ಉತ್ತರ ಕನ್ನಡ: ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಿಂದ ಕಾರವಾರಕ್ಕೆ ಪಾದಯಾತ್ರೆ
ಪಾದಯಾತ್ರೆ ಉದ್ದಕ್ಕೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಯಾರೇ ಮನವಿ ನೀಡಿದರೂ ಅದನ್ನು ಜಿಲ್ಲಾಧಿಕಾರಿಗೆ ತಲುಪಿಸುತ್ತೇವೆ. ಆದ್ದರಿಂದ ಪಾದಯಾತ್ರೆಗೆ ಜಿಲ್ಲೆಯ ಜನರು ಕೂಡಾ ಹರಸಿ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಶಿರಸಿ(ನ.03): ಜಿಲ್ಲೆಯ ಜನರ ಧ್ವನಿಯಾಗಿ ನಿಂತಿರುವ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಜಿಲ್ಲೆಯ ಜನರ ದಶಕಗಳ ಹೋರಾಟವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಿಂದ ಕಾರವಾರಕ್ಕೆ ಗುರುವಾರದಿಂದ ಕೈಗೊಂಡಿರುವ ಬೃಹತ್ ಪಾದಯಾತ್ರಗೆ ಹಿರಿಯ ಗಾಂಧಿವಾದಿ ಕಾಶಿನಾಥ ಮೂಡಿ ಶ್ರೀಮಾರಿಕಾಂಬಾ ದೇವಾಲಯದ ಎದುರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ನಮ್ಮಲ್ಲಿ ಒಗ್ಗಟ್ಟಿಲ್ಲದಿರುವ ಕಾರಣದಿಂದಾಗಿ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳು ಈ ವರೆಗೂ ಜೀವಂತವಾಗಿವೆ. ನಾವು ಚಪ್ಪಾಳೆ ಹೊಡೆದು ಮುಂದೆ ಕಳಿಸಿದ ನಂತರ ಅವರಿಗೆ ಬೆನ್ನು ತೋರಿಸಿ ಮನೆಗೆ ನಡೆಯುತ್ತೇವೆ. ಆದರೆ ಅನಂತಮೂರ್ತಿ ಹೆಗಡೆ ಅವರು ಕೈಗೊಂಡಿರುವ ಹೋರಾಟಕ್ಕೆ ಹಾಗಾಗದೆ ಅವರ ಬೆನ್ನಿಗೆ ಬೆನ್ನಾಗಿ ಸಾತ್ ನೀಡಬೇಕೆಂದು ಹೇಳಿದರು.
ಪಾದಯಾತ್ರೆ ರೂವಾರಿ ಅನಂತಮೂರ್ತಿ ಹೆಗಡೆ ಮಾತನಾಡಿ, ಘಟ್ಟದ ಮೇಲೆ, ಘಟ್ಟದ ಕೆಳಗೆ ಮಲ್ಲಿ ಸ್ಪೆಷಾಲಿಟಿ ಆಸ್ಪತ್ರೆಯ ಅವಶ್ಯಕತೆ ತೀರಾ ಇದೆ. ಆಸ್ಪತ್ರೆ ಇಲ್ಲದ ಕಾರಣದಿಂದಾಗಿ ದಿನಕ್ಕೆ ಐದಾರು ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಎಲ್ಲೆ ಅಪಘಾತಗಳಾದರೂ ತುರ್ತು ಚಿಕಿತ್ಸೆಯಿಲ್ಲದೇ ಎಷ್ಟೂ ರೋಗಿಗಳು ಜೀವ ಕಳೆದುಕೊಳ್ಳುತ್ತಿರುವುದನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ. ನಮ್ಮ ಗುರಿ ಜಿಲ್ಲೆಯಲ್ಕಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗುವಂತೆ ಮಾಡುವುದು ಮಾತ್ರ. ನಮ್ಮ ಹೋರಾಟಕ್ಕೆ ಸ್ವಾತಂತ್ರ್ಯ ಹೋರಾಟಗಾರರು, ಪರಿಸರವಾದಿಗಳು, ಪತ್ರಕರ್ತರು, ಆಟೋ ಚಾಲಕ ಮಾಲಕರು, ಕೂಲಿ ಕಾರ್ಮಿಕರು ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಬೆಂಬಲ ನೀಡಿದೆ. ಇಂದಿನಿಂದ ನಡೆಯುವ ಪಾದಯಾತ್ರೆ ನ. ೯ರಂದು ಕಾರವಾರದಲ್ಲಿ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.
ಉತ್ತರಕನ್ನಡ: ಸುಸಜ್ಜಿತ ಆಸ್ಪತ್ರೆಗೆ ಮಕ್ಕಳ ಬೇಡಿಕೆ
ಪಾದಯಾತ್ರೆ ಉದ್ದಕ್ಕೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಯಾರೇ ಮನವಿ ನೀಡಿದರೂ ಅದನ್ನು ಜಿಲ್ಲಾಧಿಕಾರಿಗೆ ತಲುಪಿಸುತ್ತೇವೆ. ಆದ್ದರಿಂದ ಪಾದಯಾತ್ರೆಗೆ ಜಿಲ್ಲೆಯ ಜನರು ಕೂಡಾ ಹರಸಿ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಸಮಿತಿ ಅಧಕ್ಷ ಉಪೆಂದ್ರ ಪೈ ಮಾತನಾಡಿ, ಕಳೆದ ಚುನಾವಣೆ ಸಂದರ್ಭದಲ್ಲಿಯೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಷಯ ಪ್ರಸ್ತಾಪವಾಗಿ ಕುಮಟಾದಲ್ಲಿ ಜಾಗ ನೋಡಲಾಗಿತ್ತು. ಆದರೆ ಚುನಾವಣೆ ಬಳಿಕ ಎನಾಯಿತೆಂದು ಯಾರಿಗೂ ತಿಳಿಯದಾಯಿತು. ಘಟ್ಟದ ಮೇಲೆ, ಕೆಳಗೆ ಬಡಜನರಿಗೆ ಅನುಕೂಲವಾಗುವ ರೀತಿಯಲ್ಲಿ ಅತ್ಯಾಧುನಿಕ ಮಾದರಿಯ ಆಸ್ಪತ್ರೆ ನಿರ್ಮಿಸಬೇಕು. ಈ ಕಾರ್ಯ ಆದಷ್ಟು ಬೇಗ ಪಾದಯಾತ್ರೆಯ ಮೂಲಕವಾಗಬೇಕಿದೆ ಎಂದು ತಿಳಿಸಿದರು.
ಸ್ಕೊಡವೆಸ್ ಸಂಸ್ಥೆಯ ಮುಖ್ಯಸ್ಥ ಡಾ. ವೆಂಕಟೇಶ ನಾಯ್ಕ ಮಾತನಾಡಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಅನಂತಮೂರ್ತಿ ಹೆಗಡೆ ಅವರ ಈ ಹೋರಾಟಕ್ಕೆ ನಾವೆಲ್ಲರೂ ಒಕ್ಕೂರಿಲಿನಿಂದ ಬೆಂಬಲಿಸಬೇಕಿದೆ ಎಂದರು.
ಪಾದಯಾತ್ರೆಯಲ್ಲಿ ಜಿಲ್ಲಾ ಜನಪರ ಒಕ್ಕೂಟದ ಅಧ್ಯಕ್ಷ ನಾಗೇಶ ನಾಯ್ಕ ಕಾಗಲ್, ದೊಡ್ನಳ್ಲಿ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ಹೆಗಡೆ ದೊಡ್ನಳ್ಳಿ, ಮನುವಿಕಾಸದ ಗಣಪತಿ ಹೆಗಡೆ, ಪರಮಾನಂದ ಹೆಗಡೆ ಸೇರಿದಂತೆ ಅನೇಕ ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.