ಹಾಸನ: ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ದಾಳಿಗೆ ಮೃತಪಟ್ಟಿದ್ದ ಕೂಲಿ ಕಾರ್ಮಿಕ । ಆನೆಗಳು ಹಿಂಡಾಗಿ ಓಡಾಡುತ್ತಿದ್ದರೂ ಯಾವುದೇ ಕ್ರಮವಿಲ್ಲ । ಬೆಳೆ ನಾಶ । ಪರಿಹಾರಕ್ಕೆ ಆಗ್ರಹ 

Outrage against the Government of Karnataka For Person Dies Due to Elephant Attack in Hassan grg

ಬೇಲೂರು(ಜ.06):  ತಾಲೂಕಿನ ಮತ್ತಾವರದಲ್ಲಿ ಗುರುವಾರ ಸಂಜೆ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆಗೆ ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಾವರ ಗ್ರಾಮದ ವಸಂತ (43) ಮೃತಪಟ್ಟ ವ್ಯಕ್ತಿ. ಸಂಜೆಯ ವೇಳೆ ತೋಟದ ಮನೆಯಲ್ಲಿದ್ದ ವಸಂತ ಅವರ ಮೇಲೆ ಒಂಟಿ ಆನೆಯೊಂದು ಏಕಾಏಕಿ ದಾಳಿ ಮಾಡಿದೆ. ಸೊಂಡಿಲಿನಿಂದ ತಳ್ಳಿ, ತುಳಿದಿದೆ. ಇದರಿಂದ ವಸಂತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಜೊತೆಗೆ ಇದ್ದ ಪ್ರತ್ಯಕ್ಷದರ್ಶಿ ಕಾರ್ಮಿಕ ತಿಳಿಸಿದ್ದಾರೆ. ಬಿಕ್ಕೋಡು ಭಾಗದಲ್ಲಿ ಕಾಡಾನೆಗಳು ಹಿಂಡಾಗಿ ಓಡಾಡುತ್ತಿದ್ದು, ಅದರಲ್ಲಿನ ಒಂದು ಆನೆ ಮತ್ತಾವರದ ಬಳಿ ಬಂದು ದಾಳಿ ಮಾಡಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಹಾಸನ ಆನೆ ದಾಳಿ: ಮರವೇರಿದರೂ ಬಿಡಲಿಲ್ಲ, ಮೇಲಿಂದ ಕೆಡವಿ ಹೊಟ್ಟೆ ಮೇಲೆ ಕಾಲಿಟ್ಟೇಬಿಡ್ತು ಕಾಡಾನೆ!

ಆನೆ ದಾಳಿಗೆ ನಿರಂತರವಾಗಿ ಸಾವುಗಳು ಸಂಭವಿಸುತ್ತಿದ್ದರೂ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆನೆಗಳನ್ನು ಸ್ಥಳಾಂತರ ಮಾಡದೇ ಇದ್ದರೆ, ತಮ್ಮನ್ನೆಲ್ಲ ಜೆಸಿಬಿ ಮೂಲಕ ಗುಂಡಿ ತೋಡಿ ಮುಚ್ಚಿಬಿಡಿ ಎಂದು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಚೇತನ್ ಕುಮಾರ್ ಮತ್ತು ಗ್ರಾಮಸ್ಥರು ಅಧಿಕಾರಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಬಾರಿ ಆನೆ ದಾಳಿಯಾದಾಗಲೂ ಅಧಿಕಾರಿಗಳು ಗ್ರಾಮಸ್ಥರ ಮೂಗಿಗೆ ತುಪ್ಪ ಸವರುತ್ತಾರೆ. ಬೆಳಿಗ್ಗೆಯಿಂದ ರಸ್ತೆ ತಡೆ ನಡೆಸುತ್ತ ಧಿಕ್ಕಾರ ಕೂಗಿ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಇಲಾಖೆ ಸಚಿವರು ಸ್ಥಳಕ್ಕೆ ಆಗಮಿಸುವವರಿಗೂ ರಸ್ತೆ ತಡೆ ಮುಂದುವರಿಸುತ್ತೇವೆ. ಮೃತ ದೇಹವನ್ನು ತೆಗೆಯಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಮಧ್ಯಾಹ್ನದ ವೇಳೆಗೆ ಪ್ರತಿಭಟನಾರರನ್ನು ಮೋನವಲಿಸಿದ ಶಾಸಕ ಎಚ್.ಕೆ.ಸುರೇಶ್ ಹಾಗೂ ಜಿಲ್ಲಾಧಿಕಾರಿ ಸತ್ಯಭಾಮ ಮೃತ ಕುಟುಂಬಕ್ಕೆ 15 ಲಕ್ಷ ರು. ಚೆಕ್ ವಿತರಿಸಿ ಮಲೆನಾಡು ಭಾಗದ ಹೋಬಳಿಗಳ ಮಟ್ಟದಲ್ಲಿ ಸಮಿತಿ ರಚನೆ ಮಾಡಿ 15 ದಿನಗಳಿಗೊಮ್ಮೆ ಸಭೆ ಆಯೋಜಿಸಲಾಗುವುದು. ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಪ್ರಾರಂಭಿಸಲಾಗುವುದು. ಪ್ರತಿಭಟನೆ ಕೈಬಿಟ್ಟು ಅಂತ್ಯಸಂಸ್ಕಾರಕ್ಕೆ ಸಹಕರಿಸುವಂತೆ ಮನವಿ ಮಾಡಿದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈಬಿಟ್ಟು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು

ಅರಣ್ಯ ಇಲಾಖೆ ವಿರುದ್ಧ ಆಕ್ರೋಶ:

ಪ್ರತಿ ಬಾರಿ ಆನೆ ಇದೆ ಎಂದು ಫೋನ್ ಮಾಡಿದರೆ ಗಂಟೆ ಬಿಟ್ಟು ಬರುವ ಅಧಿಕಾರಿಗಳು ಯಾರಾದರೂ ಮನೆಗೊಂದು ಮರ ಕಡಿಯುತ್ತಿದ್ದರೆ ತಕ್ಷಣವೇ ಆಗಮಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೆದರಿಸುತ್ತಾರೆ. ಬೆಳೆಗಾರರ ಪ್ರಾಣ ಹೋಗುತ್ತಿದೆ ಎಂದರೂ ನಿರ್ಲಕ್ಷ್ಯ ತೋರುತ್ತಾರೆ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಕಿಡಿಕಾರಿದರು.

ಕಾಡಾನೆಯಿಂದ ಬೆಳೆ ನಾಶ:

ಸ್ಥಳೀಯರು ಆನೆ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗಲೇ ಅಧಿಕಾರಿಗಳು ಕ್ರಮ ಕೈಗೊಂಡರೆ ಏನೂ ಆಗುತ್ತಿರಲಿಲ್ಲ. ಪ್ರಾಣ, ಬೆಳೆ ಎರಡೂ ಉಳಿಯುತ್ತಿತ್ತು. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ:

ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಸತ್ಯಭಾಮ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಆನೆಗಳ ಹಿಂಡನ್ನು ಕಾಡಿಗಟ್ಟಲು ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಎಂ.ಎಸ್. ತಹಸೀಲ್ದಾರ್ ಮಮತಾ ಎಂ, ಎಸಿಎಫ್ ಮಹಾದೇವ್ , ಸಿಸಿಎಫ್ ರವಿಶಂಕರ್, ಡಿವೈಎಸ್ಪಿ ಲೋಕೇಶ್ ಸೇರಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು. 

ಹುಟ್ಟಿದ ಒಂದೇ ದಿನಕ್ಕೆ ಗಂಡು ಮಗು ಮಾರಾಟ ಆರೋಪ; ತಾಯಿ ಸೇರಿ ಐವರ ಬಂಧನ!

ಮೃತರಿಗೆ ಪರಿಹಾರ ಹೆಚ್ಚಿಸಬೇಕಿದೆ

‘ರಾತ್ರಿ ಮತ್ತಾವರ ಗ್ರಾಮದ ವಸಂತ್ ಕಾಡಾನೆ ದಾಳಿಗೆ ಸಿಕ್ಕಿ ಮೃತರಾದ ಬಗ್ಗೆ ತಿಳಿದು ನೋವು ತಂದಿದೆ. ಮಲೆನಾಡು ಜನರ ಜೊತೆಗೆ ಸರ್ಕಾರ ನಿಜಕ್ಕೂ ಚೆಲ್ಲಾಟ ಆಡುತ್ತಿರುವ ಪರಿಣಾಮ ಮಾನವ ಮತ್ತು ಪ್ರಾಣಿ ಸಂಘರ್ಷ ಮುಂದುವರೆಯುತ್ತಿದೆ. ಮೃತರಿಗೆ ನೀಡುವ ಪರಿಹಾರ ಹೆಚ್ಚಳ ಮತ್ತು ಬೆಳೆ ನಷ್ಟದ ಪರಿಹಾರ ದುಪ್ಪಟ್ಟು ಮಾಡುವ ಬಗ್ಗೆ ಪ್ರಸ್ತಾಪಿಸಿದ್ದೇನೆ’ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

‘ಸರ್ಕಾರದ ಜಾಣ ಮೌನದಿಂದಲೇ ಕಾಫಿ ತೋಟದ ಕೂಲಿ‌ ಕಾರ್ಮಿಕರು ಮತ್ತು ಬೆಳೆಗಾರರು ಕಾಡಾನೆ ಸಿಕ್ಕಿ ಮೃತಪಟ್ಟಿದ್ದಾರೆ. ಕಾಡಾನೆ ಭಯದಿಂದ ಕಾಫಿ ತೋಟಕ್ಕೆ ಯಾವ ಕೂಲಿ ಕಾರ್ಮಿಕರು ಬರುತ್ತಿಲ್ಲ. ಕಾಡಾನೆ ಸ್ಥಳಾಂತರ ನಂತರ ರೆಡಿಯೋ ಕಾಲರ್ ಅಳವಡಿಕೆ ಸ್ಥಗಿತಗೊಂಡಿದೆ. ನಮಗೆ ಶಾಶ್ವತ ಪರಿಹಾರ ‌ನೀಡಿ ಇಲ್ಲವೇ ನಮ್ಮನ್ನೇ ಸ್ಥಳಾಂತರ ಮಾಡಬೇಕು ಎಂದು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಚೇತನ್ ಕುಮಾರ್ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios