2ಎ ಮೀಸಲಾತಿ ಸಭೆ: ಕೂಡಲಸಂಗಮ ಜಯಮೃತ್ಯುಂಜಯ ಶ್ರೀ ವಿರುದ್ಧ ಕಿಡಿ
* ಶ್ರೀಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವೀರಶೈವ ಯುವ ವೇದಿಕೆ
* ಉಪಪಂಗಡ ಸೃಷ್ಟಿಸಿ ರಾಜಕೀಯ ಮಾಡುತ್ತಿರುವ ಜಯಮೃತ್ಯುಂಜಯ ಸ್ವಾಮೀಜಿ
* ಧಿಕ್ಕಾರ ಕೂಗುತ್ತಾ ವೇದಿಕೆಯತ್ತ ನುಗ್ಗಿದ ಯುವಕರ ಗುಂಪು
ಸಕಲೇಶಪುರ(ಸೆ.02): ವೀರಶೈವ ಲಿಂಗಾಯಿತ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸುವ ಅಂಗವಾಗಿ ರಾಜ್ಯಾದ್ಯಂತ ಪ್ರವಾಸ ನಡೆಸುತ್ತಿರುವ ಕೂಡಲಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳಿಗೆ ಪಟ್ಟಣದಲ್ಲಿ ಭಾರೀ ವಿರೋಧ ವ್ಯಕ್ತವಾಯಿತು.
ಬುಧವಾರ ಇಲ್ಲಿ ನಡೆದ ಈ ಕಾರ್ಯಕ್ರಮದ ವೇಳೆ ಶ್ರೀಗಳು ತಮ್ಮ ಈ ಪ್ರವಾಸದಲ್ಲಿ ಎಲ್ಲಾ ವೀರಶೈವ ಲಿಂಗಾಯತ ಮುಖಂಡರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ವೀರಶೈವ ಯುವ ವೇದಿಕೆ ಆಕ್ರೋಶ ವ್ಯಕ್ತಪಡಿಸಿತು. ಸ್ವಾಮೀಜಿಗಳು ಜಾತಿ ಅಳಿಸಿ ಧರ್ಮ ರಕ್ಷಿಸುವ ಕೆಲಸ ಮಾಡಬೇಕು. ಆದರೆ ಜಯಮೃತ್ಯುಂಜಯ ಸ್ವಾಮೀಜಿ ಉಪಪಂಗಡಗಳನ್ನು ಸೃಷ್ಟಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದ ಯುವಕರ ಗುಂಪು ಧಿಕ್ಕಾರ ಕೂಗುತ್ತಾ ವೇದಿಕೆಯತ್ತ ನುಗ್ಗಿದರು. ಈ ವೇಳೆ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸ್ವಾಮೀಜಿಗಳು ಸಭೆಯನ್ನು ಮುಗಿಸಿ ಹೊರಟ ನಂತರ ಯುವಕರನ್ನು ಬಿಡುಗಡೆ ಮಾಡಿದರು.
ಲಿಂಗಾಯತರಿಗೆ 2ಎ ಮೀಸಲು ಬೆಂಬಲಿಸುವ ಪಕ್ಷಕ್ಕೆ ಬೆಂಬಲ: ಕೂಡಲ ಶ್ರೀ
ಏತನ್ಮಧ್ಯೆ, ಈ ಬಗ್ಗೆ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಸಮಾಜ ಆರ್ಥಿಕ,ಸಾಮಾಜಿಕ ಸಂಕಷ್ಟದಲ್ಲಿದ್ದು, 2ಎ ಮೀಸಲಾತಿಗೆ ಹೋರಾಟ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.