Asianet Suvarna News Asianet Suvarna News

ಅನುಮತಿ ಪಡೆದ ಕಲ್ಲು ಗಣಿಗಾರಿಕೆಯಿಂದ ಕಾಫಿನಾಡ ಜನರಿಗೆ ಸಂಕಷ್ಟ: ಹೊಸದು-ಹಳೆದು ಎಲ್ಲಾ ಮನೆ ಬಿರುಕು!

ಕಳೆದ ಆರು ವರ್ಷಗಳ ಹಿಂದೆ ಆ ಊರಲ್ಲಿ ಯಾವ ಸಮಸ್ಯೆಯೂ ಇರಲಿಲ್ಲ. ಎಲ್ಲವೂ ಸರಿ ಇತ್ತು. ಆದ್ರೀಗ, ಆ ಊರು ಮೊದಲಿನಂತಿಲ್ಲ. ಹಳ್ಳಿಯಲ್ಲಿರೋ ಅಪಾರ ಪ್ರಮಾಣದ ಕಲ್ಲಿನ ನಿಕ್ಷೇಪಹಗಳೇ ಆ ಊರಿಗೆ ಶಾಪವಾಗಿವೆ. 

Chikkamagaluru people suffering due to sanctioned quarrying gvd
Author
First Published Nov 24, 2023, 10:43 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ನ.24): ಕಳೆದ ಆರು ವರ್ಷಗಳ ಹಿಂದೆ ಆ ಊರಲ್ಲಿ ಯಾವ ಸಮಸ್ಯೆಯೂ ಇರಲಿಲ್ಲ. ಎಲ್ಲವೂ ಸರಿ ಇತ್ತು. ಆದ್ರೀಗ, ಆ ಊರು ಮೊದಲಿನಂತಿಲ್ಲ. ಹಳ್ಳಿಯಲ್ಲಿರೋ ಅಪಾರ ಪ್ರಮಾಣದ ಕಲ್ಲಿನ ನಿಕ್ಷೇಪಹಗಳೇ ಆ ಊರಿಗೆ ಶಾಪವಾಗಿವೆ. ಸಂಜೆಯಾದ್ರೆ ಶುರುವಾಗುವ ಸ್ಫೋಟಕ್ಕೆ ಜನ ಮನೆಯಿಂದ ಹೊರಗೆ ಓಡಿಬರುವಂತಹಾ ಸ್ಥಿತಿ ನಿರ್ಮಾಣವಾಗಿದೆ. ಊರಲ್ಲಿ ಧೂಳೋ... ಧೂಳೋ... ಮನೆಯ ಗೋಡೆಗಳು ಬಿರುಕು ಬಿಡ್ತಿದ್ದು ಜನ ನಾವು ಜೀವನ ಮಾಡೋದು ಹೇಗೆಂದು ಕಣ್ಣೀರಿಡ್ತಿದ್ದಾರೆ. ಆದ್ರೆ, ಇಷ್ಟಕ್ಕೆಲ್ಲಾ ಕಾರಣ ಕಲ್ಲು ಗಣಿಗಾರಿಕೆ. ಅಂದು ಹೇಳಿದ್ದು ಒಂದು. ಇಂದು ಆಗ್ತಿರೋದು ಮತ್ತೊಂದು. ಅದು ಕೂಡ ಜಿಲ್ಲೆಯ ಪ್ರಭಾವಿ ರಾಜಕಾರಣಿ ಹೆಸರಿನಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ.

ಕಲ್ಲು ಗಣಿಗಾರಿಕೆಗೆ ಕಂಗಾಲದ ಹಳ್ಳಿಗರು: ಚಿಕ್ಕಮಗಳೂರು ತಾಲೂಕಿನ ನಾಗರಹಳ್ಳಿ, ತಿಮ್ಮನಹಳ್ಳಿಯಲ್ಲಿ ಬಿರುಕು ಬಿಟ್ಟಿರೋ ಮನೆಗಳು. ಕುಸಿಯೋ ಹಂತದಲ್ಲಿರೋ ಶಾಲಾ ಕಾಂಪೌಂಡ್. ದೇವಸ್ಥಾನದ ಮೇಲ್ಛಾವಣಿಗೂ ಇಲ್ಲ. ಜೊತೆಗೆ, ಹೊಸ ಮನೆಯೂ ಬಿರುಕು, ಹಳೆಯದ್ದೂ ಬಿರುಕು. ಬೆಳೆಗಳ ಮೇಲೆ ಧೂಳೋ... ಧೂಳೋ.... ಇಂತಹ ಪರಿಸ್ಥಿತಿಯನ್ನು ಜನರು ಎದುರಿಸುತ್ತಿದ್ದಾರೆ.  ಬರೋಬ್ಬರಿ 300ಕ್ಕೂ ಅಧಿಕ ಮನೆಗಳಿರೋ ಈ ಗ್ರಾಮದಲ್ಲಿ ಬಾಯ್ಬಿಡದ ಮನೆಗಳೇ ಇಲ್ಲ. ಯಾಕಂದ್ರೆ, ಈ ಗ್ರಾಮದಿಂದ ಕೇವಲ 1 ಕಿ.ಮೀ. ಮೀಟರ್ ದೂರದಲ್ಲಿ ಬೃಹತ್ ಗಣಿಗಾರಿಕೆ ನಡೆಯುತ್ತಿದೆ. 

ಕಾಡಾನೆ ದಾಳಿಗೆ ಮೂವರ ಬಲಿ: ಮಲೆನಾಡಿಗರಿಗೆ ಸುಳ್ಳು ಹೇಳಿದ್ರಾ ಸಿಎಂ ಸಿದ್ದರಾಮಯ್ಯ?

ಇದು ಅಕ್ರಮವೋ-ಸಕ್ರಮವೋ. ಆದ್ರೆ, ಸಮಸ್ಯೆ ಅಂತು ಗ್ಯಾರಂಟಿ. ಕಲ್ಲು ಗಣಿಗಾರಿಕೆಯಿಂದ ಈ ಗ್ರಾಮದಲ್ಲಿ ಇತ್ತೀಚಿಗೆ ಕಟ್ಟಿದ ಮನೆಗಳು ಬಿರುಕು ಬಿಟ್ಟಿವೆ. ಕೆಲವರು ಬಿರುಕು ಬಿಟ್ಟ ಗೋಡೆಗಳನ್ನ ಎಷ್ಟು ಬಾರಿ ದುರಸ್ತಿ ಮಾಡಿಸೋದು ಅಂತ ಹಾಗೇ ಸುಮ್ಮನಾಗಿದ್ದಾರೆ. ಮಕ್ಕಳಿಗಾಗಿ ಹೊಟ್ಟೆ-ಬಟ್ಟೆ ಕಟ್ಟಿ ಕಟ್ಟಿದ ಮನೆ ಕಥೆ ಹೀಗಾದ್ರೆ, ಹೊಲದಲ್ಲಿ ಯಾವ ಬೆಳೆಯೂ ಸರಿಯಾಗಿ ಬರಲ್ಲ. ಬೆಳೆಗಳ ಮೇಲೆ ಧೂಳು ಕೂತು ಅರ್ಧ ಬೆಳೆ ಹಾಳಾಗ್ತಿದೆ. ಕುಡಿಯೋ ನೀರಿಗೂ ಸಮಸ್ಯೆ. ದನಕರುಗಳಿಗೂ ಮೇವು-ನೀರಿನ ಸಮಸ್ಯೆ. ಎಲ್ಲದಕ್ಕೂ ಮೂಲ ಧೂಳು...ಧೂಳು.... ಹೀಗಾದ್ರೆ ನಾವು ಬದುಕೋದು ಹೇಗೆಂಬುದು ಹಳ್ಳಿಗರ ಅಳಲು. 

ಸರ್ಕಾರ ಹಾಗೂ ಕ್ರಷರ್ ಮಾಲೀಕರ ವಿರುದ್ಧ ಆಕ್ರೋಶ: ನಾಗರಹಳ್ಳಿ  ಸರ್ವೇ ನಂಬರ್ 167ರಲ್ಲಿ ಆರು ಕ್ರಷರ್ ಇದೆ. ಅನುಮತಿ ಪಡೆದಿರೋದು ಒಂದಕ್ಕಾದ್ರೆ. ಅಲ್ಲಿ ಮಾಡ್ತಿರೋ ಕೆಲಸ ಮತ್ತೊಂದು ಎಂದು ಸ್ಥಳಿಯರು ಸರ್ಕಾರ ಹಾಗೂ ಕ್ರಷರ್ ಮಾಲೀಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 6 ಕಲ್ಲು ಗಣಿಗಾರಿಕೆಯಲ್ಲಿ ಜಿಲ್ಲೆಯ ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡರ ಪತಿ ಶಾಂತೇಗೌಡರ ಹೆಸರಿನಲ್ಲಿರುವ ಒಂದು ಗಣಿಗಾರಿಕೆ ನಡೆಯುತ್ತಿದೆ.

ನೂರಾರು ಅಡಿ ಗುಂಡಿ ತೋಡಿ ಚೀಲಗಟ್ಟಲೇ ಡೈನಾಮೈಟ್ ಇಟ್ಟು ಬ್ಲಾಸ್ ಮಾಡ್ತಿರೋದ್ರಿಂದ ನಾಗರಾಳು, ತಿಮ್ಮನಹಳ್ಳಿಯ ಜನ ಸಂಕಷ್ಟಕ್ಕೀಡಾಗಿದ್ದಾರೆ. ಗೈಡ್ಲೈನ್ಸ್ಗಳನ್ನ ವೈಲೆನ್ ಮಾಡಿ ಬ್ಲಾಸ್ಟ್ ಮಾಡ್ತಿರೋದ್ರಿಂದ ಹಳ್ಳಿಗರಿಗೆ ಜೀವನ ಮಾಡೋದೇ ಕಷ್ಟವಾಗಿದೆ. ವಾರದಲ್ಲಿ ಎರಡ್ಮೂರು ಬಾರಿ ಒಬ್ಬರಾದ ಮೇಲೊಬ್ಬರು ಬ್ಲಾಸ್ಟಿಂಗ್ ಮಾಡ್ತಾರೆ. ಆಗ ಭಾರೀ ಶಬ್ಧ ಬರುತ್ತೆ. ಭೂಮಿಯೇ ಅಲುಗಾಡಿದಂತೆ ಆಗುತ್ತೆ. ಮನೆಯಲ್ಲಿ ಇರಲು ಆಗಲ್ಲ. ಪಾತ್ರೆಗಳೆಲ್ಲಾ ಕೆಳಗಿ ಬೀಳುತ್ತೆ. ಬೆಳೆ ಇಲ್ಲ, ಜನ-ಜಾನುವಾರುಗಳಿಗೆ ಕುಡಿಯೋಕೆ ನೀರಿಲ್ಲ. ಗ್ರಾಮದ ಚಿಕ್ಕಮಕ್ಕಳು ಸ್ಫೋಟದ ಶಬ್ಧಕ್ಕೆ ಬೆಚ್ಚಿ ಬೀಳ್ತಾವೆ. 

ಅಕ್ರಮ ಭೂ ಮಂಜೂರು ಪ್ರಕರಣ: ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದರೂ ಪ್ರಯೋಜವಿಲ್ಲ!

ಶಾಲೆಗೆ ಜಾಗ ಕೇಳುದ್ರೆ ಇಲ್ಲ ಅಂತಾರೆ. ಗಣಿಗಾರಿಕೆಗೆ ಕೇಳಿದ ಕೂಡಲೇ ಗೋಮಾಳ ಜಾಗ ಕೊಡ್ತಾರೆ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಒಟ್ಟಾರೆ, ಸಕ್ರಮದಲ್ಲೂ ಅಕ್ರಮವಾಗಿ ಅಳತೆ ಮೀರಿ ರಾಜರೋಷವಾಗಿ ನಡೆಯುತ್ತಿರೋ ಕಲ್ಲುಗಣಿಗಾರಿಕೆಯನ್ನ ನೋಡಿದ್ರೆ ನಿಜಕ್ಕೂ ಎಂತವರಿಗೂ ಕೂಡ ಒಂದು ಕ್ಷಣ ಎದೆ ಝಲ್ ಅನ್ನದೇ ಇರದು. ಅಷ್ಟು ದೊಡ್ಡ ಪ್ರಮಾಣದಲ್ಲಿ ಬಂಡೆಗಳನ್ನ ಸ್ಫೋಟಿಸಿ ಗಣಿಗಾರಿಕೆ ನಡೆಸಲಾಗುತ್ತಿದೆ. ಕೂದಲೆಳೆ ಅಂತರದಲ್ಲಿ ಗ್ರಾಮವಿದ್ರು ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಎಲ್ಲಾ ಗೊತ್ತಿದ್ದು ಗೊತ್ತಿಲ್ಲದಂತೆ ಜಾಣ ಕಿವುಡರಾಗಿರೋದು ನಿಜಕ್ಕೂ ದುರಂತ. ನೂರಾರು ವರ್ಷಗಳಿಂದ ನೆಮ್ಮದಿ ಬದುಕು ಕಟ್ಟಿಕೊಂಡಿದ್ದ ಹಳ್ಳಿಗರು ಆರೇ ವರ್ಷಕ್ಕೆ ಬದುಕಿನ ಬಗ್ಗೆ ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ.

Follow Us:
Download App:
  • android
  • ios