ಬೆಂಗಳೂರು(ಜು.19): ರಾಜಧಾನಿ ಬೆಂಗಳೂರಿನಲ್ಲಿ ಶನಿವಾರವೂ ಎರಡು ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, 49 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಶನಿವಾರ ನಗರದಲ್ಲಿ ಒಟ್ಟು 2,125 ಹೊಸ ಸೋಂಕು ಪ್ರಕರಣ ಪತ್ತೆಯಾಗಿವೆ. ಈ ಪೈಕಿ 1,307 ಪುರುಷರು, 818 ಮಂದಿ ಮಹಿಳೆಯರಾಗಿದ್ದಾರೆ. ಈ ಮೂಲಕ ಬೆಂಗಳೂರಿನ ಒಟ್ಟು ಸೋಂಕಿತರ ಸಂಖ್ಯೆ 29,621ಕ್ಕೆ ಏರಿಕೆಯಾಗಿದೆ.

ಬೆಸ್ಕಾಂ 8 ಸಿಬ್ಬಂದಿಗೆ ಸೋಂಕು, 1912 ಸಹಾಯವಾಣಿ ಸಿಗಲ್ಲ, ಈ ನಂಬರ್‌ಗೆ ವಾಟ್ಸಾಪ್ ಮಾಡಿ

ಶನಿವಾರ ಮೃತಪಟ್ಟ49 ಮಂದಿಯಲ್ಲಿ 31 ಮಂದಿ ಪುರುಷರು, 18 ಮಹಿಳೆಯರಾಗಿದ್ದಾರೆ. ಈ ಪೈಕಿ ಏಳು ಮಂದಿ 50 ವರ್ಷದೊಳಗಿನವರಾಗಿದ್ದಾರೆ, ಅದರಲ್ಲಿ ಮೂರು ಮಂದಿ ಮಹಿಳೆಯರು, ನಾಲ್ವರು ಪುರುಷರಾಗಿದ್ದಾರೆ. ಇದರಲ್ಲಿ 20 ವರ್ಷ ಯುವತಿ ಹಾಗೂ 22 ವರ್ಷದ ಯುವಕ ಇದ್ದಾರೆ. ಈ ಮೂಲಕ ಮೃತರ ಸಂಖ್ಯೆ 631ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ನಾಲ್ಕು ದಿನದ ಬಳಿಕ 50ಕ್ಕಿಂತ ಕಡಿಮೆ ಸಾವು

ಜುಲೈ 13ರಂದು ಬೆಂಗಳೂರಿನಲ್ಲಿ 47 ಮಂದಿ ಮೃತಪಟ್ಟಿದ್ದರು. ಅದಾದ ಬಳಿಕ ಶುಕ್ರವಾರ ವರೆಗೆ ಏರುಮುಖವಾಗಿ ಸಾಗಿದ ಸಾವಿನ ಸಂಖ್ಯೆ 75ವರೆಗೆ ತಲುಪಿತ್ತು. ಶನಿವಾರ ಮತ್ತೆ 49ಕ್ಕೆ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿಯಾಗಿದೆ.

ಸಿಲಿಂಡರ್‌ನೊಂದಿಗೆ ಆಸ್ಪತ್ರೆಗಳಿಗೆ ಅಲೆದ ರೋಗಿ

ಶನಿವಾರ ಒಟ್ಟು 250 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 6540ಕ್ಕೆ ಏರಿಕೆಯಾಗಿದ್ದು, ಇನ್ನೂ 22,449 ಸಕ್ರಿಯ ಪ್ರಕರಣ ಇವೆ. ನಗರದ ವಿವಿಧ ಆಸ್ಪತ್ರೆಯಲ್ಲಿ ಇನ್ನೂ 332 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.