ದಲಿತರನ್ನು ಸಿಎಂ ಮಾಡುವ ಪಕ್ಷಕ್ಕೆ ನಮ್ಮ ಮತ: ಆದಿಜಾಂಬವ ಶ್ರೀ
ಯಾರು ದಲಿತರನ್ನು ಮುಖ್ಯಮಂತ್ರಿ ಮಾಡುತ್ತಾರೋ ಅಂತಹ ಪಕ್ಷಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಆದಿಜಾಂಬವ ಬೃಹನ್ಮಠದ ಶಿವಮುನಿ ಸ್ವಾಮೀಜಿ ತಿಳಿಸಿದರು.
ತಿಪಟೂರು : ಯಾರು ದಲಿತರನ್ನು ಮುಖ್ಯಮಂತ್ರಿ ಮಾಡುತ್ತಾರೋ ಅಂತಹ ಪಕ್ಷಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಆದಿಜಾಂಬವ ಬೃಹನ್ಮಠದ ಶಿವಮುನಿ ಸ್ವಾಮೀಜಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಕರ್ನಾಟಕ ಭೀಮ್ ಸೇನೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಮೊದಲನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಲಿತರನ್ನು ಕೇವಲ ಮತ ಬ್ಯಾಂಕ್‌ಗಾಗಿ ಆರಿಸಿಕೊಳ್ಳುತ್ತಿದ್ದು, ಮುಂಬರುವ ಯಾವುದೇ ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಯಲ್ಲಿ ದೇಶದ ಪ್ರತಿಷ್ಠಿತ ಹುದ್ದೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಹುದ್ದೆಗಳನ್ನು ಯಾವ ಪಕ್ಷ ದಲಿತರಿಗೆ ನೀಡುತ್ತದೆಯೋ ಅಂತಹ ಪಕ್ಷಕ್ಕೆ ದಲಿತರ ಸಂಪೂರ್ಣ ಬೆಂಬಲ ದೊರೆಯಲಿದೆ. ಡಾ. ಅಂಬೇಡ್ಕರ್‌ರವರ ಹಾದಿಯಲ್ಲಿ ಸಾಗುವಂತಹ ಪ್ರತಿಯೊಂದು ದಲಿತ ಸಮಾಜವು ಅತ್ಯಂತ ನಿಕೃಷ್ಟ ಜೀವನವನ್ನು ನಡೆಸುತ್ತಿದ್ದು, ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ದಲಿತರನ್ನು ಮತ ಬ್ಯಾಂಕ್ ಆಗಿ ಪರಿವರ್ತನೆ ಮಾಡುತ್ತಿರುವುದು ಶೋಚನಿಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಷಡಕ್ಷರ ಮಠದ ಡಾ. ರುದ್ರಮುನಿ ಸ್ವಾಮೀಜಿ ಮಾತನಾಡಿ, ಕರ್ನಾಟಕ ಭೀಮಸೇನೆಯು ಒಂದು ವರ್ಷದ ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಮುಂದೆಯೂ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಶುಭ ಕೋರಿದರು.
ಕರ್ನಾಟಕ ಭೀಮಸೇನೆ ತಾಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಕರ್ನಾಟಕ ಭೀಮಸೇನೆ ಒಂದು ಯಶಸ್ವಿ ವರ್ಷದ ಸಂಪೂರ್ಣ ಅವಧಿಯನ್ನು ಮುಕ್ತಾಯಗೊಳಿಸಿದ್ದು, ಈ ನಡುವೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಂದೆಯೂ ಸಂಘದ ವತಿಯಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕುಂದೂರು ತಿಮ್ಮಯ್ಯ, ತಾಲೂಕು ಅಧ್ಯಕ್ಷ ನಾಗತಿಹಳ್ಳಿ ಕೃಷ್ಣಮೂರ್ತಿ, ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಪುನೀತ್ ರಾಜಕುಮಾರ್ ಜನ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ಜಗದೀಶ್, ಮುಖಂಡರಾದ ಮುರಳಿ ಕುಂದೂರು, ಲಕ್ಷ್ಮಯ್ಯ, ರವಿಕುಮಾರ್, ರಂಗಸ್ವಾಮಿ, ಆನಂದ್, ವೆಂಕಟೇಶ್ ಮತ್ತಿತರರಿದ್ದರು.