ತಿಪಟೂರು(ಜು.05): ರಾಜ್ಯದಲ್ಲಿ ಬಿಜೆಪಿಯು ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ನಿರಂತರವಾಗಿ ಹಲ್ಲೆ, ದಬ್ಬಾಳಿಕೆ, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಹೊರಟ್ಟಿದೆ. ಅದಕ್ಕೆ ತಿಪಟೂರಿನ ಶಾಸಕರು ಮಾಡಿರುವ ಹಲ್ಲೆ, ದಬ್ಬಾಳಿಕೆಯೇ ಸ್ಪಷ್ಟನಿದರ್ಶನವಾಗಿದೆ. ಹಲ್ಲೆಗೊಳಗಾಗಿರುವ ನಮ್ಮ ಪಕ್ಷದ ಕಾರ್ಯಕರ್ತರ ಪರವಾಗಿ ನಮ್ಮ ಪಕ್ಷ ಹಾಗೂ ರಾಜ್ಯ ಮುಖಂಡರು ಇದ್ದಾರೆ ಎಂದು ರಾಜ್ಯ ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ಗಂಭೀರ ಆರೋಪ ಮಾಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವ ವೇಳೆ ಕೆಪಿಸಿಸಿ ಸದಸ್ಯ ಹಾಗೂ ಇಲ್ಲಿನ ನಗರಸಭಾ ಸದಸ್ಯ ಯೋಗೇಶ್‌ ಮೇಲೆ ಶಾಸಕ ನಾಗೇಶ್‌ ಹಾಗೂ ಅವರ ಬೆಂಬಲಿಗರು ಹಲ್ಲೆ ಮಾಡಿರುವುದನ್ನು ಕೆಪಿಸಿಸಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗಂಭೀರ ಪ್ರಕರಣ ಎಂದೇ ತೆಗೆದುಕೊಂಡಿದ್ದಾರೆ. ನಮ್ಮ ಪಕ್ಷದ ಸದಸ್ಯರನ್ನು ಅವರ ವಾರ್ಡ್‌ ಕಾಮಗಾರಿ ಪೂಜೆಗೆ ಕರೆಯದೆ ಶಾಸಕರೇ ತಪ್ಪು ಮಾಡಿದ್ದಲ್ಲದೇ, ಇದನ್ನು ಪ್ರಶ್ನಿಸಿದಕ್ಕೆ ಏಕವಚನ ಪ್ರಯೋಗಿಸಿದ್ದಲ್ಲದೆ ಕೈ ಮಾಡಿರುವುದು ಶಾಸಕರ ಸಂಸ್ಕೃತಿ ಎಂಥಹದ್ದೆಂದು ತೋರಿಸುತ್ತದೆ ಎಂದರು.

ಕಲಬುರಗಿಯಲ್ಲಿ ಮುಂದುವರಿದ ಹೆಮ್ಮಾರಿ ಮರಣ ಮೃದಂಗ: ಬೆಚ್ಚಿಬಿದ್ದ ಜನತೆ

ಅಲ್ಲದೇ, ಸದಸ್ಯರ ಜೊತೆಗಿದ್ದ ಪಕ್ಷದ ತಾಲೂಕು ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ ಸುನಿಲ್‌ರವರು ಘಟನೆಯನ್ನು ವಿಡಿಯೋ ಮಾಡುವಾಗ ಅವರ ಮೊಬೈಲ್‌ಗೆ ಹೊಡೆದು ಬಿಸಾಕಿರುವುದು ಅತ್ಯಂತ ಖಂಡನೀಯ. ಕಾಂಗ್ರೆಸ್‌ ಕಾರ್ಯಕರ್ತರು, ಜನಪ್ರತಿನಿಧಿಗಳೆಂದರೆ ಇಲ್ಲಿನ ಶಾಸಕರಿಗೆ ಅದೆಂತಹ ಮತ್ಸರವಿರಬಹುದೆಂದು ಯಾರಾದರೂ ಬಾವಿಸಬಹುದು. ಶಾಸಕರ ಪ್ರಕಾರ ಕಾಮಗಾರಿಗೆ ವಿಶೇಷ ಅನುದಾನ ತಂದಿದ್ದು, ಇದಕ್ಕೆ ವಾರ್ಡ್‌ ಸದಸ್ಯರನ್ನು ಕರೆಯಬಾರದೆನ್ನುವುದಕ್ಕೆ ಆ ಹಣ ನಮ್ಮ ಕರ್ನಾಟಕ ಸರ್ಕಾರದ್ದೋ ಅಥವಾ ವಿದೇಶದ್ದೋ ಎಂದು ಅವರೇ ಹೇಳಬೇಕು ಎಂದರು.

ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗೆ ನೀವೆಲ್ಲಾ ಸದಸ್ಯರೇ ಅಲ್ಲ ಎಂದಿದ್ದು, ಕಳೆದ ಚುನಾವಣೆಯಲ್ಲೇ ಗೆದ್ದಿರುವ ಎಲ್ಲ ಸದಸ್ಯರನ್ನು ಅವಮಾನ ಮಾಡಿದಂತೆ. ಶಾಸಕರ ವಿರುದ್ಧ ಪ್ರಕರಣ ದಾಖಲಾಗಿ ಒಂದು ದಿನವಾದರೂ ಇಲ್ಲಿನ ಪೊಲೀಸರು ಇನ್ನೂ ಪ್ರಕರಣ ದಾಖಲು ಮಾಡಿಲ್ಲ ಎಂದು ದೂರಿದರು.

ಕಲಬುರಗಿ: ಕೊರೋನಾದಿಂದ ಗುಣಮುಖರಾಗಿದ್ದ ವ್ಯಕ್ತಿ ಸಾವು

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ಇಲ್ಲಿನ ಶಾಸಕರು ಹಾಗೂ ಅವರ ಕಡೆಯವರು ನಗರಸಭಾ ಸದಸ್ಯರ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ. ಅವರು ಶಾಸಕಾರಾದಾಗಿನಿಂದಲೀ ಇಲ್ಲಿನ ಅಮಾಯಕ ಸಾರ್ವಜನಿಕರು, ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಗೂಂಡಾಗಿರಿ ಹೆಚ್ಚಾಗಿದೆ. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಇದೇ ಶಾಸಕರು ಗುತ್ತಿಗೆದಾರರ ಬಳಿ ಶೇ.20ರಷ್ಟುಕಮಿಷನ್‌ ಬಗ್ಗೆ ಮಾತನಾಡಿದಾಗಲೂ ಕಾಂಗ್ರೆಸ್‌ ತೀವ್ರವಾಗಿ ಖಂಡಿಸಿತ್ತು. ಇಲ್ಲಿನ ಪೊಲೀಸರು ಸಹ ಶಾಸಕರ ಕೈಗೊಂಬೆಯಾಗಿದ್ದು, ಜನಸಾಮಾನ್ಯರಿಗಂತೂ ರಕ್ಷಣೆಯೇ ಇಲ್ಲದಂತಾಗಿದೆ. ಅಲ್ಲದೇ, ಸರ್ಕಾರಿ ಕಾರ್ಯಕ್ರಮಕ್ಕೆ ಚುನಾಯಿತ ಸದಸ್ಯರನ್ನು ಕರೆಯದೇ ಅವಮಾನ ಮಾಡಿರುವುದಲ್ಲದೇ, ಜಾತಿ ಹೆಸರಿನಲ್ಲೂ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಮುಖಂಡ ರೇವಣಸಿದ್ದಪ್ಪ, ತಾಪಂ ಅಧ್ಯಕ್ಷ ಶಿವಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎನ್‌. ಕಾಂತರಾಜು, ಮುಖಂಡರಾದ ಆರ್‌.ಡಿ. ಬಾಬು, ಟಿ.ಎನ್‌. ಪ್ರಕಾಶ್‌, ಮಾದಿಹಳ್ಳಿ ಪ್ರಕಾಶ್‌, ಯೋಗೇಶ್‌, ಸಿದ್ದಾಪುರ ಸುರೇಶ್‌, ಮಣಕೀಕೆರೆ ರವಿಕುಮಾರ್‌, ಸುರೇಶ್‌, ಸೈಫುಲ್ಲ, ಸುಜೀತ್‌, ಸುನೀಲ್‌ ಮೇಗಲಮನೆ, ಶ್ರೀನಿವಾಸ್‌, ಶಫಿವುಲ್ಲಾ, ಲೋಕ್‌ನಾಥ್‌ಸಿಂಗ್‌, ಕಾಂತರಾಜು, ಬಸವರಾಜು, ರಾಜಣ್ಣ ಇತರರು ಇದ್ದರು.