ಧಾರವಾಡ(ಆ.03): ಹೆಚ್ಚೆಚ್ಚು ಕೋವಿಡ್‌ ಪರೀಕ್ಷೆಗಳನ್ನು ಮಾಡಿ ಆದಷ್ಟು ಶೀಘ್ರ ಜಿಲ್ಲೆಯಿಂದ ಕೊರೋನಾ ವೈರಸ್‌ ಓಡಿಸಲು ಜಿಲ್ಲಾಡಳಿತ ರ‍್ಯಾಪಿಡ್ ಆ್ಯಂಟಿಜನ್‌ ಪರೀಕ್ಷೆಗೆ ಮುಂದಾಗಿದೆ. ಇದು ಉತ್ತಮ ಕಾರ್ಯವಾದರೂ ಈ ಕ್ರಮವು ವ್ಯಾಪಾರಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.

ಕೆಮ್ಮು, ನೆಗಡಿ, ಜ್ವರ, ಶೀತದ ಲಕ್ಷಣಗಳು ಇದ್ದರೆ ಕೋವಿಡ್‌ ತಪಾಸಣೆ ಮಾಡಿಸಿಕೊಳ್ಳಿ ಎಂದು ರ‍್ಯಾಪಿಡ್ ಪರೀಕ್ಷೆ ಮಾಡುವ ವಾಹನದ ಮೇಲೆ ಬರೆಯಲಾಗಿದೆ. ಆದರೆ, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಾರುಕಟ್ಟೆಯಲ್ಲಿನ ಎಲ್ಲ ಅಂಗಡಿಗಳ ಮಾಲೀಕರು, ಸಿಬ್ಬಂದಿ ಎಲ್ಲರಿಗೂ ತಪಾಸಣೆ ಮಾಡಲಾಗುತ್ತಿದೆ. ಪೊಲೀಸರು, ಪಾಲಿಕೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಒಂದು ರೀತಿಯಲ್ಲಿ ಒತ್ತಾಯಪೂರ್ವಕವಾಗಿ ನಮ್ಮ ಮೇಲೆ ಪರೀಕ್ಷೆ ಮಾಡುತ್ತಿದ್ದಾರೆ ಎಂದು ವ್ಯಾಪಾರಸ್ಥರು ದೂರುತ್ತಿದ್ದಾರೆ.

ಸೋಂಕಿತ ಮೃತಪಟ್ಟು 2 ದಿನ ಬಳಿಕ ಕರೆ, 9 ದಿನದ ಬಳಿಕ ಮನೆ ಸೀಲ್‌ಡೌನ್; ಆರೋಗ್ಯ ಸಿಬ್ಬಂದಿ ಯಡವಟ್ಟು

ಇತ್ತೀಚೆಗೆ ಯಾವುದೇ ಲಕ್ಷಣಗಳು ಇಲ್ಲದೇ ಇದ್ದರೂ ಪರೀಕ್ಷೆ ವೇಳೆ ಪಾಸಿಟಿವ್‌ ದೃಢಪಡುತ್ತಿರುವ ಕಾರಣ ವ್ಯಾಪಾರಸ್ಥರು ನಮಗೂ ಕೊರೋನಾ ಬಂದು ಬಿಡುತ್ತದೆ ಎಂದು ಪರೀಕ್ಷೆಗೆ ಹೆದರಿ ಅಂಗಡಿಗಳನ್ನು ಮುಚ್ಚಿರುವ ಹಲವು ನಿದರ್ಶನಗಳು ಅವಳಿ ನಗರದಲ್ಲಿ ನಡೆದಿವೆ. ಒಂದು ರೀತಿಯಲ್ಲಿ ಆ್ಯಂಟಿಜನ್‌ ಪರೀಕ್ಷಾ ವಾಹನ ಅಂಗಡಿ ಬಳಿ ಬರುವುದರ ಮುಂಚೆಯೇ ಅಂಗಡಿ ಬಾಗಿಲು ಹಾಕುತ್ತಿದ್ದು, ವ್ಯಾಪಾರಸ್ಥರು ಈ ಪರೀಕ್ಷೆಗೆ ಒಳಗಾಗಲು ಹಿಂದೇಟು ಹಾಕುತ್ತಿದ್ದಾರೆ.

ಈ ಪರೀಕ್ಷೆಯಿಂದ ಕೇವಲ ಅರ್ಧ ಗಂಟೆಯಲ್ಲಿ ಪರೀಕ್ಷೆಯ ಫಲಿತಾಂಶ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಭಯಬೀತರಾಗಿದ್ದು, ಈಗಾಗಲೇ ಅವಳಿ ನಗರದ 20ಕ್ಕೂ ಹೆಚ್ಚು ಅಂಗಡಿಗಳ 50ಕ್ಕೂ ಹೆಚ್ಚು ಸಿಬ್ಬಂದಿಗೆ ಪಾಸಿಟಿವ್‌ಬಂದಿದೆ. ಪಾಸಿಟಿವ್‌ ಕಾರಣದಿಂದ ಅವರ ಅಂಗಡಿಗಳನ್ನು ಹತ್ತು ದಿನಗಳ ಕಾಲ ಸೀಲ್‌ಡೌನ್‌ ಮಾಡಲಾಗುತ್ತಿದೆ. ಈ ವಿಷಯದಲ್ಲೂ ವ್ಯಾಪಾರಸ್ಥರಿಗೆ ಅಸಮಾಧಾನವಿದೆ. ಬಹುತೇಕ ಸರ್ಕಾರಿ ಕಚೇರಿಯಲ್ಲಿ ಕೋವಿಡ್‌ ಬಂದರೂ ಒಂದೂ ದಿನ ಬಂದ್‌ ಮಾಡದೇ ಸ್ಯಾನಿಟೈಸ್‌ ಮಾಡಿ ಕೈ ಬಿಡಲಾಗಿದೆ. ಆದರೆ, ನಮ್ಮ ಅಂಗಡಿಗಳನ್ನು ಹಲವು ದಿನಗಳ ವರೆಗೆ ಬಂದ್‌ ಮಾಡಲು ಆದೇಶಿಸಲಾಗಿದ್ದು ಇದು ಯಾವ ನ್ಯಾಯ? ಈಗಾಗಲೇ ನಾಲ್ಕು ತಿಂಗಳ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವ್ಯಾಪಾರವಿಲ್ಲದೇ ಕಂಗಾಲಾಗಿದ್ದು, ಇದೀಗ ಪಾಸಿಟಿವ್‌ ಹೆಸರಿನಲ್ಲಿ ಮತ್ತೆ ಅಂಗಡಿಗಳನ್ನು ಬಂದ್‌ ಮಾಡಲಾಗುತ್ತಿದೆ ಈ ಕುರಿತು ಜಿಲ್ಲಾಡಳಿತ ಮರು ಪರಿಶೀಲಸಬೇಕೆಂದು ವ್ಯಾಪಾರಸ್ಥರು ಆಗ್ರಹಿಸುತ್ತಾರೆ.

ಆ್ಯಂಟಿಜನ್‌ ಪರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಭೆ ನಡೆಸಿದಾಗ, ಯಾವುದೇ ಕಾರಣಕ್ಕೂ ಒತ್ತಾಯದಿಂದ ಪರೀಕ್ಷೆ ಮಾಡಿಸದೆ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಹೇಳಿದ್ದರು. ಇದೀಗ ಕಡ್ಡಾಯವಾಗಿ ಅಂಗಡಿಗೆ ಪೊಲೀಸರೊಂದಿಗೆ ಬಂದು ಲಕ್ಷಣ ಇದ್ದವರು, ಇಲ್ಲದೇ ಇದ್ದವರು ಎಲ್ಲರಿಗೂ ಪರೀಕ್ಷೆ ಮಾಡಲಾಗುತ್ತಿದೆ. ಇದರಿಂದ ಯಾವುದೇ ರೀತಿಯ ಕೊರೋನಾ ನಿಯಂತ್ರಣ ಆಗೋದಿಲ್ಲ. ಜತೆಗೆ ಪಾಸಿಟಿವ್‌ ಬಂದ ನಂತರ ಆ ವ್ಯಕ್ತಿಯನ್ನು ಆ್ಯಂಬುಲೆನ್ಸ್‌ ಮೂಲಕ ಕರೆದೊಯ್ಯದೆ ಮನೆಗೆ ಹೋಗಿ ಐಸೋಲೇಶನ್‌ ಆಗು ಎಂದು ಹೇಳಿ ಕಳುಹಿಸುತ್ತಿದ್ದಾರೆ. ಹೀಗಾಗಿ ಈ ಪರೀಕ್ಷೆಯ ಪ್ರಯೋಜನ ಏನು ಎಂದು ಬಟ್ಟೆಅಂಗಡಿಯ ವ್ಯಾಪಾರಸ್ಥರೊಬ್ಬರು ಪ್ರಶ್ನಿಸಿದರು.