ನೆರೆ ರಾಜ್ಯಗಳಲ್ಲೂ ಪಂಚಮಸಾಲಿ ಸಂಘಟನೆ: ಡಾ. ಮಹಾದೇವ ಮಹಾಸ್ವಾಮೀಜಿ
* ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗೋವಾದಲ್ಲಿ ಶಾಖೆ
* ಜಮಖಂಡಿಯಲ್ಲಿ ನಡೆದ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಸಭೆ
* ನೀವು ನಮ್ಮವರು, ನಾವು ನಿಮ್ಮವರು. ಈ ಪೀಠ ನಿರಾಣಿ ಅವರಿಗೆ ಸೀಮಿತ ಅಲ್ಲ
ಜಮಖಂಡಿ(ಜು.01): ಪಂಚಮಸಾಲಿ ಸಂಘಟನೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ಅನ್ಯ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಗೋವಾ ರಾಜ್ಯಗಳಲ್ಲಿ ಶಾಖೆ ಹಾಗೂ ಸಂಚಾಲಕರನ್ನು ನೇಮಿಸಲಿದ್ದು, ಶೀಘ್ರದಲ್ಲಿ ಈ ರಾಜ್ಯಗಳಲ್ಲೂ ಪಂಚಮಸಾಲಿ ಸಂಘಟನೆ ನಡೆಸಲಾಗುವುದು ಎಂದು ತಾಲೂಕಿನ ಆಲಗೂರು ಪಂಚಮಸಾಲಿ ಜಗದ್ಗುರು ಬಬಲೇಶ್ವರದ ಡಾ.ಮಹಾದೇವ ಮಹಾಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಗುರುವಾರ ನಡೆದ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಸಭೆಯ ನಂತರ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ರಾಜ್ಯಗಳಲ್ಲಿ ಪಂಚಮಸಾಲಿ ಸಮಾಜದ ಜನ ಹೆಚ್ಚಿನ ಬೆಂಬಲ ನೀಡಿದ್ದು, ಅಲ್ಲಿನ ಸಮಾಜದವರನ್ನು ಸಂಪರ್ಕಿಸಿ, ಈ ಪೀಠಗಳ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ, ತಾಲೂಕಾಧ್ಯಕ್ಷ ಹಾಗೂ ವಿವಿಧ ಕಾರ್ಯಕರ್ತರನ್ನು ನೇಮಿಸಲಾಗುತ್ತಿದೆ. ಪ್ರಸ್ತುತವಾಗಿ ಸುರೇಶ ಬಿರಾದಾರ (ಕರ್ನಾಟಕ), ಶಿವಪ್ಪ ತಂವಶಿ (ಮಹಾರಾಷ್ಟ್ರ), ಅಂಬರೀಶ ನಂದನ್ನವರ (ಆಂಧ್ರಪ್ರದೇಶ), ನರಸಿಂಹ (ತೆಲಂಗಾಣ) ಹಾಗೂ ಶಾಂತವೀರ ಪಾಟೀಲ (ಗೋವಾ) ಇವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಇವರ ಮೂಲಕ ಪಂಚಮಸಾಲಿ ಸಮಜದ ಸಂಘಟನೆ ವಿವಿಧ ಚಟುವಟಿ ಕೆಗಳನ್ನು ನಡೆಸಿ ಕಾರ್ಯಕ್ಷೇತ್ರ ವಿಸ್ತರಿಸಲಾಗುತ್ತಿದೆ. ಈಗಿರುವ ಎರಡು ಪೀಠಗಳು ಮಾಡಲಾಗದಿರುವ ಕಾರ್ಯಗಳನ್ನು ನಮ್ಮ ಮೂರನೇ ಪೀಠ ಮಾಡುತ್ತಿದೆ ಎಂದು ತಿಳಿಸಿದರು.
ಪಂಚಮಸಾಲಿ ಮೀಸಲಾತಿಗಾಗಿ ವಿಧಾನಸೌಧದ ಒಳಗೂ ಶಕ್ತಿ ಪ್ರದರ್ಶನ: ಕೂಡಲ ಶ್ರೀ
ಲಿಂಗ ದೀಕ್ಷೆ:
ಜುಲೈ 25ರಂದು ರಬಕವಿ-ಬನಹಟ್ಟಿಯಲ್ಲಿ ಪಂಚಮಸಾಲಿ ಹಾಗೂ ಇತರೆ ಸಮಾಜದ ಆಸಕ್ತರಿಗೆ ಲಿಂಗದೀಕ್ಷೆ ನೀಡುವ ಧಾರ್ಮಿಕ ಕಾರ್ಯ ನಡೆಸಲು ಮಠಾಧೀಶರ ಸಭೆಯಲ್ಲಿ ತಿರ್ಮಾನಿಸಲಾಯಿತು ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯ ಮನಗೂಳಿಯ ಸಂಗನಬಸವ ಶ್ರೀ ಮಾತನಾಡಿ, ಐದು ರಾಜ್ಯಗಳ ಸ್ವಾಮೀಜಿಗಳನ್ನು ಸಂಪರ್ಕಿಸಿದ್ದು, ಅವರಿಂದಲೂ ಹೆಚ್ಚಿನ ಸಹಕಾರ ಸಿಕ್ಕಿದೆ. ರಬಕವಿ-ಬನಹಟ್ಟಿಯಲ್ಲಿ ನಡೆಯುವ ಸಾಮೂಹಿಕ ಇಷ್ಟಲಿಂಗ ದೀಕ್ಷೆ ಪಡೆಯಲು ಎಲ್ಲರಿಗೂ ಮುಕ್ತ ಪ್ರವೇಶವಿದ್ದು, ದೀಕ್ಷೆ ಪಡೆಯಲು ಯಾವುದೇ ನಿಬಂಧನೆ ಇಲ್ಲ. ರಾಜ್ಯದಲ್ಲಿ ಪಂಚಮಸಾಲಿ ದೊಡ್ಡ ಸಮಾಜವಾಗಿದೆ. ಈ ಕಾರ್ಯಕ್ರಮ ಮಾಡುವ ಮೂಲಕ ಪ್ರಥಮ ಹೆಜ್ಜೆ ಹಾಕುತ್ತಿದೆ. ಐದು ರಾಜ್ಯದಲ್ಲಿ ಮತ್ತೊಂದು ಪೀಠ ಮಾಡುವ ವಿಚಾರವಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.
ನಿರಾಣಿಯವರಿಗೆ ಸೀಮಿತವಲ್ಲ:
ಮೂರನೇ ಪೀಠ ನಿರಾಣಿ ಕುಟುಂಬಕ್ಕೆ ಮಾತ್ರ ಸೀಮಿತವಿಲ್ಲ. ನಿರಾಣಿ ಅವರ ಮನೆಗೆ ಎಲ್ಲ ಸಮಾಜದ ಮಠಾಧೀಶರು ಬಂದು ಹೋಗುತ್ತಾರೆ. ವಿಜಯಪುರ ಶಾಸಕರು ಹೇಳುವ ಕೆಲವು ಮಾತುಗಳಿಗೆ ಮುಂದಿನ ದಿನಮಾನಗಳಲ್ಲಿ ಸಮಾಜದ ಅಭಿವೃದ್ಧಿಯೇ ಉತ್ತರ ಹೇಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತಾಲೂಕಿನ ಆಲಗೂರು ಗ್ರಾಮದಲ್ಲಿ ಸ್ಥಾಪನೆಗೊಂಡ 3ನೇ ಪೀಠ ಕಟ್ಟಡ ಕಾಮಗಾರಿ ಶೀಘ್ರ ಪ್ರಾರಂಭಿಸಲಾಗುತ್ತಿದೆ ಎಂದು ವಿವರಿಸಿದರು.
ನೀವು ನಮ್ಮವರು, ನಾವು ನಿಮ್ಮವರು. ಈ ಪೀಠ ನಿರಾಣಿ ಅವರಿಗೆ ಸೀಮಿತ ಅಲ್ಲ. ನಿರಾಣಿ ಮನೆತನದ ಬಗ್ಗೆ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಅವರು ಸಮಾಜ ಸೇವಕರು. ಎಲ್ಲ ಸ್ವಾಮೀಜಿಗಳನ್ನ ಪ್ರೀತಿಯಿಂದ ಕಾಣುವ ಅಪರೂಪದ ರಾಜಕಾರಣಿ ಎಂದ ಅವರು, ನಿರಾಣಿ ಅವರ ಫ್ಯಾಕ್ಟರಿಯಿಂದ ಬಂದ ಜನ ಅಲ್ಲ. ಇದು ನಿರಾಣಿ ಪೀಠ ಅಲ್ಲ, ಸಮಾಜದ ಪೀಠ. ನಿಮಗೂ ನಮ್ಮ ಪೀಠದ ಆಶೀರ್ವಾದ ಇದೆ ಎಂದು ಹೇಳಿದರು.
ಮನವೊಲಿಸುವಲ್ಲಿ ಸಿಎಂ ಸಕ್ಸಸ್, ಪಂಚಮಸಾಲಿಗಳ 2 A ಮೀಸಲಾತಿ ಹೋರಾಟಕ್ಕೆ ಬ್ರೇಕ್
ಪಂಚಮಸಾಲಿ ಸಮಾಜಕ್ಕೆ ನೀಡುವ 3ಎ ಮೀಸಲಾತಿ ಹೋರಾಟ ಇನ್ನೂ ಇದೆ. ಮುಖ್ಯಮಂತ್ರಿ ಹಾಗೂ ಸಮಿತಿಗೆ ಮನವಿ ನೀಡಲಾಗಿದ್ದು, ಸರ್ಕಾರ ನಮಗೆ ಮೀಸಲಾತಿ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದರು. ಮುಖ್ಯಮಂತ್ರಿ ಜೊತೆ ಸಮಾಜದ ಮಠಾಧೀಶರು ಮಾತುಕತೆ ನಡೆಸಿ ಮೀಸಲಾತಿ ನೀಡುವ ಭರವಸೆ ನೀಡಿದ್ದು, ಅವರು ನೀಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ಕುಂಚನೂರು ಕಮರಿಮಠ ಸಿದ್ಧಲಿಂಗ ಶ್ರೀ, ಹಿಪ್ಪರಗಿ ಸಿದ್ಧಾರೂಢ ಶ್ರೀ, ಆಲಗೂರು ಧರೀ ದೇವರು, ಗೋಕಾಕ ಗುರುಬಸವ ಶ್ರೀ, ಬೆಂಗಳೂರು ರಾಮನಹಳ್ಳಿ ಶ್ರೀ, ಬೆಂಡವಾಡ ಶ್ರೀ, ಶಿರಬೂರು ಶ್ರೀ, ಬೆಂಕಿನಾಳ ಶ್ರೀ, ಗಾಣಗಾಪೂರ ದತ್ತಪೀಠದ ಬಪೂಜಿ ಶ್ರೀ ಸೇರಿದಂತೆ ಅನೇಕ ಶ್ರೀಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.