ರೋಣ[ಜ.22]: ಎತ್ತಿನ ಚಕ್ಕಡಿ ಓಟದ ಸ್ಪರ್ಧೆ, ಗಡ್ಡಿ ಚಕ್ಕಡಿ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನ ಗೆದ್ದಿದ್ದ, ಚಿನ್ನದ ಎತ್ತು ಎಂದೇ ಪ್ರಸಿದ್ಧಿ ಪಡೆ​ದಿ​ದ್ದ ತಾಲೂಕಿನ ಜಿಗಳೂರ ಗ್ರಾಮದ ಲಕ್ಷ್ಮಣ (ಎತ್ತು) ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದು, ಇಡೀ ಗ್ರಾಮವೇ ಕಣ್ಣೀರಾಗಿದೆ.

ಕಳೆದ 15 ವರ್ಷಗಳಿಂದ ಗದಗ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ರಾಯಚೂರು, ಹಾವೇರಿ, ಕಲ್ಬುರ್ಗಿ ಹೀಗೆ ಯಾವುದೇ ಜಿಲ್ಲೆ, ತಾಲೂಕುಗಳಲ್ಲಿ ಎತ್ತಿನ ಚಕ್ಕಡಿ ಓಟದ ಸ್ಪರ್ಧೆ, ಗಡ್ಡಿ ಚಕ್ಕಡಿ ಓಟದ ಸ್ಪರ್ಧೆ ಇತ್ತೆಂದರೆ ಅಲ್ಲಿ ತಾಲೂಕಿನ ಜಿಗಳೂರ ಗ್ರಾಮದ ರಾಮ ಮತ್ತು ಲಕ್ಷ್ಮಣ ಎಂಬ ಜೋಡೆತ್ತುಗಳು ಹಾಜರಿದ್ದು, ಸ್ಪರ್ಧೆಯಲ್ಲಿ ಚಿನ್ನದ ಪದಕ ತನ್ನಗಾಗಿಸಿಕೊಳ್ಳುತ್ತಿದ್ದವು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ 15 ವರ್ಷಗಳಲ್ಲಿ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಯರೇಗೋನಾಳದಲ್ಲಿ ಏರ್ಪಡಿಸಿದ 14 ಕಿ.ಮೀ ದೂರ ಚಕ್ಕಡಿ ಓಟದ ಸ್ಪರ್ಧೆಯಲ್ಲಿ 14 ಕಿಮೀಯನ್ನು ಕೇವಲ 28 ನಿಮಿಷದಲ್ಲಿ ಕ್ರಮಿಸಿ ಪ್ರಥಮ ಸ್ಥಾನ, ಬೇವೂರ ಗ್ರಾಮದಲ್ಲಿ ಜರುಗಿದ ಸ್ಪರ್ಧೆಯಲ್ಲಿ 10 ಕಿಮೀಯ​ನ್ನು ​ಕೇವಲ 25 ನಿಮಿಷದಲ್ಲಿ ಕ್ರಮಿಸಿ ಪ್ರಥಮ, ಭಗವತಿಯಲ್ಲಿ ನಡೆದ ಸ್ಪರ್ಧೆಯಲ್ಲಿ 14 ಕಿ.ಮೀ ದೂರವನ್ನು ಕೇವಲ 27 ನಿಮಿಷದಲ್ಲಿ ಕ್ರಮಿಸಿ ಪ್ರಥಮ ಸ್ಥಾನ, ತಾಲೂಕಿನ ಅಸೂಟಿ, ಮಾಡಲಗೇರಿ, ರೋಣ, ಹಿರೇಹಾಳ ಸೇರಿದಂತೆ ಎಲ್ಲಡೆ ಭಾಗವಹಿಸಿ ಚಿನ್ನ ಗೆಲ್ಲುವ ಮೂಲಕ ಎಲ್ಲಡೆ ಮೆಚ್ಚುಗೆ ಗಳಿಸಿದ ರಾಮ ಮತ್ತು ಲಕ್ಷ್ಮಣ ಜೋಡೆತ್ತುಗಳು ಸ್ಪರ್ಧೆಗಿಳಿದಿವೆ ಎಂದು ತಿಳಿದರೆ ಸಾಕು, ಸ್ಪರ್ಧೆ ನೋಡಲು ಅಪಾರ ಸಂಖ್ಯೆ ಪ್ರೇಕ್ಷಕರು ಸೇರುತ್ತಿದ್ದರು.

ಹೀಗೆ ಜನರ ಮನಸ್ಸು ಗೆದ್ದ ರಾಮ ಎನ್ನುವ ಎತ್ತು 2 ವರ್ಷದ ಹಿಂದೆ ಸಾವನ್ನಪ್ಪಿತ್ತು. ರಾಮ ಸಾವ​ನ್ನ​ಪ್ಪಿದ ಬಳಿಕ ಈ ಲಕ್ಷ್ಮಣ ತನಗೊಬ್ಬ ಸಾತಿಯನ್ನು ಕಟ್ಟಿಕೊಂಡು ಎಲ್ಲೆಂದರಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಭೇಟೆ ಮುಂದುವರಿಸಿತ್ತು. ಕಳೆದ ವರ್ಷದ ಹಿಂದೆ ರೋಣ ಪಟ್ಟಣದಿಂದ ಯಲ್ಲಮ್ಮನ ಗುಡ್ಡಕ್ಕೆ ಹೋಗಿ ಬರುವ ಒಟ್ಟು 160 ಕಿ.ಮೀ ಸ್ಪರ್ಧೆಯನ್ನು ಕೇವಲ 20 ಗಂಟೆ​ಗ​ಳಲ್ಲಿ ಪೂರೈಸುವ ಮೂಲಕ ಪ್ರಶ​ಸ್ತಿ​ಯನ್ನು ತನ್ನ​ದಾ​ಗಿ​ಸಿ​ಕೊಂಡಿತ್ತು. ಹೀಗೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಜನ​ಮೆ​ಚ್ಚುಗೆ ಗಿಟ್ಟಿಸಿಕೊಂಡ ಎತ್ತು ಮಂಗಳವಾರ ಅಸುನೀಗಿದ್ದು ಗ್ರಾಮಸ್ಥರಲ್ಲಿ, ಸುತ್ತಲಿನ ಗ್ರಾಮಗಳ ಪ್ರೇಕ್ಷರಕರಲ್ಲಿ ಅಪಾರ ನೋವು ತರಿಸಿದೆ.

ಅದ್ಧೂರಿ ಮೆರವಣಿಗೆ:

ಚಿನ್ನದ ಎತ್ತು ಲಕ್ಷ್ಮಣ ಅಸುನೀಗುತ್ತಿದ್ದಂತೆ ಇಡೀ ಗ್ರಾಮವೇ ಕಣ್ಣೀರು ಹಾಕಿತು. ಮುದ್ದಿನ ಎತ್ತಿನ ಅಂತ್ಯ ಸಂಸ್ಕಾರಕ್ಕೂ ಮೊದಲು ಟ್ರ್ಯಾಕ್ಟರ್‌ ಮೂಲಕ ಗ್ರಾಮದಾದ್ಯಂತ ಮೆರವಣಿಗೆ ಮಾಡಲಾಯಿತು. ಬಳಿಕ ಜಿಗಳೂರ ಗ್ರಾಮ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ದ್ವಾರ ಬಾಗಿಲು (ಕಮಾನು ) ಬಳಿ ಸಂಜೆ ಸಕಲ ಪೂಜಾ ಕೈಂಕರ್ಯದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಮೆರವಣಿಗೆಯಲ್ಲಿ ಬಾಬುಗೌಡ ಪಾಟೀಲ, ಶಿದ್ಲಿಂಗಪ್ಪ ಬಸೆವಡೆಯರ, ಗುರಲಿಂಗಪ್ಪ ಕುರಡಗಿ, ಬಸವರಾಜ ಹುನಗುಂದ, ಸುರೇಶ ಹೈಗಾರ, ಮಲ್ಲಪ್ಪ ಬೆನ್ನೂರ, ತಿಪ್ಪಣ್ಣ ಬಸೆವಡೆಯರ, ಶಿವಾನಂದ ಬಡಿಗೇರ, ಶರಣಪ್ಪ ನಾಗರಾಳ ಸೇರಿದಂತೆ ಕುಮಾರೇಶ್ವರ ಭಜನಾ ಸಂಘ, ಗಡಾ ದುರ್ಗಾಂಬಿಕಾ ಭಜನಾ ಸಂಘ, ದುರ್ಗಾಂಬಿಕಾ ಡೊಳ್ಳಿನ ಮೇಳದವರು ಭಾಗವಹಿಸಿದ್ದರು.

ಕಳೆದ 15 ವರ್ಷಗಳಿಂದ ರಾಮ ಮತ್ತು ಲಕ್ಷ್ಮಣ ಎಂಬ ಜೋಡೆತ್ತುಗಳು ರಾಜ್ಯದ ಯಾವುದೇ ಭಾಗದಲ್ಲಿ ಚಕ್ಕಡಿ ಓಡಿಸುವ ಸ್ಪರ್ಧೆ, ಗಡ್ಡಿ ಚಕ್ಕಡಿ ಓಡಿಸುವ ಸ್ಪರ್ಧೆ ಇದ್ದಲ್ಲಿ, ಅಲ್ಲಿ ಭಾಗ ವಹಿಸಿ ಪ್ರಥಮ ಸ್ಥಾನ ಪಡೆಯುತ್ತಿದ್ದವು. ಕಳೆದ 2 ವರ್ಷದಿಂದ ರಾಮ ಎನ್ನುವ ಎತ್ತು ಸಾವನಪ್ಪಿತು. ಮಂಗಳವಾರ ಬೆಳಗ್ಗೆ ಲಕ್ಷ್ಮಣ(ಎತ್ತು) ಸಾವನ್ನಪಿದ್ದು ಅತೀವ ದುಖಃ ತಂದಿದೆ ಎಂದು ಚಿನ್ನದ ಎತ್ತು ಲಕ್ಷ್ಮಣನ ಮಾಲೀಕ ಬಸವರಾಜ ಓಲೇಕಾರ ಹೇಳಿದ್ದಾರೆ.(ಚಿತ್ರ: ಸಾಂದರ್ಭಿಕ ಚಿತ್ರ)