ಹಾಸನ ಆನೆ ದಾಳಿ: ಮರವೇರಿದರೂ ಬಿಡಲಿಲ್ಲ, ಮೇಲಿಂದ ಕೆಡವಿ ಹೊಟ್ಟೆ ಮೇಲೆ ಕಾಲಿಟ್ಟೇಬಿಡ್ತು ಕಾಡಾನೆ!

ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಮಾನವ ಸಾವು ಪ್ರಕರಣ ಸರಣಿ ಮುಂದುವರೆದಿದೆ. ಕಾಫಿ ತೋಟದ ಕಾರ್ಮಿಕನ ಮೇಲೆ ದಾಳಿ ಮಾಡಿದ ಕಾಡಾನೆ, ಮರವೇರಿದರೂ ಬಿಡದೇ ಬೀಳಿಸಿ ತುಳಿದು ಸಾಯಿಸಿದೆ. 

Hassan district Coffee estate labour died on forest elephant attack at Mattavara Village sat

ಹಾಸನ‌ (ಜ.04): ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ರೈತ ಕಾರ್ಮಿಕ ಬಲಿಯಾಗಿದ್ದಾನೆ. ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸ್‌ ಬರುವ ವೇಳೆ ಕಾಡಾನೆ ದಾಳಿ ಮಾಡಲು ಮುಂದಾಗಿದೆ. ಆಗ, ಕಾರ್ಮಿಕ ಪಕ್ಕದಲ್ಲಿದ್ದ ಮರವನ್ನೇರಿ ಕುಳಿತರೂ ಬಿಡದೇ ಆತನನ್ನು ಮರದಿಂದ ಕೆಳಗೆ ಬೀಳಿಸಿ ಹೊಟ್ಟೆಯ ಮೇಲೆ ಕಾಲಿಟ್ಟು ಸಾಯಿಸಿ ಹೋಗಿದೆ.

ಕಾಡಾನೆ ದಾಳಿಯ ಪ್ರಮಾಣ ರಾಜ್ಯದಲ್ಲಿ ಮಿತಿ ಮೀರುತ್ತಿದೆ ಎಂದರೂ ತಪ್ಪಾಗಲಾರದು. ರಾಮನಗರ ಜಿಲ್ಲೆಯ ಕನಕಪುರ, ಚನ್ನಪಟ್ಟಣ ತಾಲೂಕಿನ ಕಾಡಂಚಿನ ಗ್ರಾಮಗಳು, ಹಾಸನ ಜಿಲ್ಲೆಯ ಕಾಡಂಚಿನ ಗ್ರಾಮಗಳು, ಚಾಮರಾಜನಗರ, ಮಂಡ್ಯ, ಮೈಸೂರು, ಚಿಕ್ಕಮಗಳೂರು ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿಗೆ ಹಲವು ಜನರು ಬಲಿಯಾಗುತ್ತಲೇ ಇದ್ದಾರೆ. ಇನ್ನು ಸರ್ಕಾರದಿಂದ ಕಾಡಾನೆ ದಾಳಿ ತಪ್ಪಿಸಲು ನೆಪ ಮಾತ್ರಕ್ಕೆ ಎಲೆಫ್ಯಾಂಟ್‌ ಟಾಸ್ಕ್‌ ಫೋರ್ಸ್‌ ರಚನೆ ಮಾಡಿದೆ. ಆದರೆ, ಈ ಟಾಸ್ಕ್‌ ಫೋರ್ಸ್‌ ಈವರೆಗೆ ಕಾಡಾನೆ ದಾಳಿ ತಪ್ಪಿಸಿದ್ದೇವೆ ಎಂಬ ಒಂದೇ ಒಂದು ಕಾರ್ಯಾಚರಣೆ ಮಾಡಿದ ಉದಾಹರಣೆಯೂ ಸಿಕ್ಕಿಲ್ಲ.

ಸಾರಿಗೆ ಸಚಿವರೇ ಇಲ್ನೋಡಿ... ನಮ್ಮ ಭದ್ರತೆಗಾಗಿ ಮರಕಮದಿನ್ನಿ ಗ್ರಾಮಕ್ಕೊಂದು ಬಸ್‌ ಬಿಡಿ: ವಿದ್ಯಾರ್ಥಿನಿಯರ ಮನವಿ!

ಈಗ ಹಾಸನ‌ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಕಾಫಿ ತೋಟಕ್ಕೆ ತೆರಳಿದ್ದ ಕಾರ್ಮಿಕ ವಸಂತ್ (45) ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದಾನೆ. ಹಾಸನ‌ ಜಿಲ್ಲೆ ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ಘಟನೆ ನಡೆದಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವಸಂತ್, ಕೆಲಸ ಮುಗಿಸಿ ವಾಪಸ್ ಮನೆಗೆ ಬರುವ ವೇಳೆ‌ ಕಾಡಾನೆ ದಾಳಿ ಮಾಡಿದೆ. ಈ ವೇಳೆ ಮರವೇರಿ ಕುಳಿತ ಕಾರ್ಮಿಕ ವಸಂತ್ ಸಹಾಯಕ್ಕೆ ಕೂಗಿಕೊಂಡಿದ್ದಾನೆ. ಆಗ, ಸ್ಥಳೀಯರು ಆನೆ ಓಡಿಸಲು ಪ್ರಯತ್ನ ಮಾಡಿದರೂ ಒಂಟಿ ಸಲಗ ಕ್ಯಾರೇ ಎಂದಿಲ್ಲ.

ಕೂಡಲೇ ಜಿಲ್ಲೆಯ ಆನೆ ಕಾರ್ಯಪಡೆ (Elephant Task Force) ತಂಡಕ್ಕೆ ಸ್ಥಳೀಯರು ಕರೆ ಮಾಡಿ ಆನೆಯಿಂದ ಕಾರ್ಮಿಕನನ್ನು ರಕ್ಷಣೆ ಮಾಡುವಂತೆ ಗೋಗರೆದಿದ್ದಾರೆ. ಆದರೆ, ಬಲಿಷ್ಠ ಆನೆಯ ಅಟ್ಟಹಾಸ ಹೆಚ್ಚಾಗಿತ್ತು. ಇತ್ತ ಆನೆ ಕಾರ್ಯಪಡೆಯ ಅರಣ್ಯ ಇಲಾಖೆ ಸಿಬ್ಬಂದಿಯೂ ಬರಲಿಲ್ಲ. ಸಣ್ಣ ಮರವನ್ನೇರಿ ಕುಳಿತ ಕಾರ್ಮಿಕ ಜೀವ ರಕ್ಷಣೆಗೆ ಬೇಡಿಕೊಳ್ಳುತ್ತಿದ್ದನು. ಜೊತೆಗೆ, ಸ್ಥಳೀಯರು ಆನೆಯನ್ನು ಅಲ್ಲಿಂದ ಓಡಿಸಲು ಮಾಡಿದ ಪ್ರಯತ್ನಗಳೆಲ್ಲವೂ ತನ್ನ ಮೇಲೆ ದಾಳಿಗೆ ಬರುತ್ತಾರೆಂದು ಆನೆ ಮತ್ತಷ್ಟು ಸಿಟ್ಟಿಗೇಳಲು ಕಾರಣವಾಗಿದೆ.

ಮರವನ್ನೇರಿ ಕುಳಿತ ಕಾರ್ಮಿಕನನ್ನು ಕೊಂದೇ ಕಾಲು ಕೀಳುವುದಾಗಿ ಹಠವಿಡಿದಂತೆ ಕಾಣುತ್ತಿದ್ದ ಮದಗಜ ಮರವನ್ನು ಅಲುಗಾಡಿಸಿದೆ. ಇನ್ನು ಮರ ಬೀಳುವ ಮಟ್ಟಕ್ಕೆ ಅಲುಗಾಡಿಸಿದ್ದರಿಂದ ಮರದ ಮೇಲಿದ್ದ ಕಾರ್ಮಿಕ ಧೊಪ್ಪನೆ ನೆಲಕ್ಕೆ ಬಿದ್ದಿದ್ದಾನೆ, ಕ್ಷಣ ಮಾತ್ರದಲ್ಲಿ ಆತನ ಮೇಲೆ ದಾಳಿ ಮಾಡಿದ ಆನೆ, ಹೊಟ್ಟೆಯ ಮೇಲೆ ಕಾಲಿಟ್ಟು ತುಳಿದು ಸಾಯಿಸಿದೆ. ನಂತರ, ಅರಣ್ಯ ಇಲಾಖೆ ಸಿಬ್ಬಂದಿ ಬರುವ ವೇಳೆಗಾಗಲೇ ಅಲ್ಲಿಂದ ಪರಾರಿ ಆಗಿದೆ. ಇನ್ನು ಗ್ರಾಮಸ್ಥರು ಬಂದು ಆತನನ್ನು ರಕ್ಷಣೆ ಮಾಡಬೇಕೆನ್ನುವಷ್ಟರಲ್ಲಿ ಕಾರ್ಮಿಕ ವಸಂತನ ಪ್ರಾಣಪಕ್ಷಿ ಹಾರಿ ಹೋಗಿತ್ತು. 

ಬರ ಪರಿಹಾರ ಕೊಡದೇ, ಆಧಾರ ಜೋಡಣೆ ಕುಂಟು ನೆಪ ಹೇಳಿದ ಸರ್ಕಾರಕ್ಕೆ ಛೀಮಾರಿ ಹಾಕಿದ ಮಾಜಿ ಸಿಎಂ!

ಮರ ಕಡಿದು ಅಮಾನತ್ತಾದ ಅಧಿಕಾರಿಗಳು ಪ್ರಾಣ ರಕ್ಷಣೆಗೆ ಎಲ್ಲಿಂದ ಬರ್ತಾರೆ?:  ಇನ್ನು ಹಾಸನದ ಬೇಲೂರು ತಾಲೂಕಿನಲ್ಲಿ ರಸ್ತೆ ಬದಿಯ ಅರಣ್ಯ ಪ್ರದೇಶದ ಮರಗಳನ್ನು ಕಡಿದ ಪ್ರಕರಣವೊಂದರಲ್ಲಿ ನಿರ್ಲಕ್ಷ್ಯದ ಆರೋಪದ ಮೇಲೆ ಆರ್‌ಎಫ್‌ಒ, ಡಿಆರ್‌ಎಫ್‌ಒ ಸೇರಿ ಹಲವು ಸಿಬ್ಬಂದಿ ಅಮಾನತು ಆಗಿದ್ದಾರೆ. ಆದ್ದರಿಂದ ಆನೆಯಿಂದ ರಕ್ಷಣೆ ಮಾಡುವಂತೆ ಸ್ಥಳೀಯರಿ ಮನವಿ ಮಾಡಿದರೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ. ಹೀಗಾಗಿ, ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಮಾನವ ಸಾವು ಪ್ರಕರಣ ಸರಣಿಯಂತೆ ನಡೆಯುತ್ತಲೇ ಇದೆ. ಅರೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಕಾಡಾನೆ ಹಾವಳಿ ನಿಯಂತ್ರಣ ಮಾಡದ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

Latest Videos
Follow Us:
Download App:
  • android
  • ios