲ್ಲಿಸಿದರು.

ವಿರಾಟ್‌ ಹಿಂದೂಸ್ತಾನ್‌ ಸಂಗಮ್‌ (ವಿಎಚ್‌ಎಸ್‌) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್‌ ಶೆಟ್ಟಿಮಾತನಾಡಿ, ಸಿಎನ್‌ಸಿ ಸಂಘಟನೆ, ಸಂವಿಧಾನದಡಿ ನ್ಯಾಯುತವಾದ ಹಕ್ಕುಗಳನ್ನು ಕೇಳುತ್ತಿದೆ. ಇದು ರಾಷ್ಟ್ರ ವಿರೋಧಿ ಬೇಡಿಕೆಯಲ್ಲ. ಆದ್ದರಿಂದ ಸರ್ಕಾರ ಇವರ ಬೇಡಿಕೆಯನ್ನು ಪರಿಗಣಿಸುವ ಅಗತ್ಯವಿದೆ ಎಂದರು.

ದೇಶದ ವಿವಿಧ ಭಾಗಗಳಲ್ಲಿ ತಮ್ಮ ಹಕ್ಕುಗಳನ್ನು ಪಡೆಯಲು ಕೆಲವರು ಅನ್ಯಾಯದ ಮಾರ್ಗ ಹಿಡಿಯುತ್ತಿದ್ದಾರೆ. ಆದರೆ ಸಿಎನ್‌ಸಿ ಸಂಘಟನೆ ಪವಿತ್ರ ಕಾವೇರಿ ಭೂಮಿಯನ್ನು ಉಳಿಸಿಕೊಳ್ಳಲು ನಿರಂತರ ಶಾಂತಿಯುತ ಹೋರಾಟ ನಡೆಸುತ್ತಾ ಬಂದಿರುವುದು ಶ್ಲಾಘನೀಯ ಎಂದು ತಿಳಿಸಿದರು. ಕೊಡವ ಭಾಷೆ ಮತ್ತು ಸಂಸ್ಕೃತಿ ಸಂರಕ್ಷಣೆಯಾಗಬೇಕೆಂದು ತಿಳಿಸಿದ ಅವರು, ಪ್ರತಿಯೊಬ್ಬ ಕೊಡವರು ಈ ಹೋರಾಟದೊಂದಿಗೆ ಕೈ ಜೋಡಿಸಬೇಕೆಂದು ಕರೆ ನೀಡಿದರು. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೊಡವರು ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಸಿಎನ್‌ಸಿಯ ಹೋರಾಟಕ್ಕೆ ತಮ್ಮ ಸಂಘಟನೆಯ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಸಿಎನ್‌ಸಿ ಬೇಡಿಕೆಗಳ ಪರವಾಗಿ ವಾದ ಮಂಡಿಸಲು ಡಾ. ಸುಬ್ರಮಣಿಯನ್‌ ಸ್ವಾಮಿ ಅವರು ನಿಯೋಜಿಸಿರುವ ವಕೀಲ ಸತ್ಯ ಸಬರವಾಲ್‌ ಮಾತನಾಡಿ, ಸದ್ಯದÜಲ್ಲೇ ಸುಪ್ರೀಂ ಕೋರ್ಚ್‌ಗೆ ಅರ್ಜಿ ಸಲ್ಲಿಸಿ ವಾದ ಮಂಡಿಸುತ್ತೇನೆ. ಕೊಡವ ಲ್ಯಾಂಡ್‌ಗೆ ರಾಜಕೀಯ ಸ್ವಾಯತ್ತತೆ ನೀಡುವ ವಿಚಾರದಲ್ಲಿ ಜಯ ತಂದುಕೊಡುವುದಾಗಿ ಭರವಸೆ ನೀಡಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಸಿಎನ್‌ಸಿ ಪ್ರಮುಖರು ಗಾಳಿಯಲ್ಲಿ ಗುಂಡು ಹಾರಿಸಿ ಕೊಡವರ ಕೋವಿಹಕ್ಕನ್ನು ಪ್ರತಿಪಾದಿಸಿದರು.

ಸಿಎನ್‌ಸಿ ಅಧ್ಯಕ್ಷ ಎನ್‌.ಯು. ನಾಚಪ್ಪ ವಿವಿಧ ಬೇಡಿಕೆಗಳ ಕುರಿತು ಸಭೆಯಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು. ಸಿಎನ್‌ಸಿ ಪ್ರಮುಖ ಕಲಿಯಂಡ ಪ್ರಕಾಶ್‌ ಮತ್ತಿರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಡಾ.ಸುಬ್ರಮಣ್ಯನ್‌ ಸ್ವಾಮಿ ಅವರು, ಕರಡ ಮಲೆತಿರಿಕೆ ದೇವಾಲಯದ ರಸ್ತೆ ಅಭಿವೃದ್ಧಿಗೆ ರಾಜ್ಯಸಭಾ ಸದಸ್ಯರ ನಿಧಿಯಿಂದ 10 ಲಕ್ಷ ರು. ಗಳನ್ನು ಘೋಷಿಸಿದರು. ವಿವಿಧ ಕೊಡವ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ನೆರೆದಿದ್ದವರು ಗಮನ ಸೆಳೆದರು.

ಇಂದು, ನಾಳೆ ಕೊಡವ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾವಳಿ

ಹಕ್ಕೊತ್ತಾಯ ಮಂಡನೆ

ಕೊಡವ ಮೂಲ ವಂಶಸ್ಥ ಬುಡಕಟ್ಟು ಸಮುದಾಯಕ್ಕೆ ಎಸ್‌ಟಿ ಪಟ್ಟಿಯಲ್ಲಿ ಮಾನ್ಯತೆ ನೀಡಬೇಕು, ಕೊಡವರ ಧಾರ್ಮಿಕ ಸಂಸ್ಕಾರ ಕೋವಿಗೆ ಸಂವಿಧಾನದ 25, 26 ನೇ ವಿಧಿಯಲ್ಲಿ ವಿಶೇಷ ಭದ್ರತೆ ಒದಗಿಸಬೇಕು, ಕೊಡವ ತಕ್‌ ಗೆ 8 ನೇ ಶೆಡ್ಯೂಲ್‌ ಸ್ಥಾನಮಾನ ನೀಡಬೇಕು, ಅರಮನೆ ಪಿತೂರಿ ಮತ್ತು ದೇವಟ್‌ಪರಂಬುವಿನ ನರಮೇಧದಲ್ಲಿ ಜೀವ ಕಳೆದುಕೊಂಡ ಕೊಡವರ ಸ್ಮರಣೆಗಾಗಿ ಸ್ಮಾರಕ ನಿರ್ಮಾಣ ಮಾಡಬೇಕು, ಕೊಡವರ ಭೂಮಿ, ಸಂಸ್ಕೃತಿ, ಜನಪದ, ಪರಂಪರೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಈಶಾನ್ಯ ರಾಜ್ಯದ ಮಾದರಿ 371 (ಕೆ) ವಿಧಿಯಂತೆ ರಾಜ್ಯಾಂಗದ ವಿಶೇಷ ಖಾತ್ರಿಗೆ ಸಂಬಂಧಿಸಿದ ನಿರ್ಣಯ ಸೇರಿದಂತೆ ಕೊಡವರ ಹಿತಾಸಕ್ತಿ ಕಾಪಾಡುವ ಪ್ರಮುಖ ಹಕ್ಕೊತ್ತಾಯಗಳನ್ನು ಮಂಡಿಸಿ ಅಂಗೀಕರಿಸಲಾಯಿತು.

Follow Us:
Download App:
  • android
  • ios