Asianet Suvarna News Asianet Suvarna News

15 ದಿನಕ್ಕೊಮ್ಮೆ ರೈತರಿಗೆ ಹಣ ಪಾವತಿ

ಮಂಡ್ಯ ಭಾಗದ ರೈತರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಇನ್ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ. ಇಲ್ಲಿನ ಸಕ್ಕರೆ ಕಾರ್ಖಾನೆ ಮತ್ತೆ ಕಬ್ಬು ಅರೆಯುವಿಕೆ ಆರಂಭ ಮಾಡುತ್ತಿದೆ.

Pandavapura sugar factory starts operation snr
Author
Bengaluru, First Published Sep 18, 2020, 11:39 AM IST

 ಮಂಡ್ಯ (ಸೆ.18): ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿದ್ದ ರೈತರ ಜೀವನಾಡಿಯಾಗಿದ್ದ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ  ಇಂದಿನಿಂದ(ಸೆ.18) ಪ್ರಸಕ್ತ ಹಂಗಾಮಿನ ಕಬ್ಬು ಅರೆಯುವಿಕೆ ಕಾರ್ಯವನ್ನು ವಿದ್ಯುಕ್ತವಾಗಿ ಆರಂಭಿಸಲಾಗುವುದು ಎಂದು ನಿರಾಣಿ ಉದ್ಯಮ ಸಮೂಹ ಸಂಸ್ಥೆ ಅಧ್ಯಕ್ಷ ಮುರುಗೇಶ ನಿರಾಣಿ ಹೇಳಿದ್ದಾರೆ.

ನಿರಾಣಿ ಉದ್ಯಮ ಸಮೂಹ ಸಂಸ್ಥೆಯು ಕಾರ್ಖಾನೆಯನ್ನು ಗುತ್ತಿಗೆಗೆ ಪಡೆದ ಮೇಲೆ ಕಾರ್ಖಾನೆಯಲ್ಲಿದ್ದ ಕಬ್ಬು ಅರೆಯುವಿಕೆ ಸಾಮರ್ಥ್ಯವನ್ನು 3500 ಟನ್‌ನಿಂದ 5000 ಟನ್‌ ಸಾಮರ್ಥ್ಯಕ್ಕೆ ಹೆಚ್ಚಿಸುವ ವಿಸ್ತರಣೆ ಕಾರ್ಯ ಸಮರೋಪಾದಿಯಲ್ಲಿ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಜೊತೆ ಎಂಆರ್‌ಎನ್‌ (ನಿರಾಣಿ) ಉದ್ಯಮ ಸಮೂಹ ಸಂಸ್ಥೆಯ ಒಡಂಬಡಿಕೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿರದ ಕಾರಣ ಯಾವುದೇ ಬ್ಯಾಂಕುಗಳಿಂದ ಪಿಎಸ್‌ಎಸ್‌ಕೆಗೆ ಹಣಕಾಸಿನ ನೆರವು ಪಡೆಯಲು ಇದುವರೆಗೆ ಸಾಧ್ಯವಾಗಿಲ್ಲ. ಆದರೂ ಸಂಸ್ಥೆಯು ರೈತರು ಹಾಗೂ ಕಾರ್ಮಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಖಾನೆ ಪುನರಾರಂಭ ಮಾಡಿದೆ. ಕೇವಲ 60 ದಿನಗಳಲ್ಲಿ ಸ್ಥಗಿತಗೊಂಡಿದ್ದ ಕಾರ್ಖಾನೆಯ ಯಂತ್ರೋಪಕರಣಗಳನ್ನು ದುರಸ್ತಿಗೊಳಿಸಿ ಸಾಮರ್ಥ್ಯ ವಿಸ್ತರಿಸುವ ಸವಾಲಿನ ಕಾರ್ಯವನ್ನೂ ಯಶಸ್ವಿಯಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಟೊಮೆಟೋಗೆ ಈಗ ಭಾರೀ ಬಂಪರ್ : ರೈತನಿಗೆ ಫುಲ್ ಖುಷ್ .

ಕಾರ್ಮಿಕರು, ಆಡಳಿತ ಮಂಡಳಿಯ ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಈಗಾಗಲೇ ಕಾರ್ಮಿಕರ ಹಿಂದಿನ ವರ್ಷಗಳ ವೇತನ ಪಾವತಿಗಾಗಿ 6 ಕೋಟಿ ರೂ. ನೀಡಲಾಗಿದೆ. ಉಳಿದ ಹಣವನ್ನು ಸರ್ಕಾರದ ಒಡಂಬಡಿಕೆ ಪ್ರಕ್ರಿಯೆ ಕಾರ್ಯಗಳು ಪೂರ್ಣಗೊಂಡ 24 ಘಂಟೆಗಳಲ್ಲಿ ಪಾವತಿ ಮಾಡಲಾಗುವುದು ಎಂದಿದ್ದಾರೆ.

ಐದು ವರ್ಷಗಳ ಹಿಂದೆ ಕಾರ್ಖಾನೆ ಸ್ಥಗಿತಗೊಂಡಾಗಿನಿಂದ ಇಲ್ಲಿಯವರೆಗೆ ಇದ್ದ ಯಾವ ಸಿಬ್ಬಂದಿಯನ್ನೂ ಕೈಬಿಟ್ಟಿಲ್ಲ. ಎಲ್ಲಾ ಸಿಬ್ಬಂದಿಯನ್ನು ಕೆಲಸದಲ್ಲಿ್ನ ಮುಂದುವರೆಸಲಾಗಿದೆ. ಪಿಎಸ್‌ಎಸ್‌ಕೆಯನ್ನು ಆಧುನೀಕರಣಗೊಳಿಸಲು ಅಗತ್ಯವಿದ್ದ ಹೆಚ್ಚಿನ ಸಿಬ್ಬಂದಿ ನೇಮಕಾತಿಯಲ್ಲಿ ಸ್ಥಳೀಯರಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತತ ಕಾರ್ಖಾನೆ ಕಾರ್ಯಾರಂಭ ಆಗಿಲ್ಲದ ಕಾರಣ ಪಿಎಸ್‌ಎಸ್‌ಕೆಗೆ ಯಾವುದೇ ಆದಾಯವಿರುವುದಿಲ್ಲ ಎಂಬ ಮಾಹಿತಿಯು ಸ್ವಯಂವೇದ್ಯವಾಗಿದೆ. ಇದೇ ಶುಕ್ರವಾರದಿಂದ ಕಾರ್ಖಾನೆ ಆರಂಭವಾಗಲಿದ್ದು, ಪ್ರತಿ ಹದಿನೈದು ದಿನಗಳಿಗೊಮ್ಮೆ ಕೇಂದ್ರಸರ್ಕಾರ ನಿಗದಿಪಡಿಸಿದ ಎಫ್‌ಆರ್‌ಪಿ ದರದಂತೆ ರೈತರಿಗೆ ಕಬ್ಬಿನ ಹಣ ಪಾವತಿಸಲಾಗುವುದು. ಕಾರ್ಮಿಕರಿಗೆ ಪ್ರತಿ ತಿಂಗಳ ಮೊದಲನೇ ವಾರದಲ್ಲಿಯೇ ಸಂಬಳ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ರೈತರ ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಎಂಆರ್‌ಎನ್‌ (ನಿರಾಣಿ) ಉದ್ಯಮ ಸಮೂಹ ಸಂಸ್ಥೆಯು ಸದೃಢವಾಗಿ ಹಾಗೂ ಸುಸ್ಥಿರವಾಗಿ ಮುನ್ನಡೆಸಿಕೊಂಡು ಹೋಗಲು ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios