ವರದಿ :  ಎಸ್‌. ಕುಮಾರ್‌

 ಟಿ. ನರಸೀಪುರ (ಡಿ.10):  ತಾಲೂಕಿನ ಇತಿಹಾಸ ಪ್ರಸಿದ್ಧ ತಲಕಾಡಿನ ಪಂಚಲಿಂಗ ದರ್ಶನ ಉತ್ಸವ ಡಿ. 10 ರಿಂದ 19ರವರೆಗೆ ನಡೆಯಲಿದ್ದು, ಐತಿಹಾಸಿಕ ಪಂಚಲಿಂಗ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಕಾರ್ತಿಕ ಮಾಸದಲ್ಲಿ ಐದು ಸೋಮವಾರ ಬರುವ ಸಂದರ್ಭದಲ್ಲಿ ಸೂರ್ಯ ವೃಶ್ಚಿಕ ಮಾಸದ ಐದನೇ ಸೋಮವಾರ ಅಮಾವಾಸ್ಯೆ ದಿನ ಪಂಚಲಿಂಗ ದರ್ಶನಕ್ಕೆ ನಡೆಯುತ್ತದೆ. ಈ ಪುಣ್ಯಕಾಲ 3, 5, 7, 12, 13 ಹೀಗೆ ವರ್ಷಗಳ ಅಂತರದಲ್ಲಿ ದರ್ಶನ ಮಹೋತ್ಸವ ನಡೆಯುತ್ತದೆ.

ಇಂದಿನಿಂದ ಆರಂಭವಾಗಲಿರುವ ಪಂಚಲಿಂಗ ದರ್ಶನಕ್ಕೆ ಈಗಾಗಲೇ ಸಕಲ ಸಿದ್ಧತೆ ನಡೆಯುತ್ತಿದೆ. ಸಂಜೆ 6.30ಕ್ಕೆ ವೈದ್ಯನಾಥೇಶ್ವೇರ ದೇವಾಲಯದಲ್ಲಿ ಪ್ರಧಾನ ಅರ್ಚಕ ಆನಂದ್‌ ದೀಕ್ಷಿತ್‌ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ. ವೈದ್ಯನಾಥೇಶ್ವೇರ ದೇವಾಲಯದಲ್ಲಿ ದೀಪ ಹಚ್ಚುವ ಮೂಲಕ ಪಂಚಲಿಂಗ ದರ್ಶನ ಆರಂಭವಾಗಲಿದೆ. ಈ ಹಿಂದೆ 2013ರಲ್ಲಿ ಪಂಚಲಿಂಗದರ್ಶನ ಮಹೋತ್ಸವ ನಡೆದಿತ್ತು, 7 ವರ್ಷಗಳ ಬಳಿಕ 2020ರಲ್ಲಿ ನಡೆಯುತ್ತಿರುವ ತಲಕಾಡು ಪಂಚ ಲಿಂಗ ದರ್ಶನ ಡಿ. 10 ರಿಂದ 20ರವರೆಗೆ ಹತ್ತು ದಿನಗಳ ಕಾಲ ನಡೆಯಲಿದೆ. ಕೋವಿಡ್‌ 19 ಕಾರಣ ಸರಳ ಪಂಚಲಿಂಗ ದರ್ಶನ ಮಹೋತ್ಸವ ಆಚರಣೆಗೆ ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.

'ವಿಜ್ಞಾನಕ್ಕೆ ಸವಾಲಾದ ಅಲಮೇಲಮ್ಮನ ಶಾಪ' ...

ಪಂಚಲಿಂಗ ದರ್ಶನಕ್ಕೆ ಆಗಮಿಸುವ ಎಲ್ಲ ಭಕ್ತಾದಿಗಳಿಗೂ ಕಡ್ಡಾಯವಾಗಿ ಆರೋಗ್ಯ ಇಲಾಖೆಯಿಂದ ಕೋವಿಡ್‌ 19 ಪರೀಕ್ಷೆ ನಡೆಸಲಿದ್ದಾರೆ. ಈ ಬಾರಿಯ ಪಂಚಲಿಂಗದರ್ಶನವನ್ನು ಮನೆಯಲ್ಲಿಯೇ ಕುಳಿತು ವೀಕ್ಷಣೆ ಮಾಡಲು ಸಕಲ ಸಿದ್ಧತೆ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಇಲಾಖೆ ಕಟ್ಟೆಚ್ಚರ ವಹಿಸಿದ್ದಾರೆ.

1993ರಲ್ಲಿ ಎಂ. ವೀರಪ್ಪಮೊಯ್ಲಿ, 2006 ರಲ್ಲಿ ಎಚ್‌.ಡಿ. ಕುಮಾರಸ್ವಾಮಿ, 2009 ರಲ್ಲಿ ಬಿ.ಎಸ್‌. ಯಡಿಯೂರಪ್ಪ , 2013ರಲ್ಲಿ ಸಿದ್ದರಾಮಯ್ಯ ಪಂಚಲಿಂಗ ದರ್ಶನದಲ್ಲಿ ಭಾಗವಹಿಸಿದ್ದರು. ಇದೀಗ 2020ರಲ್ಲಿ ನಡೆಯುತ್ತಿರುವ ಪಂಚಲಿಂಗ ದರ್ಶನಕ್ಕೆ ಸಿಎಂ ಬಿ.ಎಸ್‌. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.

ಅರ್ಕೇಶ್ವರ- ಉತ್ತರವಾಹಿನಿ ಕಾವೇರಿ ತಟದಲ್ಲಿ ಸೂರ್ಯ(ಅರ್ಕ) ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡಿದ್ದ ಧ್ಯೋತಕವಾಗಿ ಅರ್ಕೇಶ್ವರ ಹೆಸರಿನಲ್ಲಿ ಲಿಂಗ ರೂಪಿಯಾಗಿ ಶಿವನನ್ನು ಪೂಜಿಸಲಾಗುತ್ತದೆ.

ಪಾತಾಳೇಶ್ವರ- ಪೂರ್ವವಾಹಿನಿಯಲ್ಲಿ ತಪೋನಿರತ ವಾಸುಕಿ(ಸರ್ಪ)ಗೆ ಶಿವ ಪ್ರತ್ಯಕ್ಷನಾಗಿದ್ದರಿಂದ ವಾಸುಕೇಶ್ವರನ ಉದಯವಾಯಿತು. ಸರ್ಪದೋಷ ನಿವಾರಣೆಗೆ ಕ್ಷೇತ್ರ ಪ್ರಸಿದ್ಧಿ.

ಮರಳೇಶ್ವರ- ಸರಸ್ವತಿಯನ್ನು ವಿವಾಹವಾಗಲು ಅನುಮತಿ ಕೋರಿ ಬ್ರಹ್ಮದೇವ ದಕ್ಷಿಣ ದಿಕ್ಕಿನಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಮಿಂದು ಮರಳಿನಲ್ಲಿ ಲಿಂಗ (ಸಂಸ್ಕೃತದಲ್ಲಿ ಸೈತಕ ಎಂದರೆ ಮರಳು) ಮಾಡಿ ಶಿವನನ್ನು ಪೂಜಿಸುತ್ತಾನೆ. ಬ್ರಹ್ಮಹತ್ಯಾದೋಷ ಪರಿಹಾರ ಇಲ್ಲಿ ಸಿಗುತ್ತದೆ.

ಶಾಪ ನಿಜ ಆಗುತ್ತಾ? ಶಾಪ ಇದೆಯಾ ತಿಳಿಯೋದು ಹೇಗೆ? ...

ಮಲ್ಲಿಕಾರ್ಜುನ- ಪಶ್ಚಿಮವಾಹಿನಿ ಕಾವೇರಿ ಹರಿಯುವ ಮುಡುಕುತೊರೆ ಅಥವಾ ಸೋಮಗಿರಿಯಲ್ಲಿ ದಿಲೀಪ-ದಮಯಂತಿ ದಂಪತಿಗೆ ವಿಷ ಪ್ರಾಶನ ದೋಷ ನಾಶ ಮಾಡಿದ ಮಲ್ಲಿಕಾರ್ಜುನ ಸ್ವಾಮಿ ಇಲ್ಲಿ ನೆಲೆಸಿದ್ದಾನೆ.ಮಧ್ಯಮ ಪಾಂಡವ ಅರ್ಜುನ ಇಲ್ಲಿ ಮಲ್ಲಿಕಾ ಪುಷ್ಪಗಳಿಂದ ಶಿವನನ್ನು ಪೂಜಿಸಿದ ಎನ್ನಲಾಗಿದೆ. ಮಲ್ಲಿಕಾರ್ಜುನ ಸ್ವಾಮಿ ಜತೆ ತಲೆಯಲ್ಲಿ ಕಾಮಧೇನುವಿನ ಪಾದದ ಚಿನ್ಹೆ ಜತೆಗೆ ಭ್ರಮರಾಂಭ ದೇವಿಯೂ ಇಲ್ಲಿ ನೆಲೆಸಿದ್ದು ಭಕ್ತರ ಇಷ್ಟಾರ್ಥಗಳು ನೆರವೆರುತ್ತದೆ.

ವೈದ್ಯನಾಥೇಶ್ವರ- ಕಾವೇರಿ-ಕಪಿಲಾ ಸಂಗಮದ ಗಜಾರಣ್ಯ ಕ್ಷೇತ್ರದಲ್ಲಿ ತಪಸ್ಸು ಮಾಡಲು ವಶಿಷ್ಠ ಕುಲದ ಸೋಮದತ್ತ ಎಂಬ ಋುಷಿ ಇಲ್ಲಿಗೆ ಬರುತ್ತಾರೆ. ಆದರೆ, ಕಾಡಾನೆಯಿಂದ ಸೋಮದತ್ತ ಹತನಾಗುತ್ತಾನೆ. ಮುಂದಿನ ಜನ್ಮದಲ್ಲಿಆನೆಯಾಗಿ ಹುಟ್ಟಿಈ ಕ್ಷೇತ್ರದಲ್ಲಿ ಗೋಕರ್ಣ ಕೊಳದಲ್ಲಿ ಮಿಂದು ಲಿಂಗಕ್ಕೆ ಪೂಜೆ ಸಲ್ಲಿಸುತ್ತದೆ. ತಲ ಮತ್ತು ಕಾಡ ಎಂಬ ಬೇಡರಿಬ್ಬರು ಶಿವಲಿಂಗ ಭಗ್ನಗೊಳಿಸುತ್ತಾರೆ. ಇವರ ವಿರುದ್ಧ ಆನೆ ತಿರುಗಿಬೀಳುತ್ತದೆ. ಶಿವ ಪ್ರತ್ಯಕ್ಷನಾಗಿ ಎಲ್ಲರಿಗೂ ಮೋಕ್ಷ ಕರುಣಿಸುತ್ತಾನೆ. ಗಾಯಗೊಂಡ ಲಿಂಗ ರೂಪಿ ಶಿವನಿಗೆ ಗಿಡಮೂಲಿಕೆಯ ಸುಶ್ರೂಷೆ ಸಿಗುತ್ತದೆ. ವೈದ್ಯನಾಥೇಶ್ವರನ ಜತೆ ಮನೋನ್ಮಣಿ ಅಮ್ಮನವರು ಇಲ್ಲಿದ್ದಾರೆ.

ಮಾಲಂಗಿ ಮಡುವಾಗಲಿ..ತಲಕಾಡು ಮರಳಾಗಲಿ.. ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಅಲಮೇಲಮ್ಮ ಶಾಪ ನೀಡಿದ್ದರು ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ತುಂಬಿ ಹರಿಯುವ ಕಾವೇರಿ ನದಿ ಇದರೂ ದೇಗುಲಗಳ ಸುತ್ತ ಮುತ್ತ ಎತ್ತ ನೋಡಿದರೂ ಅತ್ತ ಮರಳು ರಾಶಿ ಎದ್ದು ಕಾಣುತ್ತದೆ. ಪಂಚಲಿಂಗ ದರ್ಶನದ ಸಂದರ್ಭದಲ್ಲಿ ಹೆಚ್ಚು ಮರಳು ತುಂಬಿರುವ ಪಾತೇಳ್ವರ, ವೈದ್ಯನಾಥೇಶ್ವರ ದೇವಾಲಯಗಳಲ್ಲಿ ಮರಳನ್ನು ತೆಗೆದು, ಪೂಜೆಗೆ ಅಣಿಗೊಳಿಸಲಾಗುತ್ತದೆ.