Asianet Suvarna News Asianet Suvarna News

ಅಖಾಡದಲ್ಲಿ ಚಿರತೆಯಂತೆ ಓಡ್ತಿದ್ದ ರಾಸು ಅನಾರೋಗ್ಯದಿಂದ ಸಾವು: ಎತ್ತನ್ನ ನೋಡಲು ಆಗಮಿಸಿದ ನಾನಾ ಜಿಲ್ಲೆಯ ಜನ!

ರಾಜ್ಯದಲ್ಲೇ ಅತ್ಯಂತ ಪ್ರಸಿದ್ದ ಪಡೆದಿದ್ದ ಆ ಮೂಕಪ್ರಾಣಿ ಇದ್ದಾಗ ಒಂಟಿ ಸಲಗದಂತೆ ಬದುಕಿ ಸತ್ತಾಗ ಮಗುವಂತೆ ಸಾವಿರಾರು ಜನರನ್ನ ಆಕರ್ಷಿಸಿದೆ. ಮನುಷ್ಯರೋ-ಪ್ರಾಣಿಗಳೋ ಸತ್ತಾಗ ಬೇಜಾರಾಗುತ್ತೆ.

Ox Died of Illness at Chikkamagaluru gvd
Author
First Published Nov 25, 2023, 10:03 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ನ.25): ರಾಜ್ಯದಲ್ಲೇ ಅತ್ಯಂತ ಪ್ರಸಿದ್ದ ಪಡೆದಿದ್ದ ಆ ಮೂಕಪ್ರಾಣಿ ಇದ್ದಾಗ ಒಂಟಿ ಸಲಗದಂತೆ ಬದುಕಿ ಸತ್ತಾಗ ಮಗುವಂತೆ ಸಾವಿರಾರು ಜನರನ್ನ ಆಕರ್ಷಿಸಿದೆ. ಮನುಷ್ಯರೋ-ಪ್ರಾಣಿಗಳೋ ಸತ್ತಾಗ ಬೇಜಾರಾಗುತ್ತೆ. ಆದ್ರೆ, ಕೆಲ ವ್ಯಕ್ತಿ ಸತ್ತಾಗ ಜನ ಪಾಪಿ ಚಿರಾಯು ಅಂತಾರೆ. ಆದ್ರೆ, ಎತ್ತಿನಗಾಡಿ ರೇಸ್ ಅಖಾಡದಲ್ಲಿ ಕೊರಳಿಗೆ ನೊಗ ಹಾಕಿಕೊಂಡು ನಿಂತ್ರೆ ಸಿಂಹದ ಮರಿಯಂತೆ ಓಡ್ತಿದ್ದ ಈ ಗಗನ್ ಸಾವಿಗೆ ಮನೆಯವ್ರು-ಗ್ರಾಮಸ್ಥರ ಜೊತೆ ಹತ್ತಾರು ಜಿಲ್ಲೆಯ ಜನ ಕಂಬನಿ ಮಿಡಿದಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಕೆಂಪನಹಳ್ಳಿ ಗ್ರಾಮದ ಜಗದೀಶ್ ಎಂಬುವರ ಈ ಗಗನ್ ರಾಜ್ಯದಲ್ಲೇ ಎಲ್ಲೇ ಎತ್ತಿನಗಾಡಿ ರೇಸ್ ನಡೆದ್ರು ಅಲ್ಲಿ ಹಾಜರ್. ಅಖಾಡದಲ್ಲಿ ಈತನ ವೇಗಕ್ಕೆ ಸರಿಸಾಟಿಯೇ ಇರಲಿಲ್ಲ.

ಮೆರವಣಿಗೆ ಮಾಡಿ ಅಂತ್ಯಸಂಸ್ಕಾರ: ಕಳೆದೊಂದು ವಾರದಿಂದ ಅನಾರೋಗ್ಯಕ್ಕೀಡಾಗಿದ್ದ ಎತ್ತು ಇಂದು ಕೊನೆಯುಸಿರೆಳೆದಿದೆ. ಕೆಂಪನಹಳ್ಳಿಯ ಜಗದೀಶ್ ಎಂಬುವರು ಏಳು ಲಕ್ಷ ಕೊಟ್ಟು ಈ ಹಳ್ಳಿಕಾರ್ ತಳಿಯ ರಾಸುವನ್ನ ತಂದು ಸಾಕಿದ್ದರು. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಎತ್ತಿನಗಾಡಿ ರೇಸ್ ನಡೆದ್ರು ಅಲ್ಲಿ ಈ ಗಗನ್ ಹಾಜರ್. ಏಳು ಲಕ್ಷದ ಈ ಗಗನ್ 15 ಲಕ್ಷಕ್ಕೂ ಅಧಿಕ ಹಣವನ್ನ ರೇಸ್ನಲ್ಲಿಯೇ ಗೆದ್ದಿದೆ. ಬರೀ ದುಡ್ಡಲ್ಲ. ಒಂದು ಬೈಕ್ ಹಾಗೂ 50 ಗ್ರಾಂ ಚಿನ್ನವನ್ನೂ ಗೆದ್ದಿದೆ. ಇಂದು ರಾಸು ಸಾವನ್ನಪ್ಪಿದ್ದರಿಂದ ಊರಿನ ಜನ ಎತ್ತಿಗೆ ಊರಿನ ತುಂಬಾ ಮೆರವಣಿಗೆ ಮಾಡಿ ಅಂತ್ಯಸಂಸ್ಕಾರ ನಡೆಸಿದ್ದಾರೆ. 

ಚಾರ್ಮಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಕ್ಕೆ 8 ಜನರ ಮೇಲೆ ಕೇಸ್!

ಅಂತಿಮ ದರ್ಶನ ಪಡೆದು ಕಂಬನಿ: ಕಳೆದೊಂದು ವಾರದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗಗನ್ ಗೆ ಮನೆಯವರು ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ಏನೂ ಆಗಿಲ್ಲ. ಚೆನ್ನಾಗಿದೆ. ಉಳಿಯುತ್ತೆ ಎಂದು ಹೇಳಿದ್ದಾರೆ. ಆದರೆ, ಇಂದು ಸಾವನ್ನಪ್ಪಿದೆ. ಅಖಾಡದಲ್ಲಿ ಚಿರತೆಯಂತೆ ಓಡ್ತಿದ್ದ ಗಗನ್ ನೂರಾರು ಬಹುಮಾನಗಳನ್ನ ಗೆದ್ದು ಇಡೀ ರಾಜ್ಯಕ್ಕೆ ಚಿರಪರಿಚಿತ. ಈ ಗಗನ್ ಸಾವನ್ನಪ್ಪಿದೆ ಎಂದು ತಿಳಿಯುತ್ತಿದ್ದಂತೆ ಅಖಾಡದಲ್ಲಿ ಇದರ ವೇಗಕ್ಕೆ ಮರುಳಾಗಿದ್ದ ಮಂಡ್ಯ, ಮೈಸೂರು, ಹಾಸನ, ಚಿತ್ರದುರ್ಗ ಸೇರಿದಂತೆ ನಾನಾ ಜಿಲ್ಲೆಯ ನೂರಾರು ಜನ ಬಂದು ಇದರ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದಿದ್ದಾರೆ. 

ಅನುಮತಿ ಪಡೆದ ಕಲ್ಲು ಗಣಿಗಾರಿಕೆಯಿಂದ ಕಾಫಿನಾಡ ಜನರಿಗೆ ಸಂಕಷ್ಟ: ಹೊಸದು-ಹಳೆದು ಎಲ್ಲಾ ಮನೆ ಬಿರುಕು!

ಅಖಾಡದಲ್ಲಿ ಹುಲಿಯಂತಿದ್ದ ಈ ಗಗನ್ ಹೊರಗಡೆ ಮಗುವಿನಂತಿದ್ದ. ಒಬ್ಬರಿಗಾದ್ರು ತಿವಿದದ್ದು, ಭಯ ಬೀಳಿಸಿದ ಉದಾಹರಣೆ ಇಲ್ಲ. ಓಟದಲ್ಲಿ ಎಷ್ಟು ಫೇಮಸ್ ಆಗಿತ್ತೋ ಅಷ್ಟೆ ಫೇಮಸ್ ತನ್ನ ಸೌಮ್ಯತೆಯಿಂದಲೂ ಇತ್ತು. ಹಾಗಾಗಿ, ಇಂದು ಅದರ ಸಾವಿಗೆ ನಾನಾ ಜಿಲ್ಲೆಯ ಜನ ಸಾಕ್ಷಿಯಾಗಿದ್ದರು. ಒಟ್ಟಾರೆ, ದೂರದ ಸಂಬಂಧಿ ಸತ್ರೇನೆ ಮಂಡ್ಯ-ಮೈಸೂರಿಂದ ಜನ ಬರೋದು ಕಷ್ಟ. ಅಂತದ್ರಲ್ಲಿ 15-20 ವರ್ಷ ಬದುಕುವ, ಅಖಾಡದಲ್ಲಿ ನೋಡಿದ ಒಂದೆರಡು ದಿನದ ಪ್ರೀತಿಗೆ ಎತ್ತನ್ನ ನೋಡೋದಕ್ಕೆ ರಾಜ್ಯದ ನಾನಾ ಭಾಗಗಳಿಂದ ನೂರಾರು ಜನ ಬಂದಿರೋದು ನಿಜಕ್ಕೂ ಬದುಕಿನ ಸಾರ್ಥಕ.

Follow Us:
Download App:
  • android
  • ios