‘ಭತ್ತದ ಬೆಳೆ ಈಗ ಹೆಚ್ಚು ಲಾಭದಾಯ’
ನೂತನ ಸಂತ್ರಜ್ಞಾನದ ಅಳವಡಿಕೆಯಿಂದ ಇದೀಗ ಭತ್ತದ ಬೆಳೆಯು ಹೆಚ್ಚಿನ ಲಾಭದಾಯಕ ಬೆಳೆಯಾಗಿದೆ.
ಯಲ್ಲಾಪುರ [ಮಾ.05]: ತಲೆ-ತಲಾಂತರದಿಂದ ರೈತರು ಅನುಸರಿಸುತ್ತ ಬಂದಿರುವ ಸಾಂಪ್ರದಾಯಿಕ ಬೆಳೆಗಳಲ್ಲೊಂದಾದ ಭತ್ತವನ್ನು ಕೇವಲ ಲಾಭದ ಉದ್ದೇಶದಿಂದಲೇ ಹಿಂದಿನವರು ಬೆಳೆಯುತ್ತಿರಲಿಲ್ಲ.
ಬದಲಾದ ಇಂದಿನ ಆಧುನಿಕ ಯುಗದಲ್ಲಿ ಭತ್ತವನ್ನು ನೂತನ ತಂತ್ರಜ್ಞಾನದ ನೆರವಿನಿಂದ ಲಾಭದಾಯಕ ಬೆಳೆಯನ್ನಾಗಿಯೂ ಪರಿವರ್ತಿಸಿಕೊಳ್ಳುವತ್ತ ಮುನ್ನಡೆದಿರುವ ಕೃಷಿಕರು ಇದೀಗ ಸಾಕಷ್ಟು ಸುಧಾರಣೆ ಕಂಡಿದ್ದಾರೆ ಎಂದು ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಡಾ. ಶಿವಶಂಕರ ಮೂರ್ತಿ ಹೇಳಿದರು.
ಮಾ. 3ರಂದು ತಾಲೂಕಿನ ಕನೇನಹಳ್ಳಿಯ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಭಾರತೀಯ ಕೃಷಿ ಕೌಶಲ್ಯ ಸಮಿತಿ ಗುರುಗ್ರಾಮ ಹರಿಯಾಣ ಹಾಗೂ ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತೆ ಮತ್ತು ಸಾಲ ಸಮಾಲೋಚನಾ ಟ್ರಸ್ಟ್ ಮಣಿಪಾಲ ಆಶ್ರಯದಲ್ಲಿ ಉಮ್ಮಚಗಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಾಗೂ ನಬಾರ್ಡ್‌ಗಳ ಸಹಯೋಗದಲ್ಲಿ ರೈತರಿಗಾಗಿ ಹಮ್ಮಿಕೊಳ್ಳಲಾಗಿದ್ದ ಆರ್ಥಿಕ ಸಾಕ್ಷರತಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.
60 ಸಾವಿರ ತಲುಪಿದ ಅಡಕೆ ದರ : ಬೆಳೆಗಾರರು ಖುಷ್...
ಸಾಂಪ್ರದಾಯಿಕ ಪದ್ಧತಿಯೊಂದಿಗೆ ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಳ್ಳುವುದರಿಂದ ಅಧಿಕ ಇಳುವರಿ ಪಡೆಯಲು ಸಾಧ್ಯ. ಗುಣಮಟ್ಟದ ಬೀಜ ಬಳಕೆ, ವೈಜ್ಞಾನಿಕ ವಿಧಾನದ ನಾಟಿ; ಉತ್ತಮ-ಸೂಕ್ತ ಗೊಬ್ಬರ ಬಳಕೆ ಹಾಗೂ ನಿಯತ್ತಿನ ನಿರ್ವಹಣೆ ಮಾಡುವುದರಿಂದ ನಿಶ್ಚಿತ ಗುರಿ ತಲುಪಬಹುದು. ಅಲ್ಲದೇ ಜೀವಾಮೃತ ತಯಾರಿ ವಿಧಾನ ಮತ್ತು ಸಾವಯವ ಗೊಬ್ಬರಗಳನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ತಯಾರಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಕಡಿಮೆ ಖರ್ಚಿನಿಂದ ಅಧಿಕ ಉತ್ಪಾದನೆಯ ನಿಟ್ಟಿನಲ್ಲಿ ಸಾಗುವ ರೈತರು ಪರಿಸರ ಪೂರಕ ಬೇಸಾಯ ಪದ್ಧತಿಯನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಬ್ಯಾಂಕ್ ಮಿತ್ರ ನಾಗರಾಜ ನಾಯ್ಕ, ಎಟಿಎಂ ಬಳಕೆಯಿಂದ ಸರಳ ರೂಪದಲ್ಲಿ ಹಣ ತೆಗೆಯುವ ವಿಧಾನವನ್ನು ವಿವರಿಸಿದರು.